Advertisement

ಚನಿಯೋ ಚೋಲಿ

07:20 PM Jun 20, 2019 | mahesh |

ಸಿರಿವಂತ ಸಾಂಪ್ರದಾಯಿಕ ಮೌಲ್ಯದ ಆಚರಣೆಗಳೊಂದಿಗೆ, ಮಹತ್ವಪೂರ್ಣ ಪಾರಂಪರಿಕ, ಸಾಂಸ್ಕೃತಿಕ ಭೂಯಿಷ್ಠತೆಯ ಮೆರುಗನ್ನು ಪಡೆದಿರುವ ಗುಜರಾತಿ ಮಹಿಳೆಯರ ಉಡುಗೆ ತೊಡುಗೆಗಳು ಬಲು ಅಂದ!

Advertisement

ಗುಜರಾತಿ ಮಹಿಳೆಯರ ಸಾಮಾನ್ಯವಾದ ಸಾಂಪ್ರದಾಯಿಕ ಉಡುಗೆ ಚನಿಯೋ, ಚೋಲಿ ಹಾಗೂ ಓಡನಿಗಳನ್ನು ಹೊಂದಿರುತ್ತದೆ. “ಚನಿಯೋ’ ಎಂದರೆ ಗಾಢಬಣ್ಣದ ರಂಗುರಂಗಿನ ಚಿತ್ತಾರಗಳ ಲಂಗ (ಪೆಟ್ಟಿಕೋಟ್‌)ನಂತಹ ಉಡುಗೆ, ವಿಶಿಷ್ಟ ಕಸೂತಿ ವಿನ್ಯಾಸಗಳನ್ನು ಹೊಂದಿರುವ ಕುಪ್ಪಸವೇ “ಚೋಲಿ’ ಹಾಗೂ ಹಗುರವಾದ ಪಾರದರ್ಶಕ ಬಟ್ಟೆ, ತಲೆಯ ಭಾಗವನ್ನು ಅಲಂಕರಿಸುವ ಓಡನಿ.

ಗುಜರಾತಿ ಮಹಿಳೆಯರ ವಸ್ತ್ರಗಳು ಗಾಢ ಬಣ್ಣದ ವೈವಿಧ್ಯ ಹೊಂದಿರುವುದರ ಜೊತೆಗೆ ವಿವಿಧ ಹರಳುಗಳಿಂದ, ಪುಟ್ಟ ಕನ್ನಡಿ (ಮಿರರ್‌ ವರ್ಕ್‌) ಹಾಗೂ ಮಣಿ (ಬೀಡ್‌ ವರ್ಕ್‌)ಗಳಿಂದ ಅಲಂಕೃತವಾಗಿರುತ್ತದೆ. ಬನಿ, ರಬರಿ, ಬವೆಲಿಯಾ ಬಗೆಯ ಕಸೂತಿ ವಿನ್ಯಾಸಗಳು ಅಧಿಕವಾಗಿ ಕಂಡುಬರುತ್ತವೆ. ಹೀಗೆ ಕಸೂತಿ ವಿನ್ಯಾಸಗಳಿಂದ ಚಂದಗೊಳಿಸಿದ ಉಡುಗೆಗಳು ಚಿನ್ನದ ಬಣ್ಣದ ಅಥವಾ ಬೆಳ್ಳಿಯ ಬಣ್ಣದ ಜರಿಗಳಿಂದ ಅಲಂಕೃತಗೊಂಡು ವಿಶೇಷ ಸೊಬಗು ಬೀರುತ್ತವೆ.

ಹೆಚ್ಚಾಗಿ ಬಂಧೇಜ್‌ ಹಾಗೂ ಬಾಂದನಿಗಳ ವಿನ್ಯಾಸಗಳೇ ಅಧಿಕವಾಗಿರುತ್ತವೆ. ಸೂಕ್ಷ್ಮ ಕುಸುರಿ, ನವುರು ಬಟ್ಟೆ , ಹೂವುಗಳ ಚಿತ್ತಾರ, ಭೌಗೋಳಿಕ ವಿನ್ಯಾಸ (ಉದಾ: ತ್ರಿಕೋನ, ಲಂಬಗೆರೆಗಳ ವಿನ್ಯಾಸ) ಇವೂ ಗುಜರಾತಿ ಉಡುಗೆತೊಡುಗೆಯ ವೈಶಿಷ್ಟ್ಯ.

