Advertisement

ಕಟ್ಟಡಗಳ ನಿರ್ಮಾಣ ನಿಯಮ ಬದಲು?

10:57 AM Feb 09, 2020 | Suhan S |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು “ಬಿಬಿಎಂಪಿ ಕಟ್ಟಡ ನಿರ್ಮಾಣ ಉಪನಿಯಮ -2020′ ಕರಡು ಸಿದ್ಧಪಡಿಸಿದ್ದು, ಬೈಲಾದಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ.

Advertisement

ದಿವ್ಯಾಂಗರಿಗೆ ಆದ್ಯತೆ, ನವೀಕರಿಸಬಹುದಾದ ಇಂಧನಗಳ ಕಡ್ಡಾಯ ಬಳಕೆ, ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಡ್ಡಾಯ ಸಸಿ ನೆಡುವುದನ್ನು ಬೈಲಾದಲ್ಲಿ ಸೇರಿಸಲಾಗಿದ್ದು, ಈ ಮಾನದಂಡಗಳನ್ನು ಅನುಸರಿಸಿದರೆ ಮಾತ್ರ ನಿರಾಕ್ಷೇಪಣ ಪತ್ರ ಸಿಗಲಿದೆ. ಅಲ್ಲದೆ, ಏಕರೂಪ ಅರ್ಜಿ ನಮೂನೆ ಮಾಡಲಾಗಿದ್ದು, 12 ಭಾಗಗಳು, 12 ಮಾನದಂಡಗಳು ಹಾಗೂ 4 ಪ್ರಮುಖ ಅರ್ಜಿಗಳನ್ನು ಈ ಬೈಲಾ ಒಳಗೊಂಡಿದೆ.

2016ರಲ್ಲಿ ಮಾದರಿ ಕಟ್ಟಡ ನಿರ್ಮಾಣ ಬೈಲಾ ಪರಿಚಯಿಸಲಾಗಿತ್ತು. ಇದರಲ್ಲಿ ಹಸಿರು ಕಟ್ಟಡ ನಿರ್ಮಾಣ, ನೀರು ಉಳಿತಾಯ, ಸೌರಶಕ್ತಿ ಬಳಕೆ ಕಡ್ಡಾಯ ನಿಯಮಗಳನ್ನು ಅಳವಡಿಸಿಕೊಳ್ಳಲಾಯಿತು. 2017ರಲ್ಲಿ ಕೇಂದ್ರ ಸರ್ಕಾರ ಈ ಬೈಲಾವನ್ನು ಅಳವಡಿಸಿಕೊಳ್ಳುವಂತೆ ದೇಶದ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಬೈಲಾವನ್ನು ಪ್ರತಿ ಹತ್ತು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಬಿಬಿಎಂಪಿ ನೂತನ ಕರಡು ಸಿದ್ಧಪಡಿಸಿದ್ದು, ಇದನ್ನು ಕೌನ್ಸಿಲ್‌ನಲ್ಲಿ ಮಂಡನೆ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಧಿಕಾರಿಗಳಿಗೂ ಶಿಕ್ಷೆಯಾಗಲಿದೆ: ಇನ್ನು ಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಪಾಲಿಕೆಯ ಮುಖ್ಯ ಎಂಜಿನಿಯರ್‌, ವಿಶೇಷ ಆಯುಕ್ತರು, ಬಿಬಿಎಂಪಿ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನಿವೇಶನದ ವಿಸ್ತೀರ್ಣದ ಅನುಸಾರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಿದ್ದಾರೆ. ಇಷ್ಟು ದಿನ ಕಟ್ಟಡಗಳು ವಾಲಿದರೆ ಅಥವಾ ಕುಸಿದರೆ ಸಂಬಂಧಪಟ್ಟ ನಿವೇಶನದ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು. ನೂತನ ಬೈಲಾ ಪ್ರಕಾರ ಇನ್ನು ಮುಂದೆ ಕಟ್ಟಡದಲ್ಲಿ ಲೋಪ ಕಂಡುಬಂದರೆ ಅಧಿಕಾರಿಗಳಿಗೂ ಶಿಕ್ಷೆ ನೀಡುವ ಪ್ರಸ್ತಾವನೆಯನ್ನು ಬೈಲಾದಲ್ಲಿ ಸೇರಿಸಲಾಗಿದೆ. ಹೀಗಾಗಿ, ಕಟ್ಟಡಗಳ ನಿರ್ಮಾಣ ಅಥವಾ ನಿರ್ಮಾಣವಾದ ಮೇಲೆ ಕಟ್ಟಡಗಳು ಕುಸಿದರೆ ಅಥವಾ ವಾಲಿದರೆ ಅಧಿಕಾರಿಗಳು ಹೊಣೆಗಾರರಾಗಲಿದ್ದಾರೆ.

