Advertisement

ಬದಲಾವಣೆ ಬೇಕಿದೆ; ನಾವು ಸಿದ್ಧರಾಗಿದ್ದೇವೆಯೇ?

07:55 PM Apr 25, 2020 | Sriram |

ಸುಮಾರು ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಹಾಹಾಕಾರ ಎಬ್ಬಿಸಿದ್ದ ಎಚ್‌1ಎನ್‌1 ಬಳಿಕ ಅಳಿಸಿಹೋಗಲಿಲ್ಲ, ಈಗಲೂ ಆಗೀಗ ಕಾಣಿಸಿಕೊಳ್ಳುತ್ತಲೇ ಇದೆ. ಹಾಗೆಯೇ ಈಗಿನ ಕೋವಿಡ್‌-19 ಕೂಡ ಇನ್ನಷ್ಟು ವರ್ಷಗಳ ಕಾಲ ನಮ್ಮ ದೇಶದಲ್ಲಿ “ಸ್ಥಳೀಯ ಸೋಂಕು’ ಆಗಿ ಉಳಿದುಕೊಳ್ಳಲಿದೆ. ಹೀಗಾಗಿ ಭವಿಷ್ಯದಲ್ಲಿ ಕೋವಿಡ್‌-19ವನ್ನು ಮತ್ತು ಎದುರಾಗಬಹುದಾದ ಇನ್ನೆಷ್ಟೋ ಸೋಂಕುಗಳನ್ನು ಹದ್ದುಬಸ್ತಿನಲ್ಲಿ ಇರಿಸಲು ಈಗ ನಾವು ಅಳವಡಿಸಿಕೊಂಡಿರುವಂತಹ ವೈಯಕ್ತಿಕ ನೈರ್ಮಲ್ಯ ಕ್ರಮಗಳು, ಆರೋಗ್ಯ ಜಾಗೃತಿಯಂಥ ನಿಯಮಗಳನ್ನು ಶಾಶ್ವತವಾಗಿ ರೂಢಿಸಿಕೊಳ್ಳಬೇಕು.

Advertisement

ಸುಮಾರು ಹತ್ತು ವರ್ಷಗಳ ಹಿಂದೆ, 2009-10ರಲ್ಲಿ ಇಡೀ ಜಗತ್ತು ಎಚ್‌1ಎನ್‌1 ಇನ್‌ಫ್ಲೂಯೆಂಜಾ ಸಾಂಕ್ರಾಮಿಕ ರೋಗಕ್ಕೆ ತುತ್ತಾದಾಗ ಭಾರತವೂ ಅದರಿಂದ ಗಮನಾರ್ಹವಾಗಿ ನರಳಿತ್ತು. ಈಗ ನಾವು ಕೋವಿಡ್‌-19 ಎನ್ನುವ ಮತ್ತೂಂದು ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಹಾಹಾಕಾರದ ನಡುವೆ ಇದ್ದೇವೆ. ಈ ಸಂದರ್ಭದಲ್ಲಿ ಮುಂದೆಯೂ ಇನ್ನೂ ಬರಬಹುದಾದಂತಹ ಇಂತಹ ಸಾಂಕ್ರಾಮಿಕ ರೋಗಗಳನ್ನು ಹಿಡಿತದಲ್ಲಿ ಇರಿಸಿಕೊಳ್ಳಲು 2009-10ರ ಅನುಭವದಿಂದ ನಾವು ಕಲಿಯಬಹುದಾದ ಪಾಠ ಏನಾದರೂ ಇದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ವಿಹಿತ.

