ಬೆಂಗಳೂರು: ಬಸವಣ್ಣನ ಅಂಕಿತ ನಾಮ “ಕೂಡಲ ಸಂಗಮ ದೇವ’ಎನ್ನುವುದನ್ನು ತಿದ್ದಿ “ಲಿಂಗದೇವ’ ಅಂಕಿತ ನಾಮದಡಿ ಮಾತೆ ಮಹಾದೇವಿ ರಚಿಸಿದ್ದ ವಿವಾದಿತ ಕೃತಿ ಬಸವ ವಚನ ದೀಪ್ತಿ ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಸುಪ್ರೀಂ ಕೊರ್ಟ್ ಎತ್ತಿ ಹಿಡಿದಿದೆ.
ಮಾತೆ ಮಹಾದೇವಿ ಅವರ ಈ ವಿವಾದಿತ ಕೃತಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ, ಹೋರಾಟ ನಡೆದಿದ್ದರಿಂದ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು, ಬಸವ ವಚನ ದೀಪ್ತಿ ಪುಸ್ತಕವನ್ನುನಿಷೇಧಿಸಿ ಮುಟ್ಟುಗೋಲು ಹಾಕಿಕೊಂಡಿದ್ದರು. ಇದರ ವಿರುದ್ಧ ಮಾತೆ ಮಹಾದೇವಿ ಹೈಕೋರ್ಟ್‌ಗೆ ಹೋಗಿ ಅಲ್ಲೂ ಸೋತಿದ್ದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ ಸುದೀರ್ಘ ಕಾನೂನು ಹೋರಾಟದಲ್ಲೂ ಸೋಲಾಗಿದ್ದು, ಸರ್ಕಾರದ ನಿಲುವಿಗೆ ಜಯ ಸಿಕ್ಕಿದೆ.
ಸುಪ್ರೀಂ ಕೊರ್ಟ್‌ನ ನ್ಯಾ. ನಾಗೇಶ್ವರ ರಾವ್ ಮತ್ತು ನ್ಯಾ. ಘೋರ್ಪಡೆ ನೇತೃತ್ವದ ದ್ವಿ ಸದಸ್ಯ ಪೀಠ ಬುಧವಾರ ಪುಸ್ತಕ ನಿಷೇಧಿಸಿರುವ ಕರ್ನಾಟಕ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಹೇಳಿದೆ. ಈ ಮೂಲಕ ಮಾತೆ ಮಹಾದೇವಿ ಕೂಡಲ ಸಂಗಮ ದೇವ ಅಂಕಿತವನ್ನು ತಿದ್ದಿರುವುದು ಸ್ಪಷ್ಟವಾಗಿದೆ ಅಭಿಪ್ರಾಯಿಸಿದೆ.
ತಮ್ಮ ಕೃತಿ ನಿಷೇಧವನ್ನು ಮಾತೆ ಮಹಾದೇವಿ 1998 ರಲ್ಲಿ ಹೈ ಕೋರ್ಟ್‌ನಲ್ಲಿ ಪ್ರಶ್ನಿಸಿ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ರಾಜ್ಯ ಹೈಕೋರ್ಟ್‌ನ ತ್ರಿ ಸದಸ್ಯ ಪೀಠ ರಾಜ್ಯ ಸರ್ಕಾರದ ನೀರ್ಧಾರವನ್ನು ಎತ್ತಿ ಹಿಡಿದು ಮಾತೆ ಮಹಾದೇವಿ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ 1999 ರಲ್ಲಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ಮಾತೆ ಮಹಾದೇವಿಯ ಅರ್ಜಿಯನ್ನು ತಿರಸ್ಕರಿಸುವಂತೆ ವೀರಶೈವ ಮಹಾಸಭೆಯೂ ಸಹ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಒಂಬತ್ತು ವರ್ಷಗಳಿಂದ ನಿರಂತರ ವಾದ ವಿವಾದ ನಡೆದಿತ್ತು. ಅಖೀಲ ಭಾರತ ವೀರಶೈವ ಮಹಾಸಭೆಯ ಪರವಾಗಿ ಬಸವ ಪ್ರಭು ಪಾಟೀಲ್ ಹಾಗೂ ನಿಶಾಂತ ಪಾಟೀಲ್ ವಾದ ಮಂಡಿಸಿದ್ದರು. ಮಾತೆ ಮಹಾದೇವಿ ಪರವಾಗಿ ಮೋಹಿನಿ ಭಟ್ ವಾದ ಮಂಡಿಸಿದ್ದರು.
ಅಂಕಿತ ನಾಮ ಬದಲಾವಣೆ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಎಲ್ಲರ ವಾದ ಆಲಿಸಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ. ಕೆಲವು ಸಂಶೋಧನೆಗಳನ್ನು ಮಾಡಿದಾಗ ಕೆಲವರಿಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನಮ್ಮ ಪ್ರಯತ್ನಕ್ಕೆ ಜಯ ಸಿಗುತ್ತದೆ ಎಂಬ ವಿಶ್ವಾಸ ಇದೆ.
– ಮಾತೆ ಮಹಾದೇವಿ, ಬಸವ ಧರ್ಮ ಪೀಠ, ಕೂಡಲ ಸಂಗಮ.