Advertisement

ಬದಲಾದ ಕನ್ನಡ ಚಳವಳಿ ಸ್ವರೂಪ

12:09 PM May 11, 2018 | Team Udayavani |

ಬೆಂಗಳೂರು: ಇತ್ತೀಚೆಗೆ ಕನ್ನಡ ಚಳವಳಿಗಳು ಪ್ರದರ್ಶನ, ವಿಡಂಬನೆ ಹಾಗೂ ದಬ್ಟಾಳಿಕೆಯ ಸ್ವರೂಪ ಪಡೆಯುತ್ತಿವೆ ಎಂದು ಕನ್ನಡದ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ಕಟ್ಟಡದ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ವಿಕಾಸ ರಂಗ ಹಾಗೂ ಕರ್ನಾಟಕ ವಿಚಾರ ವೇದಿಕೆ ವತಿಯಿಂದ ಡಾ.ಎಂ.ಚಿದಾನಂದಮೂರ್ತಿ ಅವರ 88ನೇ ಜನ್ಮದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾನು ನನ್ನ ಬದುಕು ಕುರಿತಂತೆ ಅವರು ವಿಶೇಷ ಉಪನ್ಯಾಸ ನೀಡಿದರು.

ಇಂದಿನ ಕೆಲ ಕನ್ನಡಪರ ಚಳವಳಿಗಳು ತ್ಯಾಗ ಹಾಗೂ ಸೇವಾ ಮನೋಭಾವ ಮರೆತು ಕೇವಲ ಹಣದ ಅಥವಾ ಅಧಿಕಾರದ ಸ್ವಾರ್ಥಕ್ಕಾಗಿ ನಡೆಯುತ್ತಿವೆ. ಹಾಗಾಗಿ ಮೊದಲು ಭಾಷೆ, ನಾಡು ಹಾಗೂ ದೇಶದ ಕುರಿತು ನಿಸ್ವಾರ್ಥದ ಅಭಿಮಾನ ಬೆಳಸಿಕೊಂಡು ಹೋರಾಟಕ್ಕೆ ಮುಂದಾಗಬೇಕು ಎಂದರು.

ಹಳ್ಳಿಯ ಕಡು ಬಡ ಕುಟುಂಬದಲ್ಲಿ ಹುಟ್ಟಿ ನಾನು ಮನೆಯವರ ಸಹಕಾರದಿಂದ ವಿದ್ಯಾಭ್ಯಾಸ ಮಾಡಿ ಅಂದಿನ ಕಾಲಕ್ಕೆ ಮೈಸೂರು ಕರ್ನಾಟಕಕ್ಕೆ 10ನೆ ರ್‍ಯಾಂಕ್‌ ಗಳಿಸಿದ್ದೆ. ಆ ನಂತರ ದಾವಣಗೆರೆಯಲ್ಲಿ ಕವಿ ಜಿ.ಎಸ್‌.ಶಿವರುದ್ರಪ್ಪನವರ ಪ್ರಭಾವಕ್ಕೆ ಒಳಗಾಗಿ ಕನ್ನಡ ಸಾಹಿತ್ಯ ಅಧ್ಯಯನ ಆರಂಭಿಸಿದೆ. ಆ ವೇಳೆ ವೈದ್ಯಕೀಯ ಶಿಕ್ಷಣ, “ಎಂಜಿನಿಯರಿಂಗ್‌ನಂತಹ ಓದು ಬಿಟ್ಟು ಕನ್ನಡ ಸಾಹಿತ್ಯ ಕಲಿಯುತ್ತಾನಂತೆ’ ಎಂದು ಊರಿನ ಅನೇಕರಿಂದ ನಿಂದನೆಗೊಳಗಾದೆ.