ಕಛ… ಪ್ರದೇಶದ ಗುಜರಾತಿ ಮಹಿಳೆಯರ ಉಡುಗೆಯ ವಿಶಿಷ್ಟತೆಯೆಂದರೆ ಅಭಾ ಹಾಗೂ ಕಂಜರಿ. ಅಭಾ ಎಂದರೆ ಹೊಳೆವ ಗಾಜಿನ ತುಂಡು, ಕನ್ನಡಿಗಳಿಂದ ಪೂರ್ಣವಾಗಿ ವಿನ್ಯಾಸಗೊಂಡ ಆಕರ್ಷಕ ಚೋಲಿ ಅಥವಾ ಕುಪ್ಪಸ. ಕಂಜರಿ ಎಂದರೆ ಸುಂದರ ಕಸೂತಿಯಿಂದ ಅಲಂಕೃತವಾದ ಉದ್ದ ಕುಪ್ಪಸದಂತಹ ವಸ್ತ್ರವಿನ್ಯಾಸ.

Advertisement

ಜಾಟ್‌ ಸಮುದಾಯದ ಗುಜರಾತಿ ಮಹಿಳೆಯರು ಕಪ್ಪು ಅಥವಾ ಕೆಂಪು ಬಣ್ಣದ “ಚುನರಿ’ ಬಳಸುತ್ತಾರೆ.
ರಬರಿ ಸಮುದಾಯದ ಗುಜರಾತಿ ಮಹಿಳೆಯರು ಕಪ್ಪುಮಿಶ್ರಿತ ಬಣ್ಣಗಳುಳ್ಳ , ಕನ್ನಡಿಗಳಿಂದ ಅಲಂಕೃತಗೊಂಡ, ಚುನರಿ ಹೊಂದಿಲ್ಲದ ವಿನ್ಯಾಸದ “ಚೋಲಿ’ (ಕುಪ್ಪಸ) ಬಳಸುತ್ತಾರೆ.
ಹಾಂ! ಗುಜರಾತಿ ಸಾಂಪ್ರದಾಯಿಕ ಉಡುಗೆಯ ವೈಭವ ಕಾಣಸಿಗುವುದೇ ನವರಾತ್ರಿ ಅಥವಾ ದಸರಾದಂತಹ ಹಬ್ಬದ ಸಂದರ್ಭದಲ್ಲಿ. ಈ ಸಂದರ್ಭಗಳಲ್ಲಿ ಮಹಿಳೆಯರು ತುಂಬು ಕಸೂತಿಯಿಂದ ವಿನ್ಯಾಸಗೊಂಡ ಗಾಗ್ರಾ ಅಥವಾ ಲೆಹಂಗಾ ಧರಿಸುತ್ತಾರೆ. ಅದರ ಮೇಲೆ ಬಗೆಬಗೆಯ ವಿನ್ಯಾಸದ ಚೋಲಿ (ಕುಪ್ಪಸ) ಹಾಗೂ ಸುಂದರ ಓಡನಿ ಅಥವಾ ದುಪ್ಪಟ್ಟಾ ಇವುಗಳನ್ನು ಧರಿಸುತ್ತಾರೆ. ಇದು ಹಬ್ಬದ ಮೆರುಗು ಹೆಚ್ಚಿಸುವ ವೈಭವಯುತ ಸಾಂಪ್ರದಾಯಿಕ ಉಡುಗೆ. ಈ ಬಗೆಯ ಗುಜರಾತಿ ಸಾಂಪ್ರದಾಯಿಕ ಉಡುಗೆಗಳು ಇಂದು ಎಲ್ಲೆಡೆಯೂ ಜನಪ್ರಿಯವಾಗಿವೆ. ಸಿನೆಮಾದಲ್ಲಿ ಸೆಲೆಬ್ರಿಟಿ ಮಹಿಳೆಯರು ಧರಿಸುವುದರಿಂದ, ಸಭೆ-ಸಮಾರಂಭ, ಮದುವೆ, ಹಬ್ಬ-ಹರಿದಿನಗಳಲ್ಲಿ ಹೆಣ್ಣು ಮಕ್ಕಳು, ಹದಿಹರೆಯದ ಯುವತಿ ಯರು ಹಾಗೂ ಮಧ್ಯ ವಯಸ್ಸಿನ ಮಹಿಳೆಯರಿಗೂ ಇದು ಅಚ್ಚುಮೆಚ್ಚು.

