ನಿರ್ದೇಶಕ ವಿಜಯಪ್ರಸಾದ್ ಅವರು ಈ ಹಿಂದೆ “ಲೇಡಿಸ್ ಟೈಲರ್’ ಸಿನಿಮಾ ಮಾಡುವ ಕುರಿತು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ಲೇಡಿಸ್ ಟೈಲರ್ ಆಗಿ ರವಿಶಂಕರ್ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ ಅಂತಾನೂ ತಿಳಿಸಲಾಗಿತ್ತು. ಈಗ ಹೊಸ ಸುದ್ದಿಯೆಂದರೆ, “ಲೇಡಿಸ್ ಟೈಲರ್’ ಬದಲಾಗಿದ್ದಾರೆ. ಹೌದು, ರವಿಶಂಕರ್ ಗೌಡ ಮಾಡಬೇಕಿದ್ದ ಪಾತ್ರವನ್ನು ಈಗ ನೀನಾಸಂ ಸತೀಶ್ ಮಾಡುತ್ತಿದ್ದಾರೆ.
ಈ ವಿಷಯವನ್ನು ಸ್ವತಃ ನಿರ್ದೇಶಕರೇ
“ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ರವಿಶಂಕರ್‌ಗೌಡ ಅವರನ್ನು ಬದಲಿಸಿದ್ದು ಯಾಕೆ ಎಂಬುದಕ್ಕೆ ಉತ್ತರವಿಲ್ಲ. ಆದರೆ, ಅವರ ಬದಲಾಗಿ ನೀನಾಸಂ ಸತೀಶ್ ಕೈಗೆ ಲೇಡಿಸ್ ಡ್ರೆಸ್ ಕೊಡೋಕೆ ಮುಂದಾಗಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದರೆ, ಅದೊಂದು ಮನರಂಜನಾತ್ಮಕ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಂದಹಾಗೆ, ಇದು ಯೋಗರಾಜ್‌ಭಟ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ.
ಸನತ್ ಹಾಗೂ ಸುಧೀರ್ “ಲೇಡಿಸ್ ಟೈಲರ್’ಗೆ ಹಣ ಹಾಕುತ್ತಿದ್ದಾರೆ. ಈ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಅವರು ನೀನಾಸಂ ಸತೀಶ್‌ಗೆ “ಪೆಟ್ರೋಮ್ಯಾಕ್ಸ್’ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಮುಂದಿನ ವರ್ಷ “ಗಣೇಶ್ ಮೆಡಿಕಲ್ಸ್’ ಎಂಬ ಚಿತ್ರ ಮಾಡುವ ಸುದ್ದಿಯೂ ಇತ್ತು. ಆದರೆ, ಆ ಸಿನಿಮಾ ಶುರುಮಾಡುವ ಮುನ್ನವೇ, ಸತೀಶ್ ಅವರನ್ನು “ಲೇಡಿಸ್ ಟೈಲರ್’ ಮಾಡಿದ್ದಾರೆ ವಿಜಯಪ್ರಸಾದ್.
ಇನ್ನು, ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ. ಹಾಗಾಗಿ ಇಲ್ಲಿ ಎಲ್ಲಾ ಪಾತ್ರಗಳಿಗೂ ಪ್ರಮುಖ ಆದ್ಯತೆ ಕೊಡಲಾಗುತ್ತಿದೆ. ನಿರ್ದೇಶಕರು ಈ ಹಿಂದೆ ಹೇಳಿದಂತೆ, ಕಥಾ ನಾಯಕಿ 125 ಕೆಜಿ ತೂಕದಷ್ಟು ಇರಬೇಕಿತ್ತು. ಆದರೆ, ಆ ಪಾತ್ರಕ್ಕೆ ಅಂತಹವರು ಯಾರೂ ಹೊಂದಾಣಿಕೆ ಆಗದ ಕಾರಣ, ವಿಜಯಪ್ರಸಾದ್ ಇನ್ನೂ ನಾಯಕಿಯ ಹುಡುಕಾಟದಲ್ಲೇ ಇದ್ದಾರೆ. “ಲೇಡಿಸ್ ಟೈಲರ್’ಗೆ ನಾಯಕಿ ಅವರಂತೆ, ಇವರಂತೆ ಎಂಬ ಮಾತುಗಳು ಕೇಳಿಬಂದವೇ ಹೊರತು, ನಿರ್ದೇಶಕರು ಇನ್ನು ಯಾರನ್ನೂ ಆಯ್ಕೆ ಮಾಡಿಲ್ಲ.
ಅಂದಹಾಗೆ, ನಾಯಕಿಯದು ಇಲ್ಲಿ ಮುಸ್ಲಿಂ ಹೆಣ್ಣುಮಗಳ ಪಾತ್ರ. ಹಾಗಾಗಿ, ಒಂದಷ್ಟು ನಾಯಕಿಯರ ಹುಡುಕಾಟ ಜೋರಾಗಿಯೇ ನಡೆಸಿದ್ದಾರೆ ನಿರ್ದೇಶಕರು. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ನಾಯಕಿಯ ಆಯ್ಕೆ ಅಂತಿಮಗೊಳಿಸಲಿದ್ದಾರಂತೆ ವಿಜಯಪ್ರಸಾದ್. “ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ಇದರೊಂದಿಗೆ ಕಾಡುವ ಕಥೆಯೂ ಹೌದು.
ಇಲ್ಲೊಂದು ಪುಟ್ಟ ಪ್ರೇಮಕಥೆಯು ಬಿಚ್ಚಿಕೊಳ್ಳುತ್ತಲೇ ಒಂದಷ್ಟು ಸಂದೇಶಗಳನ್ನು ಕೊಡುತ್ತಾ ಹೋಗುತ್ತದೆ. ಇಲ್ಲಿ ಜಾತಿ ಕುರಿತಾಗಿ ಹೇಳುತ್ತಿದ್ದೇನೆ. ಹಾಗಂತ ಅತಿಯಾದ ಬೋಧನೆ ಇಲ್ಲ. ಒಂದು ಗಂಭೀರ ವಿಷಯವನ್ನು ಹಾಸ್ಯವಾಗಿ, ನವಿರಾಗಿ ಹೇಳಲು ಹೊರಟಿದ್ದೇನೆ’ ಎನ್ನುತ್ತಾರೆ ವಿಜಯಪ್ರಸಾದ್. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಜ್ಞಾನಮೂರ್ತಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.