Advertisement
ಈ ವ್ಯವಸ್ಥೆ ವಾಣಿಜ್ಯ ಉದ್ದೇಶಕ್ಕೂ ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ, ಬಾಡಿಗೆ ತಾಯ್ತನಕ್ಕೊಂದು ಕಾನೂನಿನ ಚೌಕಟ್ಟು ಹಾಕಲಾಯ್ತು. ಮಗುವನ್ನು ಪಡೆಯುವ ದಂಪತಿಯ ಬಂಧುವೇ ಬಾಡಿಗೆ ತಾಯಿಯಾಗಬೇಕೆಂಬ ನಿಯಮ ಇದುವರೆಗೂ ಜಾರಿಯಲ್ಲಿತ್ತು. ಅದರಿಂದ ಕೆಲವು ಸಮಸ್ಯೆಗಳು ಉದ್ಭವಿಸಿದ್ದರಿಂದ, ಆ ನಿಯಮಕ್ಕೂ ತಿದ್ದುಪಡಿ ತಂದು ಪ್ರಸ್ತುತ ಹೊಸ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರ ಪಡೆದುಕೊಂಡಿದೆ. ಆದರೆ, ಈಗಿನ ಬದಲಾವಣೆಯಿಂದ ಒಳಿತಾಗಲಿದೆಯೋ, ಕೆಡುಕಾಗಲಿದೆಯೋ ಎಂಬುದೇ ಎಲ್ಲರ ಮುಂದಿರುವ ಪ್ರಶ್ನೆ.
ಒಂದು ಕಾಲದಲ್ಲಿ ವಿದೇಶಿಯರು ಕೂಡ ಬಾಡಿಗೆ ತಾಯಿಗಾಗಿ ಭಾರತಕ್ಕೆ ಬರುತ್ತಿದ್ದರು. ಇಲ್ಲಿನ ಮಹಿಳೆಯರು ಆರ್ಥಿಕ ಅಗತ್ಯಕ್ಕಾಗಿ ಬಾಡಿಗೆ ತಾಯಿಯಾಗಲು ಒಪ್ಪಿಕೊಳ್ಳುತ್ತಿದ್ದರು. ಆದ್ದರಿಂದ ಇದು ವಾಣಿಜ್ಯ ಉದ್ದೇಶ ಹೊಂದಿದೆ ಎಂಬ ಆರೋಪ ಕೇಳಿ ಬಂತು. ಆ ಬಳಿಕ, ಮಗು ಪಡೆಯಲಿಚ್ಛಿಸುವ ದಂಪತಿಯ ಬಂಧುಗಳೇ ಬಾಡಿಗೆ ತಾಯಿ ಆಗಬೇಕು ಅಂತಾಯ್ತು. ಆದರೆ ಈ ವ್ಯವಸ್ಥೆಯಲ್ಲಿ ದಂಪತಿಯ ಖಾಸಗಿತನಕ್ಕೆ ತೊಡಕಾಗುತ್ತಿತ್ತು ಮತ್ತು ಬಾಡಿಗೆ ತಾಯಿಯಾಗುವ ಮಹಿಳೆಯರ ಕೊರತೆಯೂ ಕಾಡಲಾರಂಭಿಸಿತು. ಏನು ಬದಲಾಯ್ತು?
-ಬಾಡಿಗೆ ತಾಯ್ತನ ಮಸೂದೆಯಲ್ಲಾದ ತಿದ್ದುಪಡಿಯಲ್ಲಿ, ಬಾಡಿಗೆ ತಾಯಿಯಾಗುವವರು ದಂಪತಿಯ ಬಂಧುವೇ ಆಗಬೇಕು ಎಂಬ ನಿರ್ಬಂಧ ರದ್ದು ಪಡಿಸಲಾಗಿದೆ. ಆರೋಗ್ಯವಂತಳಾದ ಯಾವ ಮಹಿಳೆಯೂ ಬಾಡಿಗೆ ತಾಯಿಯಾಗಬಹುದು. ಆದರೆ, ವಾಣಿಜ್ಯ ಉದ್ದೇಶ ಇರಬಾರದು ಎಂದೂ ಹೇಳಲಾಗಿದೆ. ಆದರೆ, ವಾಣಿಜ್ಯ ಉದ್ದೇಶವನ್ನು ಗುರುತಿಸುವುದು ಮತ್ತು ತಡೆಯುವುದು ಹೇಗೆ ಎಂಬುದೇ ಈಗಿರುವ ಪ್ರಶ್ನೆ.