ಮದುವೆ ಸಮಾರಂಭದ ಗುಜರಾತಿ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಮದುವೆಯ ಸಂದರ್ಭದಲ್ಲಿ ವಿಶಿಷ್ಟ ಸೀರೆಯಂತಹ ಎರಡು ಬಗೆಯ ವಿನ್ಯಾಸಗೊಂಡ ವಸ್ತ್ರವನ್ನು ವಧು ತೊಡುತ್ತಾಳೆ. ಇದಕ್ಕೆ “ಪನೇಟರ್‌’ ಹಾಗೂ “ಘರ್‌ಚೋಲಾ’ ಎಂದು ಕರೆಯಲಾಗುತ್ತದೆ. ಪನೇಟರ್‌ ಬಗೆಯ ಸೀರೆಯು ವಧುವಿಗೆ ತಾಯಿಯ ಕಡೆಯಿಂದ (ತಾಯಿಯ ಸಹೋದರನಿಂದ) ದೊರೆಯುವ ಉಡುಗೊರೆಯಾಗಿದ್ದು ಇದನ್ನು ಮದುವೆಯ ಆರಂಭದಲ್ಲಿ ಧರಿಸಲಾಗುತ್ತದೆ. ಘರ್‌ಚೋಲಾ ಬಗೆಯ ಸೀರೆಯನ್ನು ವರನ ಕಡೆಯವರು ಉಡುಗೊರೆಯಾಗಿ ನೀಡುತ್ತಾರೆ. ಹಾಗೂ ಇದನ್ನು ಮದುವೆಯ ಕೊನೆಯಲ್ಲಿ ಧರಿಸಲಾಗುತ್ತದೆ. ಪನೇಟರ್‌ ಸೀರೆಯನ್ನು ಗಜ್ಜಿ ಸಿಲ್ಕ್ನಲ್ಲಿ ನೇಯಲಾಗಿದ್ದು, ಶುಭ್ರ ಶ್ವೇತ ಬಣ್ಣದ ಮೈಗೆ ಕೆಂಪು ಅಂಚು ಇರುತ್ತದೆ. ಇದಕ್ಕೆ ಚಿನ್ನದ ಬಣ್ಣದ ದಾರದಿಂದ ಚಿತ್ತಾರವನ್ನು , ಮುತ್ತುಹರಳುಗಳಿಂದ ವಿನ್ಯಾಸವನ್ನು ಮಾಡಲಾಗುತ್ತದೆ. ಸ್ವಾತಂತ್ರಾéನಂತರದ ದಿನಗಳಲ್ಲಿ ಹಸಿರು, ಕೇಸರಿ, ಗುಲಾಬಿ ಇತ್ಯಾದಿ ಬಣ್ಣದ ಪನೇಟರ್‌ಧಾರಣೆ ಆರಂಭವಾದರೂ, ಕೆಂಪು ಅಂಚು ಮಾತ್ರ ಇಂದಿಗೂ ಸಾಂಪ್ರದಾಯಿಕವಾಗಿ ಉಳಿದಿದೆ. ಘರ್‌ಚೋಲಾವನ್ನು ಕಛ… ವಿನ್ಯಾಸದ ರೇಶಿಮೆ ಬಟ್ಟೆಯಲ್ಲಿ ಜರತಾರಿ, ಬಾಂದಿನಿ ವಿನ್ಯಾಸ, ಹೂವಿನ, ನವಿಲಿನ ವಿನ್ಯಾಸಗಳೊಂದಿಗೆ ತಯಾರಿಸಲಾಗುತ್ತದೆ. ಮದುವೆ ಸಮಾರಂಭದಲ್ಲಿ ಬಾಂದಿನೀ ಸೀರೆ, ಲೆಹಂಗಾ ಹಾಗೂ ಚೋಲಿ ಧರಿಸುವ ಸಂಪ್ರದಾಯವೂ ಇದೆ.