ಹಸಿರು ಕಟ್ಟಡ ನಿರ್ಮಾಣಕ್ಕೆ ಆದ್ಯತೆ: ಕಟ್ಟಡ ನಿರ್ಮಾಣ ಮಾಡುವವರು ವಿದ್ಯುತ್‌ ಉತ್ಪಾದನೆ, ನೀರು ಮರು ಬಳಕೆ ಸೇರಿದಂತೆ ನವೀಕರಿಸ ಬಹುದಾದದ ಇಂಧನಗಳ ಬಳಕೆಗೆ ಆದ್ಯತೆ ನೀಡುವ ಹಸಿರು ಕಟ್ಟಡ (ಗ್ರೀನ್‌ ಬಿಲ್ಡಿಂಗ್‌) ಮಾದರಿಗೆ ಬೈಲಾದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಕಟ್ಟಡ ನಿರ್ಮಾಣ ಮಾಡುವ ಪ್ರದೇಶವು 180 ಚ.ದ ಮೀ. ನಿಂದ 240 ಚ. ಮೀ ವಿಸ್ತೀರ್ಣದಲ್ಲಿದ್ದರೆ ಒಂದು ಸಸಿ ಹಾಗೂ 4 ಸಾವಿರ ಚ. ಮೀ. ಇದ್ದರೆ ಆ ಭಾಗದಲ್ಲಿ ಕಡ್ಡಾಯವಾಗಿ ನಾಲ್ಕು ಸಸಿ ನೆಡಬೇಕು. ಸಸಿಗಳನ್ನು ನೆಟ್ಟಿದ್ದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಗಲಿದೆ.

Advertisement

ಅಲ್ಲದೆ, ಬಿ1 ಮತ್ತು ಬಿ2 ಹಂತದ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸೌರಶಕ್ತಿ (ಸೋಲಾರ್‌)ಬಳಸಬೇಕು. ಈ ಕಟ್ಟಡಗಳ ವಿದ್ಯುತ್‌ ಬಳಕೆಗೂ ಸೌರಶಕ್ತಿಯನ್ನೇ ಬಳಸಬೇಕು. ಮನೆಯ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಅಳವಡಿಸುವ ದೀಪಗಳನ್ನು ಸೌರಶಕ್ತಿಯ ಮೂಲಕವೇ ಬಳಸುವಂತಿರಬೇಕು ಎಂಬ ನಿಯಮವಿದೆ. ಇದರೊಂದಿಗೆ ಜಲ ಮಂಡಳಿ ಒಳಚರಂಡಿ ನೀರು ಶುದ್ಧೀಕರಣ ಹಾಗೂ ಮಳೆ ನೀರು ಕೊಯ್ಲುಗೆ ಸಂಬಂಧಿಸಿರುವಂತೆ ರೂಪಿಸಿರು ನಿಯಮಗಳನ್ನೂ “ಕಟ್ಟಡ ನಿರ್ಮಾಣ-2020’ಕರಡಿನಲ್ಲಿ ಕಡ್ಡಾಯ ಮಾಡಲಾಗಿದೆ. ಪರಿಸರ ಸಂರಕ್ಷಣೆ, ರಕ್ಷಣೆ ಮತ್ತು ಭದ್ರತೆ, ತಾಂತ್ರಿಕ ಅಭಿವೃದ್ಧಿ, ಸ್ವಚ್ಛ ಭಾರತ್‌ ಮಿಷನ್‌ ಅಳವಡಿಕೆ ಮತ್ತು ಈಸ್‌ ಆಫ್ ಡೂಯಿಂಗ್‌, (ವ್ಯಾಪಾರ ಸರಳೀಕರಣ) ದೃಷ್ಟಿಯಿಂದ ಬೈಲಾ ಬದಲಾವಣೆಗೆ ಮಾಡಲಾಗಿದೆ.

ವಿಶೇಷ ಚೇತನರಿಗೆ ಪೂರಕ ವಾತಾವರಣ :  ಸರ್ಕಾರಿ ಕಟ್ಟಡಗಳ ನಿರ್ಮಾಣದಲ್ಲಿ ಕಟ್ಟಡಗಳ ಒಳಗೆ ಪ್ರವೇಶಿಸಲು ಹಾಗೂ ಒರಗೆ ಬರಲು ದಿವ್ಯಾಂಗರಿಗೆ, ಹಿರಿಯರಿಗೆ ಹಾಗೂ ಕಿರಿಯರಿಗೆ ಅನುವಾಗುವಂತಹ ವ್ಯವಸ್ಥೆ ಇರಬೇಕು. ದಿವ್ಯಾಂಗರಿಗೆ ಮಾರ್ಗಸೂಚಿ ಸಿಗುವಂತೆ ಸುಲಭವಾಗಿ ಕಟ್ಟಡ ವಿನ್ಯಾಸ ಯೋಜನೆ ಒಳಗೊಂಡಿರಬೇಕು ಎಂಬ ಪ್ರಮುಖ ಅಂಶವನ್ನು ಬೈಲಾದಲ್ಲಿ ನಮೂದಿಸಲಾಗಿದೆ. ಆದರೆ, ಪ್ರತ್ಯೇಕವಾಗಿ ಸಾರ್ವಜನಿಕರು ನಿರ್ಮಿಸಿಕೊಳ್ಳುವ ಮನೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಜನರು ಸುಲಭವಾಗಿ ಕಟ್ಟಡ ನಿರ್ಮಿಸಿಕೊಳ್ಳಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಪನಿಯಮ ಕರಡು ಸಿದ್ಧಪಡಿಸಲಾಗಿದೆ. ಈ ಕುರಿತು ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿ ಮತ್ತಷ್ಟು ಸರಳೀಕರಣ ಮಾಡುವ ಚಿಂತನೆ ಇದೆ.  –ಎಂ.ಗೌತಮ್‌ಕುಮಾರ್‌, ಮೇಯರ್‌

 

  –ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next