Advertisement

ಸಂವಿಧಾನ ಬದಲಿಸುವುದು ಜನಿವಾರ ಬದಲಿಸಿದಂತಲ್ಲ

05:05 PM Dec 27, 2017 | Team Udayavani |

ಮೈಸೂರು: ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಬೇಕೆಂದು ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಅಭಿವೃದ್ಧಿ ಕನಸು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಂಬೇಡ್ಕರ್‌ರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಆದರೆ, ಅವರ ಸಂಪುಟದಲ್ಲಿರುವ ಸಚಿವ ಅನಂತಕುಮಾರ್‌ ಹೆಗಡೆ ಅವರು ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದರು.

ಜನಿವಾರ ಬದಲಿಸಿದಂತಲ್ಲ: ಸಚಿವ ಅನಂತಕುಮಾರ್‌ ಹೆಗಡೆ ಅವರ ಹೇಳಿಕೆಯಂತೆ ಸಂವಿಧಾನವನ್ನು ಬದಲಿಸುವುದು ಜನಿವಾರ ಬದಲಿಸಿದಷ್ಟು ಸುಲಭವಲ್ಲ. ನೀವು ಸಂವಿಧಾನವನ್ನು ಬದಲಿಸಿದರೆ ಮುಂದಿನ ದಿನಗಳಲ್ಲಿ ನಾವೇ ನಿಮ್ಮನ್ನು ಬದಲಿಸುವುದಾಗಿ ಪ್ರತಿಜ್ಞೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಡಿಎನ್‌ಎ ಪರೀಕ್ಷೆ ಮಾಡಿಸಿ: ಸಂವಿಧಾನದ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ನಡೆಸಿ ಅದರ ಘನತೆ ಕುಗ್ಗಿಸಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಸಂವಿಧಾನವನ್ನು ಗೌರವಿಸಬೇಕು. ಜಾತ್ಯತೀತರ ರಕ್ತದ ಬಗ್ಗೆ ಸಂಶಯಪಡುವ ಅನಂತಕುಮಾರ್‌ ಹೆಗಡೆ ಅವರು ಮೊದಲು ತಮ್ಮ ಡಿಎನ್‌ಎ ಪರೀಕ್ಷೆ ಮಾಡಿಸಿ, ತಮ್ಮ ಅಪ್ಪ-ಅಮ್ಮ ಯಾರೆಂದು ಖಚಿತಪಡಿಸಿಕೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ನಾಶಕ್ಕೆ ವಿರೋಧ ಪಕ್ಷವೇ ಬೇಕಿಲ್ಲ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ ಅವರೇ ಸಾಕು ಎಂದರು.

ದಿಕ್ಕುತಪ್ಪಿಸುವ ಹುನ್ನಾರ: ಅನಂತಕುಮಾರ್‌ ಹೆಗಡೆ ಅವರ ಹೇಳಿಕೆ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದೆ. ವಿಜಯಪುರದ ದಲಿತ ಬಾಲಕಿ ದಾನಮ್ಮ ಅತ್ಯಾಚಾರ ಪ್ರಕರಣ ಮರೆಮಾಚುವ ನಿಟ್ಟಿನಲ್ಲಿ ಇಂತಹ ಹೇಳಿಕೆ ನೀಡಲಾಗುತ್ತಿದೆ. ಹಾಗಾದರೆ ದಾನಮ್ಮ ನಿಮ್ಮ ಮನೆಯ ಮಗಳಲ್ಲವೇ? ಎಂದು ಪ್ರಶ್ನಿಸಿದರು.

Advertisement

ಮೌನ ಮುರಿಯಿರಿ: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಈ ಬಗ್ಗೆ ಮೌನ ಮುರಿದು ಮಾತನಾಡಬೇಕಿದೆ. ಇಲ್ಲವಾದಲ್ಲಿ ತಮ್ಮ ಪಕ್ಷದ ಹೆಸರಿನಿಂದ ಜಾತ್ಯತೀತ ಎಂಬ ಪದವನ್ನು ಕಿತ್ತು ಹಾಕಿ ಎಂದು ಹೇಳಿದರು. ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಜಂಪಾಷಾ, ಮುಖಂಡರಾದ ತುಂಬಲ ರಾಮಣ್ಣ ಮತ್ತಿತರರಿದ್ದರು.

ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಪ್ರಧಾನಿ ಮೋದಿ ಅವರು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ವಿವಿಧ ಸಂಘಟನೆಗಳ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡಲಾಗುವುದು.
-ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗಪೆದ್ದಿ ಮಠ

Advertisement

Udayavani is now on Telegram. Click here to join our channel and stay updated with the latest news.

Next