ಪಟನ್‌ ಪಠೊಲಾ ಸೀರೆ
ಇದು ದುಬಾರಿ ಬೆಲೆಯ ಸೀರೆಯಾಗಿದ್ದು ಗುಜರಾತ್‌ನ ಉತ್ತರ ಭಾಗದಲ್ಲಿರುವ “ಪಠನ್‌’ ಎಂಬ ಪ್ರದೇಶದಲ್ಲಿ ರೇಶಿಮೆಯಲ್ಲಿ ತಯಾರಿಸಲಾ ಗುತ್ತದೆ. ಇದನ್ನು ಮದುವೆಯ ಸಂದರ್ಭದಲ್ಲಿ ಹಿರಿಯ ಮಹಿಳೆಯರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಅಂತೆಯೇ ಅತ್ತೆಯು ಸೊಸೆಗೆ ಸಾಂಪ್ರದಾಯಕ ಉಡುಗೊರೆಯಾಗಿಯೂ ನೀಡುತ್ತಾರೆ. ಇದರ ಮೇಲೆ ವಿಶಿಷ್ಟ ವಿನ್ಯಾಸಗಳಿದ್ದು ಪೋಪಟ್‌ ಕುಂಜರ್‌ (ಗಿಳಿ ವಿನ್ಯಾಸ), ನಾರಿಕುಂಜ್‌ (ಆನೆಯ ವಿನ್ಯಾಸ), ಎಲೆ, ನವಿಲು, ಬಾತುಕೋಳಿಗಳ ವಿನ್ಯಾಸ ಪ್ರಸಿದ್ಧವಾಗಿದೆ. ಇಂದು ಈ ಬಗೆಯ ಶುದ್ಧ ರೇಶಿಮೆ ಸೀರೆ ನೇಯುವ ಮೂರು ಕುಟುಂಬಗಳು ಮಾತ್ರ ಉಳಿದಿವೆ. ಅದರಲ್ಲೂ ಸಾಲ್ವಿ ಕುಟುಂಬದವರು ನೇಯುವ ಪಟನ್‌ಪಠೊಲಾ ಸೀರೆಗೆ ಬಹಳ ಬೇಡಿಕೆಯಿದ್ದು, ಇದನ್ನು ತಯಾರಿಸಲು 10 ತಿಂಗಳಿಂದ 1 ವರ್ಷ ಕಾಲಾವಧಿ ಅವಶ್ಯ! ಪಠನ್‌ ಪಠೊಲಾ ಶುದ್ಧ ರೇಶಿಮೆಯ ಸೀರೆಯ ಬೆಲೆ ಕಡಿಮೆ ಎಂದರೆ ಒಂದು ಲಕ್ಷದಿಂದ ಹಲವು ಲಕ್ಷಗಳಷ್ಟು. ಈ ಸೀರೆ ನೇಯ್ಗೆ ಅಳಿಯದೇ ಉಳಿಸುವ ಸಲುವಾಗಿ ಪಠನ್‌ ಪಠೊಲಾ ಹೆರಿಟೇಜ್‌ ಮ್ಯೂಸಿಯಂ ಸಹಿತ ನಿರ್ಮಿತವಾಗಿದೆ. ಹೀಗೇ ಗುಜರಾತಿ ಮಹಿಳೆಯರ ಉಡುಗೆ ತೊಡುಗೆ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next