Advertisement

ಜು. 16ರಂದು ಚಂದ್ರಗ್ರಹಣ: ದೇವಸ್ಥಾನಗಳ ಸೇವೆಯಲ್ಲಿ  ವ್ಯತ್ಯಯ

10:20 AM Jul 15, 2019 | keerthan |

ಸುಬ್ರಹ್ಮಣ್ಯ: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು. 16ರಂದು ಪೂಜಾ ಅವಧಿಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

ರಾತ್ರಿ 7ಕ್ಕೆ ನಡೆಯುವ ಮಹಾಪೂಜೆಯನ್ನು ಸಂಜೆ 6.30ಕ್ಕೆ ನಡೆಸಲಾಗುತ್ತದೆ. 7 ಗಂಟೆಯ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಸಂಜೆಯ ಆಶ್ಲೇಷಾ ಬಲಿ ಸೇವೆ ಹಾಗೂ ರಾತ್ರಿಯ ಭೋಜನ ವ್ಯವಸ್ಥೆಯೂ ಇರುವುದಿಲ್ಲ. ಬೆಳಗ್ಗಿನಿಂದ ಮಧ್ಯಾಹದ ವರೆಗಿನ ಪೂಜಾ ಅವಧಿ ಮತ್ತು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಬದಲಾವಣೆಯನ್ನು ಅರಿತು ಭಕ್ತರು
ಸಹಕರಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಕಟೀಲು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾತ್ರಿಯ ಹೂವಿನ ಪೂಜೆ, ರಂಗಪೂಜೆ ಇತ್ಯಾದಿ ಯಾವುದೇ ವಿಶೇಷ ಸೇವೆಗಳು ಮತ್ತು ರಾತ್ರಿ ಅನ್ನದಾನ ಇರುವುದಿಲ್ಲ. ಮಹಾಪೂಜೆ ಎಂದಿನಂತೆ ರಾತ್ರಿ 8 ಗಂಟೆಗೇ ನಡೆಯಲಿದೆ.

ಕೊಲ್ಲೂರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಗ್ರಹಣ ಕಾಲದಲ್ಲಿ ದೇವರಿಗೆ ಶತರುದ್ರಾಭಿಷೇಕ ನಡೆಯಲಿದೆ. ರಾತ್ರಿ ಮಹಾಪೂಜೆ ಎಂದಿನಂತೆ 9 ಗಂಟೆಗೆ ನಡೆಯಲಿದೆ. nಭಕ್ತರಿಗೆ ಅನ್ನಪ್ರಸಾದದ ಬದಲು ಫ‌ಲಾಹಾರ ವಿತರಣೆ ನಡೆಯಲಿದೆ. ಗ್ರಹಣಕಾಲದಲ್ಲೂ ದೇವರದರ್ಶನಕ್ಕೆ ಅವಕಾಶವಿದೆ.

ಉಡುಪಿ ಶ್ರೀಕೃಷ್ಣ ಮಠ
ಉಡುಪಿ: ಮಂಗಳವಾರ ರಾತ್ರಿ 1.33ರಿಂದ ಮುಂಜಾವ 4.32ರ ವರೆಗೆ ನಡೆಯುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚೌಂದ್ರಮೌಳೇಶ್ವರ ದೇವಸ್ಥಾನಗಳು ಆ ಹೊತ್ತಿನಲ್ಲಿಯೂ ತೆರೆದಿರಲಿವೆ. ಗ್ರಹಣದ ವೇಳೆ ಜಪ, ಸ್ತೋತ್ರ ಪಠಣ ಇತ್ಯಾದಿ ನಿರಂತರವಾಗಿ ನಡೆಯಲಿವೆ. ಭಕ್ತರು ದೇವರ ದರುಶನ ಪಡೆಯಬಹುದಾಗಿದೆ. ಗ್ರಹಣ ಮೋಕ್ಷದ ಬಳಿಕ ಅಭಿಷೇಕ, ಪೂಜೆ ನೆರವೇರಲಿದೆ.

Advertisement

ಧರ್ಮಸ್ಥಳದಲ್ಲಿ ಬದಲಾವಣೆ ಇಲ್ಲ
ಬೆಳ್ತಂಗಡಿ: ಚಂದ್ರಗ್ರಹಣ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಪೂಜೆ ಮತ್ತು ದೇವರ ದರ್ಶನ ಇರುತ್ತದೆ. ಚಂದ್ರಗ್ರಹಣ ಮಧ್ಯರಾತ್ರಿ ಆಗುವುದರಿಂದ ರಾತ್ರಿ 9 ಗಂಟೆ ತನಕವೂ ಅನ್ನಛತ್ರದಲ್ಲಿ ಎಂದಿನಂತೆ ಅನ್ನ ದಾಸೋಹವಿರಲಿದೆ.

“ನೂರು ಪಟ್ಟು ಫ‌ಲ ಪ್ರಾಪ್ತಿ’
ಗ್ರಹಣ ವೇಳೆ ದೇವರ ಧ್ಯಾನ, ಜಪ, ದೇವರ ದರುಶನ ಮಾಡಿದರೆ ಇದರಿಂದ ದೊರೆಯುವ ಫ‌ಲ ಬೇರೆ ದಿನಗಳಿಗಿಂತ ನೂರುಪಟ್ಟು ಅಧಿಕ. ಸಂಜೆ 6 ಗಂಟೆಯ ಅನಂತರ ಗ್ರಹಣ ಮೋಕ್ಷದವರೆಗೆ ಆಹಾರ ಸೇವಿಸದಿದ್ದರೆ ಉತ್ತಮ ಎಂದು ಉಡುಪಿ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ ಐತಾಳ ಅವರು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next