ಆದರೂ ಪಟ್ಟು ಬಿಡದೆ ಕುವೆಂಪು ಅವರ ವಿದ್ಯಾರ್ಥಿಯಾಗಿ ಕನ್ನಡ ಸಾಹಿತ್ಯ ಅಧ್ಯಯನ ಮಾಡಿದೆ. ನಂತರ ತೀನಂಶ್ರೀ ಅವರ ಬಳಿ ಸಂಶೋಧನ ವಿದ್ಯಾರ್ಥಿಯಾಗಿ ಕವಿ ಹಾಗೂ ಸಾಹಿತಿಯಾಗುವ ಕನಸು ಸಾಕಾರ ಮಾಡಿಕೊಂಡೆ ಎಂದು ತಮ್ಮ ಅಧ್ಯಯನ ದಿನಗಳನ್ನು ಮೆಲಕು ಹಾಕಿದರು. 

Advertisement

ಸಂಶೋಧನೆ ಎಂದರೆ ಕೇವಲ ಪುಸ್ತಕಗಳನ್ನು ತಿರುವಿ ಹಾಕುವುದಲ್ಲ. ಹೊಸ ಹೊಸ ವಿಷಯಗಳನ್ನು ಶೋಧಿಸುವುದು ಎಂಬ ತೀನಂಶ್ರೀ ಅವರ ಮಾತಿನಿಂದ ಸ್ಪೂರ್ತಿ ಪಡೆದ ನಾನು ಅನೇಕ ಮಹತ್ತರ ಸಂಶೋಧನೆಗಳನ್ನು ಕೈಗೊಂಡೆ. ಅವುಗಳಲ್ಲಿ ಮುಖ್ಯವಾಗಿ ವಚನಕಾರ ಬಸವಣ್ಣನ ಹಾಗೂ ಕವಿ ಪಂಪನ ವಂಶಸ್ಥರನ್ನು ಪತ್ತೆ ಹಚ್ಚಿದ್ದು,

ಕರ್ನಾಟಕ ಸಂಸ್ಕೃತಿಯ ಪ್ರಭಾವವನ್ನು ಕ್ಷೇತ್ರಕಾರ್ಯದ ಮೂಲಕ ದೇಶದಾಚೆಗಿನ ನೇಪಾಳದಲ್ಲಿ ಗುರುತಿಸಿದ ಸಂಶೋಧನೆಗಳು ಒಂದಿಷ್ಟು ಸಾರ್ಥಕ ಭಾವ ಹಾಗೂ ಖುಷಿ ತಂದುಕೊಟ್ಟಿವೆ. ಸಂಶೋಧನೆ ಜತೆಗೆ ನಾಡಿನ ಸಮಕಾಲಿನ ಕಷ್ಟ- ಸುಖಗಳಿಗೆ ಸ್ಪಂದಿಸಿದ್ದು, ಪ್ರಚಲಿತ ವಿಷಯಗಳಿಗೆ ಪ್ರತಿಕ್ರಿಯಿಸುತ್ತಾ ಬಂದಿದ್ದೇನೆ ಎಂದರು.

ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಪರ ಯಾವುದೇ ಹೋರಾಟವಾದರೂ ಅಲ್ಲಿ ಮೊದಲು ಚಿದಾನಂದ ಮೂರ್ತಿಯವರ ಧ್ವನಿ ಕೇಳಿಸುತ್ತದೆ. ಕನ್ನಡದ ಕೆಲಸ ಮಾಡುವ ಶಕ್ತಿ ಕೇಂದ್ರ ಎಂಬ ಸಂಘವನ್ನು ಸ್ಥಾಪಿಸಿ ಅದರ ಶಕ್ತಿಯಾಗಿ ನಿಂತಿದ್ದರು. ಇಂದಿಗೂ ವೈಚಾರಿಕ  ಹಾಗೂ ಸಂಶೋಧನಾ ಸತ್ಯಗಳನ್ನು ನಿರ್ಭಯವಾಗಿ ಪ್ರತಿಪಾದಿಸುವ ಇವರು ಎಲ್ಲಾ ಸಂಶೋಧನ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕು ಎಂದರು.

ಕಸಾಪ ಅಧ್ಯಕ್ಷ ಮನು ಬಳಿಗಾರ್‌, ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್‌, ಉಪನ್ಯಾಸಕ ಎಸ್‌.ಎಸ್‌.ಅಂಗಡಿ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಕರ್ನಾಟಕ ವಿಕಾಸ ರಂಗ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next