Advertisement

“ಅನಿಕೇತನ’ಕ್ಕೆ ಬದಲಾವಣೆ ಸ್ಪರ್ಶ

12:42 AM May 07, 2019 | Lakshmi GovindaRaj |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ತೈಮಾಸಿಕ ಪತ್ರಿಕೆ “ಅನಿಕೇತನ’ಕ್ಕೆ ಹೊಸ ರೂಪ ನೀಡಲಾಗಿದೆ. ಮೂಲ ಸ್ವರೂಪಕ್ಕೆ ಬದಲಾವಣೆ ಸ್ಪರ್ಶ ನೀಡಲಾಗಿದ್ದು, ಅನ್ಯ ಭಾಷೆ ಲೇಖನಗಳನ್ನು ಕೈಬಿಟ್ಟು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರ, ಲೇಖನಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ.

Advertisement

ನಿತ್ಯೋತ್ಸವ ಕವಿ ಕೆ.ಎಸ್‌.ನಿಸಾರ್‌ಅಹಮದ್‌ ಅವರು, ಈ ಹಿಂದೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ “ಅನಿಕೇತನ’ ಪತ್ರಿಕೆಯನ್ನು ಹೊರತಂದಿದ್ದರು. ಮೂರು ತಿಂಗಳಿಗೊಮ್ಮೆ ಬರುತ್ತಿದ್ದ ಪತ್ರಿಕೆ ಕನ್ನಡೇತರ ಭಾಷೆಯ ಅನುವಾದ ಲೇಖನಗಳನ್ನು ಹೊತ್ತು ತರುತ್ತಿತ್ತು. ಭಿನ್ನ ರೀತಿಯ ವೈಚಾರಿಕ ಲೇಖನಗಳ ಅನುವಾದಗಳ ಮಾಲೆ ಅದರಲ್ಲಿ ಅಡಕವಾಗಿರುತ್ತಿತ್ತು.

ಆದರೆ, ಅಕಾಡೆಮಿ ಸ್ಥಾಯಿ ಸಮಿತಿಯಲ್ಲಿ ಅನಿಕೇತನ ಪ್ರತಿಕೆಯಲ್ಲಿನ ಲೇಖನಗಳ ಸ್ವರೂಪ ಬದಲಾವಣೆಗೆ ಒತ್ತಾಯ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಈಗ ಅನಿಕೇತನ ಪತ್ರಿಕೆಯ ವಿಷಯ ಸ್ವರೂಪ ಮತ್ತು ಮೂಲ ಆಕಾರ ಬದಲಿಸಲಾಗಿದೆ.

ಆದ್ಯತೆ ಸಿಗುತ್ತಿರಲಿಲ್ಲ: ಸಾಹಿತ್ಯ ಅಕಾಡೆಮಿ, ಅನಿಕೇತನ ಪತ್ರಿಕೆ ಹೊರ ತಂದಾಗ ಇದರ ಮೂಲ ಆಶಯ ಇಂಗ್ಲಿಷ್‌ ಸೇರಿದಂತೆ ಇತರೆ ಭಾಷೆಯ ಅನುವಾದಿತ ಲೇಖನ, ಕಥೆ, ನಾಟಕಗಳಿಗೆ ಆದ್ಯತೆಯನ್ನು ನೀಡಲಾಗಿತ್ತು. ಹೀಗಾಗಿಯೇ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಮನ್ನಣೆ ಸಿಗುತ್ತಿರಲಿಲ್ಲ.

ಅನ್ಯಭಾಷೆಯಲ್ಲಿರುವ ಕಾವ್ಯ ಸೇರಿದಂತೆ ಹಲವು ವೈಚಾರಿಕ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಕೆಲಸವನ್ನು ಈಗಾಗಲೇ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ ಮಾಡುತ್ತಿದೆ.

Advertisement

ಮತ್ತದೇ ಕೆಲಸವನ್ನು ಸಾಹಿತ್ಯ ಅಕಾಡೆಮಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾಹಿತ್ಯ ಅಕಾಡೆಮಿಯೊಳಗೆ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆ- ಸಾಹಿತ್ಯ- ಸಂಸ್ಕೃತಿಯ ಪತ್ರಿಕೆಯನ್ನಾಗಿ ರೂಪಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಹಿರಿಯ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಯಾವೆಲ್ಲಾ ಬದಲಾವಣೆ: ಅನಿಕೇತನ ಪತ್ರಿಕೆ ಈ ಹಿಂದೆ 1/8 ಡೆಮಿ ಸೈಜ್‌ನಲ್ಲಿ ಬರುತ್ತಿತ್ತು. ಅದನ್ನು ಕೈಬಿಟ್ಟು, ರಾಯಲ್‌ ಸೈಜ್‌ಗೆ ಬದಲಾಯಿಸಲಾಗಿದೆ. ಪತ್ರಿಕೆಯ ಆಕೃತಿ ಜತಗೆ ವಿಷಯ ಆಯ್ಕೆಯಲ್ಲಿ ಸೃಜನ, ಸೃಜನೇತರ ಕ್ಷೇತ್ರಗಳ ಬರಹಕ್ಕೆ ಆದ್ಯತೆ ನೀಡಲಾಗಿದೆ.

ಕನ್ನಡ ಸಾಹಿತ್ಯಲೋಕದಲ್ಲಿ ಛಾಪು ಮೂಡಿಸಿರುವ ಹಿರಿಯ ಸಾಹಿತಿಯೊಬ್ಬರ ಸಂದರ್ಶನ ಹಾಗೂ ಯುವ ಲೇಖಕ ಮತ್ತು ಲೇಖಕಿಯರ ಪರಿಚಯ ಮಾಡಿ ಕೊಡಲಾಗುತ್ತದೆ. ಇದಲ್ಲದೆ, ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ನವ್ಯ ವಿಷಯಗಳಿಗೆ ಮನ್ನಣೆ ನೀಡಲಾಗುತ್ತಿದೆ.

ಅನಿಕೇತನಕ್ಕೆ ಹೆಚ್ಚಿನ ಬೇಡಿಕೆ: ಆರಂಭದಲ್ಲಿ 30ರಷ್ಟಿದ್ದ ಪತ್ರಿಕೆಯ ಚಂದಾದರರ ಸಂಖ್ಯೆ ಇದೀಗ 1300ಕ್ಕೆ ಏರಿಕೆಯಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅನಿಕೇತನ ಪತ್ರಿಕೆಯ ಪ್ರತಿಗಳಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂದಿನ ಸಂಚಿಕೆಯಿಂದ 100 ಪ್ರತಿಗಳನ್ನು ಹೆಚ್ಚಿಗೆ ಮುದ್ರಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂದಾಗಿದೆ.

ಅನೇಕ ಕಾರಣಗಳಿಂದಾಗಿ ನಿಂತು ಹೋಗಿದ್ದ “ಅನಿಕೇತನ’ ತ್ತೈಮಾಸಿಕ ಪತ್ರಿಕೆಗೆ ಹೊಸರೂಪ ನೀಡಲಾಗಿದೆ. ಆಕಾರದ ಜತೆಗೆ, ವಿಷಯಗಳ ಆಯ್ಕೆಯಲ್ಲೂ ಕನ್ನಡ ಭಾಷೆ, ಸಂಸ್ಕೃತಿಗೆ ಆಗ್ಯತೆ ನೀಡಿದ್ದು, ಹೊಸ ಪ್ರಯತ್ನಕ್ಕೆ ಆರಂಭದಲ್ಲೇ ಮನ್ನಣೆ ಸಿಕ್ಕಿದೆ.
-ಅರವಿಂದ ಮಾಲಗತ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next