ಶಶೀಂದ್ರ ಸಿ.ಎಸ್.
ಚನ್ನಗಿರಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಮಳೆ ಬಂದರೆ ಸಾಕು ಶಾಲಾ ಆವರಣ ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಇಲ್ಲಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೇ ಪ್ರತಿನಿತ್ಯವು ನೂರಾರು ವಿದ್ಯಾರ್ಥಿಗಳು ಕಲಿಕೆಗಾಗಿ ಆಗಮಿಸುತ್ತಾರೆ. ಮಳೆಯಿಂದ ಶಾಲಾ ಕೊಠಡಿಗಳಿಗೆ ಹೋಗುವುದಕ್ಕೆ ಹರಸಾಹಸ ಪಡುವಂತಾಗಿದೆ.
ಪ್ರಮುಖವಾಗಿ ಶಾಲಾ ಆವರಣದಲ್ಲಿ ನೀರು ತುಂಬಿಕೊಂಡು ಎಷ್ಟೋ ವಿದ್ಯಾರ್ಥಿಗಳು ಕಾಲು ಜಾರಿ ಬೀಳುವ ಮೂಲಕ ಮೈ-ಕೈಗೆ ಪೆಟ್ಟು ಮಾಡಿಕೊಂಡಿರುವ ಘಟನೆಗಳು ಸಹ ನಡೆದಿವೆ.
ಸ್ವಚ್ಛತೆ ಮಾಯ: ಎನ್‌ಎಚ್13 ರಸ್ತೆ ಪಕ್ಕದಲ್ಲಿ ಹಾದು ಹೋಗಿರುವ ದೊಡ್ಡ-ದೊಡ್ಡ ಚರಂಡಿಗಳಲ್ಲಿನ ನೀರು ಶಾಲಾ ಆವರಣದಲ್ಲಿ ನುಗುತ್ತಿದ್ದು, ಅದರಲ್ಲಿನ ತಾಜ್ಯವಸ್ತುಗಳಾದ ಕಸ-ಕಡ್ಡಿ, ಪ್ಲಾಸ್ಟಿಕ್ ವಸ್ತುಗಳು ಮತ್ತು ಕೊಳಚೆ ನೀರು ಸಂಗ್ರವಾಗಿ ಕೆಸರುಗದ್ದೆಯಾಗುತ್ತಿದೆ. ಇದರಿಂದ ಸ್ವಚ್ಛತೆ ಮಾಯವಾಗಿ ಸೊಳ್ಳೆಗಳ ನಿರ್ಮಾಣಕ್ಕೆ ರಹದಾರಿಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವುದಕ್ಕೆ ರಹದಾರಿಯಾಗಿದೆ.
ಗಬ್ಬು ನಾರುತ್ತಿರುವ ಶಾಲಾವರಣ: ಮಳೆಯ ನೀರಿನ ಜತೆಯಲ್ಲಿ ಚರಂಡಿಗಳ ಕೊಳಚೆ ನೀರು ಮಿಶ್ರಣವಾಗಿ ಶಾಲಾ ಆವರಣದಲ್ಲಿ ಸೇರುತ್ತಿದ್ದು, ಇದರಿಂದ ಶಾಲಾ ಸುತ್ತಲು ಗಬ್ಬು ವಾಸನೆಯಿಂದ ಶಾಲಾ ಶಿಕ್ಷಕರು ಮತ್ತು ಮಕ್ಕಳು ಶಾಲೆಯಲ್ಲಿ ಕೂತು ಪಾಠ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಬದುಕನ್ನು ಕಿತ್ತುಕೊಳ್ಳುವಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿರುವುದು ವಿಪರ್ಯಸವೇ ಸರಿ.
ಗ್ರಾಮೀಣ ಮಕ್ಕಳೇ ಹೆಚ್ಚು: ಶಿಕ್ಷಣ ಪಡೆಯಲಿಕ್ಕೆ ಗ್ರಾಮೀಣ ಮಕ್ಕಳೇ ಹೆಚ್ಚು ಬರುತ್ತಾರೆ. ಇಲ್ಲಿನ ಅಸ್ವತ್ಛತೆಯಿಂದ ರೋಸಿ ಹೋಗಿರುವ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಮತ್ತು ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ತಕ್ಷಣ ಈ ಸಮಸ್ಯೆಯಿಂದ ಮುಕ್ತಿ ಕಾಣಿಸುವಂತೆ ಶಾಲಾ ಮಕ್ಕಳು ಆಗ್ರಹಿಸಿದ್ದಾರೆ.