ಹೊಸದಿಲ್ಲಿ : ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಸಿರಿವಂತ ದೇಶ ಆಗುವುದಿದ್ದರೆ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಾಸ್) ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ.
ಫೈಜಾಬಾದನ್ನು ಅಯೋಧ್ಯೆ ಎಂದೂ, ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದೂ ಪುನರ್ ನಾಮಕರಣ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರವನ್ನು ಲೇವಡಿ ಮಾಡಿದ ಹಾರ್ದಿಕ್, “ನಗರಗಳ ಹೆಸರನ್ನು ಬದಲಾಯಿಸುವ ಮೂಲಕ ದೇಶವನ್ನು ಚಿನ್ನದ ಹಕ್ಕಿಯನ್ನಾಗಿ ಮಾಡಬಹುದು ಎಂದು ನೀವು ಭಾವಿಸುವುದಾದರೆ ದೇಶದ ಎಲ್ಲ 125 ಕೋಟಿ ಜನರ ಹೆಸರನ್ನು ರಾಮನೆಂದು ಬದಲಾಯಿಸಿ’ ಎಂದು ಹೇಳಿದರು.
ಯೋಗಿ ಆದಿತ್ಯನಾಥ್ ಅವರು ನಗರ ಪುನರ್ ನಾಮಕರಣಕ್ಕೆ ಕೈ ಹಚ್ಚಿದ ಬಳಿಕ ದೇಶದ ಇತರ ಭಾಗದಲ್ಲಿನ ನಗರಗಳು ಮತ್ತು ಸ್ಥಳಗಳ ಹೆಸರನ್ನು ಬದಲಾಯಿಸಬೇಕೆಂಬ ಕೂಗು ಈಗ ವ್ಯಾಪಕವಾಗಿ ಕೇಳಿಬರುತ್ತಿದೆ.
ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ಮುಜಫರನಗರ ದ ಹೆಸರನ್ನು ಲಕ್ಷ್ಮೀನಗರವೆಂದು ಬದಲಾಯಿಸಲು ಆಗ್ರಹಿಸಿದ್ದಾರೆ. ಗುಜರಾತ್ ರಾಜಧಾನಿ ಅಹ್ಮದಾಬಾದ್ ಹೆಸರನ್ನು ಕರ್ಣಾವತಿ ಎಂದು ಬದಲಾಯಿಸಲು ಆಗ್ರಹಿಸಲಾಗುತ್ತಿದೆ. ಈ ದಿಶೆಯಲ್ಲಿನ ಕಾನೂನು ತೊಡಕುಗಳನ್ನು ನಿವಾರಿಸಿದ ಬಳಿಕ ಅಹ್ಮದಾಬಾದ್ ಹೆಸರನ್ನು ಕರ್ಣಾವತಿ ಎಂದು ಬದಲಾಯಿಸಲಾಗುವುದು ಎಂದು ಗುಜರಾತ್ ಮುಖ್ಯ ಮಂತ್ರಿ ವಿಜಯ್ ರೂಪಾಣಿ ಹೇಳಿರುವುದು ಉಲ್ಲೇಖನೀಯ.