Advertisement
ಬೆಂಗಳೂರು: ಕಾಡಿನ ಪ್ರಾಣಿಗಳೊಂದಿಗಿನ ಮಾನವ ಸಂಘರ್ಷ ತಪ್ಪಿಸಲು ಸ್ವಯಂಪ್ರೇರಿತವಾಗಿ ಇಡೀ ಗ್ರಾಮವೊಂದು ಕಾಡಿನಿಂದ ನಾಡಿನೆಡೆಗೆ ಹೆಜ್ಜೆಯಿಡುತ್ತಿದೆ. ಆ ಮೂಲಕ ಕಾಡಿನ ವಾಸಿಗಳನ್ನು ನಾಡಿಗೆ ಬರುವಂತೆ ಪ್ರೇರಿಸುತ್ತಿದೆ.
Related Articles
Advertisement
ಮಲೆ ಮಹಾದೇಶ್ವರ ಬೆಟ್ಟದ ಸುತ್ತಮುತ್ತಲು ಚಂಗಡಿ, ಕೊಕಬರೆ, ತೋಕರೆ, ದೊಡ್ಡಾಣೆ, ಹನೂರು, ತುಳಸಿ ಕೆರೆ, ಮೆದಗಾಣೆ, ನಾಗಮಲೆ ಸೇರಿ ಹಲವು ಗ್ರಾಮಗಳಿವೆ. ಪ್ರಾಣಿಗಳ ಜತೆಗಿನ ಸಂಘರ್ಷ ತಪ್ಪಿಸಲು ಮೊದಲ ಹಂತದಲ್ಲಿ ಅರಣ್ಯ ಸಿಬ್ಬಂದಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರು ಪೂರ್ವಜರು ಬಾಳಿದ ನೆಲ ತೊರೆದು, ಬೇರೆಡೆ ಹೋದರೆ ನಮಗೆ ಜೀವನ ನಿರ್ವಹಣೆ ಕಷ್ಟ ಎಂಬ ಕಾರಣಕೊಟ್ಟು ಕಾಡಿನಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಈ ವಿಚಾರದಲ್ಲಿ ಹಲವಾರು ದಿನಗಳಿಂದ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಈ ನಡುವೆ ಚಂಗಡಿ ಗ್ರಾಮಸ್ಥರು ಕಾಡು ತೊರೆದು ನಾಡಿಗೆ ಬರಲು ಸಮ್ಮತಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಪುನರ್ವಸತಿ ಹೇಗೆ?ಕಾಡು ಬಿಟ್ಟು ಬರುವ ಪ್ರತಿ ಕುಟುಂಬಕ್ಕೆ ಸರ್ಕಾರ 15 ಲಕ್ಷ ರೂ.ಗಳಲ್ಲಿ ಪುನರ್ವಸತಿ ಅಥವಾ ಪರಿಹಾರ ನೀಡುತ್ತದೆ. ಅದರಂತೆ ಗ್ರಾಮಸ್ಥರು ನೇರವಾಗಿ 15 ಲಕ್ಷ ರೂ. ಪರಿಹಾರ ಹಣ ಅಥವಾ ಅದೇ ಹಣದಲ್ಲಿ ಸರ್ಕಾರ ವ್ಯಾಪ್ತಿಯ ಜಾಗದಲ್ಲಿ ಮನೆ, ಹೊಲ ಹಾಗೂ ಮೂಲ ಸೌಕರ್ಯ ಕಲ್ಪಿಸಿಕೊಡಲಾಗುತ್ತದೆ. ಪ್ರಸ್ತುತ ಚಂಗಡಿ ಗ್ರಾಮಸ್ಥರು ಪುನರ್ವಸತಿಗೆ ಸಮ್ಮತಿಸಿದ್ದು, 15 ಲಕ್ಷ ರೂ. ನಲ್ಲಿ 5 ಎಕರೆ ಭೂಮಿ, ಒಂದು ಮನೆ, ಉಳಿದ ಹಣವನ್ನು ಗ್ರಾಮಸ್ಥರಿಗೆ ನೀಡಲಾಗುತ್ತಿದೆ. ಸಮೀಪದ ಹೊಸ ತಾಲೂಕು ಕೇಂದ್ರ ಅನೂರಿನ ಕೊಚ್ಚನೂರು ಗ್ರಾಮಪಂಚಾಯ್ತಿ ಬಳಿ 1,600 ಹೆಕ್ಟರ್ ಡೀಮ್ಡ್ ಅರಣ್ಯದಲ್ಲಿ ಜಾಗ ಗುರುತಿಸಿದ್ದು, ಗ್ರಾಮಸ್ಥರು ಖುದ್ದು ಭೇಟಿ ನೀಡಿ ಪರಿಶೀಲಿಸಿ ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಅವರಿಗೆ ಇತರೆ ಇಲಾಖೆಗಳ ಸಹಾಯದಿಂದ ಅವರಿಗೆ ಸಮರ್ಪಕವಾಗಿ ಪುನರ್ವಸತಿ ಕಲ್ಪಿಸುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಮಾನತೆ ಸಾಮರಸ್ಯ
