ಚನ್ನಗಿರಿ: ವಿದ್ಯಾರ್ಥಿಗಳು ಗುರಿಯನ್ನಿಟ್ಟುಕೊಂಡು ಮುಂದೆ ಸಾಗಬೇಕು. ಆಗ ಮಾತ್ರ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಕಠಿಣ ಶ್ರಮವಿಲ್ಲದೇ ಯಾರೊಬ್ಬರೂ ಸಾಧನೆ ಮೆಟ್ಟಿಲೇರಲು ಸಾಧ್ಯವಿಲ್ಲ. ಅದ್ದರಿಂದ ದೇಶದ ಕೀರ್ತಿ ಯುವಸಮೂಹದ ಸಾಧನೆಯಲ್ಲಡಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅಭಿಪ್ರಾಯಪಟ್ಟರು.
ತಾಲೂಕಿನ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಹಾಗೂ ಕಾಲೇಜ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಡವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ. ಲ್ಯಾಪ್‌ಟಾಪ್ ಬಳಕೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲಿದೆ. ಲ್ಯಾಪ್‌ಟಾಪ್ ಮಾರಿಕೊಳ್ಳುವುದು ಅಥವಾ ದುರ್ಬಳಕೆ ಮಾಡಿಕೊಳ್ಳದೆ ನಿಮ್ಮ ಶೈಕ್ಷಣಿಕ ಬದುಕನ್ನು ಗಟ್ಟಿಗೊಳಿಸುವುದಕ್ಕೆ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವರ್ಷದ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ನೀಡುವಂತೆ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪದವಿ ಪಡೆಯುತ್ತಿರುವ ಎಲ್ಲರಿಗೂ ಲ್ಯಾಪ್‌ಟಾಪ್ ವಿತರಣೆಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸುವುದು ನಮ್ಮ ಜವಬ್ದಾರಿಯಾಗಿದೆ. ಅದೇ ರೀತಿ ಸಾಧನೆ ಮಾಡಿ ಕಾಲೇಜಿಗೆ, ಗ್ರಾಮಕ್ಕೆ ಮತ್ತು ಕುಟುಂಬಕ್ಕೆ ಹೆಸರು ಮತ್ತು ಕೀರ್ತಿ ತರುವ ಕೆಲಸ ನಿಮ್ಮದಾಗಿದೆ. ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಇದಕ್ಕೆ ಹೊಂದಿಕೊಂಡು ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ಬದುಕನ್ನ ಕಟ್ಟಿಕೊಳ್ಳಬೇಕು. ಕೀಳರಿಮೆ ಬಿಟ್ಟು, ಛಲ, ಧೈರ್ಯ ಮತ್ತು ನಿಷ್ಠೆಯಿಂದ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.
ಬಸ್ ನಿಲ್ದಾಣ ಸ್ಥಳದಲ್ಲೇ ಮಂಜೂರು: ವಿದ್ಯಾರ್ಥಿಗಳು ಕಾಲೇಜ್ ಮುಂಭಾಗದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸುವಂತೆ ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿ ಸಿದ ಸಂಸದ ಜಿ.ಎಂ. ಸಿದ್ದೇಶ್ವರ್, ಸ್ಥಳದಲ್ಲಿಯೇ ಹಣ ಮಂಜೂರು ಮಾಡಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಪಿ. ವಾಗೀಶ್, ತಾಪಂ ಅಧ್ಯಕ್ಷ ಉಷಾ ಶಶಿಕುಮಾರ್, ಬಿಜೆಪಿ ಮುಖಂಡ ಕೆ.ಬಸವರಾಜ್, ಗ್ರಾಪಂ ಅಧ್ಯಕ್ಷ ದೇವೆಂದ್ರಪ್ಪ, ಸಿಡಿಪಿ ಅಧ್ಯಕ್ಷ ಹುಚ್ಚಂಗಿ ಪ್ರಸಾದ್, ಪ್ರಾಂಶುಪಾಲ ಡಾ|ಎನ್.ಕರಿಬಸಪ್ಪ, ಷಣ್ಮಖ, ರಾಜ್ ಕುಮಾರ್ ಮತ್ತಿತರರಿದ್ದರು.