Advertisement

ಇಂದಿನಿಂದ ಏನೇನು ಬದಲಾವಣೆ?

10:09 AM Aug 01, 2021 | Team Udayavani |

ರಜಾ ದಿನವೂ ಜಮೆ:

Advertisement

ಇಂದಿನಿಂದ ನ್ಯಾಶನಲ್‌ ಆಟೋಮೇಟೆಡ್‌ ಕ್ಲಿಯರಿಂಗ್‌ ಹೌಸ್‌(ಎನ್‌ಎಸಿಎಚ್‌) ಸೌಲಭ್ಯವು ವಾರದ 7 ದಿನವೂ, ದಿನದ 24 ಗಂಟೆಗಳೂ ಲಭ್ಯವಿರಲಿದೆ. ಇದರಿಂದಾಗಿ ಬ್ಯಾಂಕ್‌ ರಜಾ ದಿನಗಳು ಅಥವಾ ವಾರಾಂತ್ಯದಲ್ಲೂ ವೇತನ, ಪಿಂಚಣಿ ಸೇರಿದಂತೆ ಇತರ ಮೊತ್ತಗಳು ಜಮೆಯಾಗಲಿವೆ. ಈವರೆಗೆ ಕೇವಲ ಬ್ಯಾಂಕ್‌ನ ಕೆಲಸದ ದಿನಗಳಲ್ಲಿ ಮಾತ್ರ ಎನ್‌ಎಸಿಎಚ್‌  ಅವಕಾಶವಿತ್ತು.

ಎಟಿಎಂ ವಹಿವಾಟು ತುಟ್ಟಿ:

ಆರ್‌ಬಿಐ ಒಪ್ಪಿಗೆಯ ಮೇರೆಗೆ ಆ.1ರಿಂದ ಬ್ಯಾಂಕ್‌ಗಳು ಎಟಿಎಂಗಳ ಇಂಟರ್‌ಚೇಂಜ್‌ ಶುಲ್ಕವನ್ನು ಗರಿಷ್ಠ 2 ರೂ. ಹೆಚ್ಚಳ ಮಾಡುತ್ತಿವೆ. ಎಟಿಎಂನಲ್ಲಿ ಅಂತರ್‌ಬ್ಯಾಂಕ್‌ ಹಣಕಾಸು ವಹಿವಾಟು ನಡೆಸಿದರೆ ವಿಧಿಸಲಾಗುತ್ತಿದ್ದ ಶುಲ್ಕವನ್ನು 15ರೂ.ಗಳಿಂದ 17 ರೂ.ಗೆ ಹೆಚ್ಚಿಸಲಾಗಿದೆ. ಹಣಕಾಸೇತರ ವಹಿವಾಟು ಶುಲ್ಕ 5ರೂ.ನಿಂದ 6ರೂ.ಗೆ ಏರಿಕೆಯಾಗಲಿದೆ. ಇಂಟರ್‌ಚೇಂಜ್‌ ಶುಲ್ಕ ಎಂದರೆ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ನಡೆಯುವ ಪಾವತಿ ಪ್ರಕ್ರಿಯೆಯನ್ನು ನೆರವೇರಿಸುವಂಥ ಸಂಸ್ಥೆಗಳಿಗೆ ಬ್ಯಾಂಕ್‌ಗಳು ವಿಧಿಸುವ ಶುಲ್ಕ.

ಎಟಿಎಂ ಉಚಿತ ವಹಿವಾಟಿಗೆ ಮಿತಿ:

Advertisement

ಇಂದಿನಿಂದ ನಿಮ್ಮ ಖಾತೆಯಿರುವ ಬ್ಯಾಂಕ್‌ನ ಎಟಿಎಂ ಅನ್ನು ತಿಂಗಳಿಗೆ 5 ಬಾರಿ ಮಾತ್ರ ಉಚಿತವಾಗಿ ಬಳಸಬಹುದು. ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ 3 ಬಾರಿಯಷ್ಟೇ (ಮೆಟ್ರೋ ನಗರಗಳಲ್ಲಿ) ಉಚಿತ ವಹಿವಾಟು ನಡೆಸಬಹುದು. ಬೇರೆ ನಗರಗಳಲ್ಲಿ ಉಚಿತ ವಹಿವಾಟಿಗೆ 5ರ ಮಿತಿ ಹೇರಲಾಗಿದೆ.

ಐಸಿಐಸಿಐ ಬ್ಯಾಂಕ್‌ ಹೊಸ ನಿಯಮ:

ರವಿವಾರದಿಂದ ಐಸಿಐಸಿಐ ಬ್ಯಾಂಕ್‌ನ ಎಟಿಎಂಗಳಲ್ಲಿ 4 ವಹಿವಾಟುಗಳವರೆಗೆ  ಯಾವುದೇ ಶುಲ್ಕವಿರುವುದಿಲ್ಲ. ಅನಂತರದ ಪ್ರತೀ ವಹಿವಾಟಿಗೆ 150ರೂ. ಶುಲ್ಕ ವಿಧಿಸಲಾಗುತ್ತದೆ. ಜತೆಗೆ ಖಾತೆದಾರರು ವರ್ಷಕ್ಕೆ 25 ಹಾಳೆಗಳಿರುವ ಒಂದು ಚೆಕ್‌ಬುಕ್‌ ಮಾತ್ರ ಉಚಿತವಾಗಿ ಪಡೆಯ ಬಹುದು. ಅನಂತರದಲ್ಲಿ  ಪ್ರತೀ 10 ಹಾಳೆಗಳ  ಚೆಕ್‌ ಬುಕ್‌ಗೆ 20ರೂ. ಶುಲ್ಕ ವಿಧಿಸಲಾಗುತ್ತದೆ

ಎಲ್‌ಪಿಜಿ ದರ ಪರಿಷ್ಕರಣೆ:

ಪ್ರತೀ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆಯಾಗಲಿದೆ. ಅದರಂತೆ ಇಂದಿನಿಂದ ದರ ಹೆಚ್ಚಳವಾಗಲೂಬಹುದು, ಕಡಿಮೆಯಾಗಲೂಬಹುದು.

ಸೌದಿಗೆ ಪ್ರವೇಶ:

ಕೊರೊನಾ ಹಿನ್ನೆಲೆಯಲ್ಲಿ ವಿದೇಶಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಹೇರಿದ್ದ ನಿರ್ಬಂಧ ಇಂದಿನಿಂದ ತೆರವಾಗಲಿದೆ. ಹಾಗಾಗಿ ಎರಡೂ ಡೋಸ್‌ ಲಸಿಕೆ ಪಡೆದಿರುವವರು ಸೌದಿ ಅರೇಬಿಯಾಗೆ ಪ್ರಯಾಣಿಸಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next