2009-10ರ ಸಾಂಕ್ರಾಮಿಕ ಹಾವಳಿಯ ವಿಶ್ವಾದ್ಯಂತ ಸಮಯದಲ್ಲಿ ಸುಮಾರು 5 ಲಕ್ಷಕ್ಕಿಂತಲೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರಬಹುದು ಎಂದು ಅಮೆರಿಕ ದೇಶದ ಸಿಡಿಸಿ (ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ) ಅಂದಾಜಿಸಿತ್ತು. ಭಾರತದ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ 2009-10ರಲ್ಲಿ ಎಚ್‌1ಎನ್‌1 ಇನ್‌ಫ್ಲೂಯೆಂಜಾದಿಂದ 44,987 ದೃಢ ಪ್ರಕರಣಗಳು ಮತ್ತು 2,728 ಸಾವುಗಳಾಗಿದ್ದವು. ಜ್ವರ ಮತ್ತು ಕೆಮ್ಮು ಇರುವ ಪ್ರತಿಯೊಬ್ಬ ರೋಗಿಯೂ ಭಾರತದಲ್ಲಿ ಎಚ್‌1ಎನ್‌1 ಪರೀಕ್ಷೆಗೆ ಒಳಗಾಗಲಿಲ್ಲ. ಆದ್ದರಿಂದ ನಿಸ್ಸಂದೇಹವಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಮತ್ತು ಮರಣಗಳು ಈ ಎಚ್‌1ಎನ್‌1ನಿಂದ ಆಗಿರಲೇಬೇಕು. ಸೀಮಿತ ಆರೋಗ್ಯ ಸಂಪನ್ಮೂಲಗಳು, ಅನುಮೋದಿತ ವೈರಾಲಜಿ ಲ್ಯಾಬೊರೇಟರಿಗಳ ಕೊರತೆ, ಇನ್‌ಫ್ಲೂಯೆಂಜಾ ತರಹದ ಅನಾರೋಗ್ಯ (ಐಎಲ್‌ಐ) ಇದ್ದವರಲ್ಲಿ ಅದರ ವರದಿಯಾಗಿಲ್ಲದಿರುವ ಸಾಧ್ಯತೆ, ಇಂತಹ ಕಾರಣಗಳಿಂದ ಹಲವಾರು ಎಚ್‌1ಎನ್‌1 ರೋಗಿಗಳು ಮತ್ತು ಸಾವುಗಳನ್ನು ಇನ್‌ಫ್ಲೂಯೆಂಜಾ ಎಂದು ಡಯಾಗ್ನೊàಸ್ಟಿಕ್‌ ಪರೀಕ್ಷೆಗಳಿಂದ ಗುರುತಿಸುವುದಕ್ಕೆ ಆಗಲೇ ಇಲ್ಲ. 2009ರಲ್ಲಿ ಭಾರತವು ಇಂತಹ ಜಗನ್ಮಾರಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧವಾಗಿರಲಿಲ್ಲ. ಆರೋಗ್ಯ ವ್ಯವಸ್ಥೆಗಳು ಮತ್ತು ಆಸ್ಪತ್ರೆಗಳು ಈ ಸಾಂಕ್ರಾಮಿಕವನ್ನು ತಮ್ಮ ತಮ್ಮ ಸಾಮರ್ಥ್ಯದಿಂದ ತಾವೇ, ಸರಕಾರಿ ಸಂಸ್ಥೆಗಳು ಮತ್ತು ಸಚಿವಾಲಯಗಳ ಕನಿಷ್ಠ ಬೆಂಬಲದೊಂದಿಗೆ, ನಿರ್ವಹಿಸಬೇಕಾಗಿತ್ತು.

2010ರ ಅನಂತರ ಏನಾಯಿತು?
ಎಚ್‌1ಎನ್‌1 ಇನ್‌ಫ್ಲೂಯೆಂಜಾ
ಭಾರತವನ್ನು ಬಿಟ್ಟು ಹೋಯಿತೇ?
ಇಲ್ಲ. ಅದು ಬಿಟ್ಟು ಹೋಗಲಿಲ್ಲ. ಭಾರತದ ರಾಷ್ಟ್ರೀಯ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ)ದ ಪ್ರಕಾರ, 2019ರಲ್ಲಿ ಭಾರತದಲ್ಲಿ 28,798 ಎಚ್‌1ಎನ್‌1 ಇನ್‌ಫ್ಲೂಯೆಂಜಾ ಪ್ರಕರಣಗಳು ಮತ್ತು 1,218 ಸಾವುಗಳು ಕಂಡುಬಂದಿವೆ. ಅದೇ ರೀತಿ, 2018ರಲ್ಲಿ 15,266 ಪ್ರಕರಣಗಳು ಮತ್ತು 1,128 ಸಾವುಗಳು ಕಂಡುಬಂದಿದ್ದು, 2017ರಲ್ಲಿ 38,811 ಪ್ರಕರಣಗಳು ಮತ್ತು 2,270 ಸಾವುಗಳು ದೃಢಪಟ್ಟಿವೆ.

ನಾವು ಗಮನಿಸಬೇಕಾದ ಕುತೂಹಲಕಾರಿ ಸಂಗತಿಯೆಂದರೆ, ಲಸಿಕೆ ಮತ್ತು ಉಪಯುಕ್ತವಾದ ಆ್ಯಂಟಿವೈರಲ್‌ ಔಷಧ (ಒಸೆಲ್ಟಾಮಿವಿರ್‌) ಲಭ್ಯವಿದ್ದರೂ ಈ ಎಚ್‌1ಎನ್‌1 ಇನ್‌ಫ್ಲೂಯೆಂಜಾ ಕಾಯಿಲೆಯಿಂದ ಇಷ್ಟು ರೋಗ ಮತ್ತು ಸಾವುಗಳು ಸಂಭವಿಸಿವೆ.