Related Articles
Advertisement
-ಮಗುವನ್ನು ಪಡೆಯುವ ದಂಪತಿಯ ಖಾಸಗಿತನಕ್ಕೆ ಹೊಸ ಬದಲಾವಣೆಯಿಂದ ಅನುಕೂಲವಾಗಿದೆ. ಬಂಧುಗಳೇ ಬಾಡಿಗೆ ತಾಯಿಯಾದರೆ, ಆ ಮಗುವನ್ನು ಜೀವನಪೂರ್ತಿ ನೋಡುತ್ತಿರಬೇಕಾದ್ದರಿಂದ ಮಾನಸಿಕ ತೊಳಲಾಟಕ್ಕೆ ಸಿಲುಕಬೇಕಿತ್ತು. ಮಗುವನ್ನು ಪಡೆದ ದಂಪತಿಗೂ ಒಂದು ರೀತಿಯ ಕಿರಿಕಿರಿ. ಬಂಧುವೇ ಅಲ್ಲದ ಮಹಿಳೆಯಿಂದ ಮಗುವನ್ನು ಪಡೆದುಕೊಂಡರೆ ಇಂಥ ಸಮಸ್ಯೆಯಿಲ್ಲ. ಎಷ್ಟೋ ಸಂದರ್ಭದಲ್ಲಿ ಹತ್ತಿರದ ಬಂಧುಗಳಿಂದಲೂ ಬಾಡಿಗೆ ತಾಯಿ ವಿಷಯವನ್ನು ದಂಪತಿ ರಹಸ್ಯವಾಗಿಡಲು ಬಯಸುತ್ತಾರೆ. ಅಂಥವರಿಗೂ ಈಗಿನ ಹೊಸ ಬದಲಾವಣೆಯಿಂದ ತುಂಬಾ ಅನುಕೂಲವಾಗಿದೆ.
– ವಿಧವೆ, ವಿಚ್ಛೇದಿತೆಯರೂ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಮಗು ಪಡೆಯುವ ಏಕೈಕ ಉದ್ದೇಶಕ್ಕಾಗಿ ಮತ್ತೂಂದು ಮದುವೆಯಾಗಬೇಕೆಂದಿಲ್ಲ.
ಕುಟುಂಬ ವ್ಯವಸ್ಥೆಗೆ ಅಪಾಯವೇ?ಸದುದ್ದೇಶದಿಂದ ಬದಲಾವಣೆಗೆ ಒಳಗಾಗಿರುವ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯು ಕಾಯ್ದೆಯಾದ ಬಳಿಕ , ಈ ವ್ಯವಸ್ಥೆ ಮೂಲಕವೇ ಮಗುವನ್ನು ಪಡೆಯಲು ಆರ್ಥಿಕವಾಗಿ ಸದೃಢರಾಗಿರುವವರು ಹೆಚ್ಚು ಆಸಕ್ತಿ ತೋರಿಸಿಯಾರೇ? ಹೆರಿಗೆ ಕಿರಿಕಿರಿ ತಪ್ಪಿಸಿಕೊಳ್ಳಲು ಈ ವ್ಯವಸ್ಥೆ ಬಳಕೆಯಾದೀತೇ? ಆ ಮೂಲಕ ನಿಜವಾದ ತಾಯ್ತನದ ಸುಖ, ಅನುಭವದಿಂದ ನಮ್ಮ ಮುಂದಿನ ತಲೆಮಾರು ವಂಚಿತರಾಗಿ ಅದರ ನೇರವಾದ ಪರಿಣಾಮ ಕುಟುಂಬ ವ್ಯವಸ್ಥೆಯ ಮೇಲೆ ಆಗಲಿದೆಯೇ? ಆದಾಯದ ಮಾರ್ಗವಾಗಿ ಬಳಕೆಯಾದೀತೇ? ಇದೊಂದು ದೊಡ್ಡ ವ್ಯವಹಾರವಾಗಿ ಬದಲಾಗಲಿದೆಯೇ ಮುಂತಾದ ಪ್ರಶ್ನೆಗಳೂ ಈಗ ಉತ್ತರಕ್ಕಾಗಿ ಕಾಯುತ್ತಿವೆ. -ಪುತ್ತಿಗೆ ಪದ್ಮನಾಭ ರೈ