ಚಂಗಡಿ ಗ್ರಾಮದಲ್ಲಿ 720 ಜನಸಂಖ್ಯೆಯಿದ್ದು, 326 ಮತಗಳಿವೆ. ಎಲ್ಲರೂ ಸಂಪೂರ್ಣ ಕೃಷಿಯನ್ನೇ ಆಧರಿಸಿದ್ದಾರೆ. ಹದಿನೈದು ಇಪ್ಪತ್ತು ಎಕರೆ ಭೂಮಿ, ದೊಡ್ಡ ಮನೆ ಹೊಂದಿರುವವರು ಇದ್ದಾರೆ, ಚಿಕ್ಕ ಗುಡಿಸಲಿನ ಕೂಲಿ ಕೂಲಿ ಮಾಡುವವರೂ ಇದ್ದಾರೆ. ಆದರೆ, ಇವರೆಲ್ಲರೂ ಪುನರ್ವಸತಿ ಯೋಜನೆಯಡಿ ಸಮಾನವಾದ ಭೂಮಿ, ಮನೆಯನ್ನು ಪಡೆಯುವ ಮೂಲಕ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೆ ಸಮಾನವಾಗಿ ಯೋಜನೆಯ ಸೌಲಭ್ಯ ಪಡೆಯಲು ಮುಂದಾಗುತ್ತಿರುದ್ದಾರೆ. ಗ್ರಾಮದಲ್ಲಿ ಕಾಡುಪ್ರಾಣಿಗಳ ದಾಳಿ ಸಾಮಾನ್ಯ. ಜತೆಗೆ ರಸ್ತೆ ಸೇರಿ ಯಾವುದೇ ಮೂಲಸೌಕರ್ಯಗಳಿಲ್ಲ. ಮಕ್ಕಳು ಶಾಲೆಗೆ ಕಾಡುದಾರಿಯಲ್ಲಿಯೇ 15-20 ಕಿ.ಮೀ ನಡೆದು ಹೋಗಬೇಕಿದೆ. ಕಾಡನ್ನು ನಾವು ದೇವರು ಎಂದು ಭಾವಿಸುತ್ತೇವೆ. ಹೀಗಾಗಿ ಕಾಡು ಹಾಗೂ ಕಾಡಿನ ಪ್ರಾಣಿಗಳನ್ನು ಸಂರಕ್ಷಿಸುವುದು ಕಾಡ ಮಕ್ಕಳಾಗಿ ನಮ್ಮ ಕರ್ತವ್ಯ. ಹೀಗಾಗಿ ಉಳಿದ ಗ್ರಾಮಗಳನ್ನು ನಮ್ಮ ಜತೆ ಬರುವಂತೆ ಮನವೊಲಿಸುತ್ತಿದ್ದೇವೆ.
– ಜಿ.ಕರಿಯಪ್ಪ, ಚಂಗಡಿ ಗ್ರಾಮದ ನಿವಾಸಿ ವನ್ಯಜೀವ ಹಾಗೂ ಮಾನವ ಸಂಘರ್ಷ ಪರಿಹಾರಕ್ಕಾಗಿ ಅರಣ್ಯ ಇಲಾಖೆ ಪುನರ್ವಸತಿ ಯೋಜನೆ ರೂಪಿಸಿದೆ. ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಅರಣ್ಯ ಪ್ರದೇಶದಲ್ಲಿನ ಗ್ರಾಮಗಳನ್ನು ಮತ್ತೂಂದೆಡೆ ವರ್ಗಾಹಿಸುವುದು ಅನಿವಾರ್ಯವಾಗಿದೆ. ಆದರೆ, ಗ್ರಾಮಸ್ಥರು ಪೂರ್ವಜರ ಸ್ಥಳಗಳನ್ನು ಬಿಟ್ಟುಬರಲು ಸಾಕಷ್ಟು ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಚಂಗಡಿ ಗ್ರಾಮಸ್ಥರ ಮುಂದೆ ಬಂದು ಒಪ್ಪಿಗೆ ಸೂಚಿಸಿದ್ದು, ಈ ಗ್ರಾಮ ಎಲ್ಲರಿಗೂ ಆದರ್ಶವಾಗಲಿದೆ.
-ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೇ ಮಹದೇಶ್ವರ ವನ್ಯಜೀವಿ ಅರಣ್ಯ ವಲಯ. – ಜಯಪ್ರಕಾಶ್ ಬಿರಾದಾರ್