Advertisement

ಇಷ್ಟು ಮಾತ್ರ ಅಲ್ಲದೆ, ಎಚ್‌1ಎನ್‌1 ಇನ್‌ಫ್ಲೂಯೆಂಜಾ ಭಾರತಕ್ಕೆ “ಸ್ಥಳೀಯ ಸೋಂಕು’ ಆಗಿಬಿಟ್ಟಿದೆ. “ಸ್ಥಳೀಯ ಸೋಂಕು’ ಎಂದರೆ ಮತ್ತೂಂದು ಪ್ರದೇಶದಿಂದ ಆಮದು ಆಗದೆ ಒಂದು ಪ್ರದೇಶದಲ್ಲಿ ಕಾಯಿಲೆಗೆ ಆಗಾಗ್ಗೆ ಕಾರಣವಾಗಿರುವಂತಹ ಸೋಂಕು.

ಹೀಗಿದ್ದರೂ ಮಾಧ್ಯಮಗಳಲ್ಲಿ
ಇದರ ವರದಿಯನ್ನು ನಾವು ಏಕೆ
ನೋಡುತ್ತಿಲ್ಲ?
ಹೆಚ್ಚಿನ ಮಾಧ್ಯಮಗಳು ಪ್ರಸ್ತುತ ಮತ್ತು ಸಂವೇದನಶೀಲ ಸಂಗತಿಗಳನ್ನು ಮಾತ್ರ ಎತ್ತಿ ತೋರಿಸುತ್ತವೆ. ಮಾಧ್ಯಮಗಳು ಜನರ ಆಸಕ್ತಿಯನ್ನು ಅಳೆದು ಅಂತಹ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುತ್ತವೆ. ಜನರ ಗಮನ ಎಷ್ಟು ಸಮಯದ ವರೆಗೆ ಒಂದೇ ಸಮಸ್ಯೆಯ ಮೇಲೆ ಇರಬಹುದು? ಸಾರ್ವಜನಿಕ ನೆನಪು ಕ್ಷಣಿಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಷ್ಟೇ ಅಲ್ಲ, ಸಾರ್ವಜನಿಕರ ಮತ್ತು ಮಾಧ್ಯಮಗಳ ಗಮನವೂ ತಾತ್ಕಾಲಿಕ ಎಂದು ನಾವು ಹೇಳಬಹುದು.

ಆದ್ದರಿಂದ ಅಷ್ಟೊಂದು ಮರಣಗಳಾದರೂ ಎಚ್‌1ಎನ್‌1 ಇನ್‌ಫ್ಲೂಯೆಂಜಾ ಬಗ್ಗೆ ವರದಿ ಮಾಡುವುದಕ್ಕೆ ಮಾಧ್ಯಮಗಳಲ್ಲಿ ಪ್ರಾಮುಖ್ಯ ಸಿಕ್ಕಿಲ್ಲ. ಬಹುಶಃ ನಮ್ಮ ಪತ್ರಿಕೆಗಳ 9ನೇ ಅಥವಾ 13ನೇ ಪುಟಗಳಲ್ಲಿ ಈ ಬಗೆಗಿನ ಬಂದಿರಬಹುದು. ಟಿವಿ ಸುದ್ದಿಗಳಲ್ಲಿಯೂ ಈ ರೋಗಕ್ಕೆ ಹೆಚ್ಚು ಸಮಯವನ್ನು ನೀಡಲಿಲ್ಲ. ಮಾಧ್ಯಮಗಳ ಈ ನಿರಾಸಕ್ತಿಯು ನಿಧಾನವಾಗಿ ಸರಕಾರದ ನಿರಾಸಕ್ತಿಗೆ ಮತ್ತು ಕಾಲಕ್ರಮೇಣ ರೋಗ ಉಲ್ಬಣಿಸುವುದಕ್ಕೂ ಕಾರಣ ಆಗಬಹುದು.

ಹಾಗಾದರೆ ಕೋವಿಡ್‌-19
ವಿಷಯದಲ್ಲಿ ಏನಾಗಬಹುದು?
ಕೋವಿಡ್‌-19 ಇನ್ನೂ ಭಾರೀ ಜಗನ್ಮಾರಿ ಸಾಂಕ್ರಾಮಿಕ. ಇದು ತಾನು ಹೇಗೆ ಮತ್ತು ಎಲ್ಲಿಂದ ಆರಂಭವಾಯಿತು ಎನ್ನುವ ಬಗ್ಗೆ ಹಲವಾರು ಸಿದ್ಧಾಂತಗಳು ಮತ್ತು ಪಿತೂರಿಯ ಕತೆಗಳನ್ನು ಹೊಂದಿರುವ ಹೊಸ ವೈರಸ್‌. ಈ ಹೊಸ ಕೋವಿಡ್‌-19 ವೈರಸ್‌ ಇನ್‌ಫ್ಲೂಯೆಂಜಾಕ್ಕಿಂತ ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಹರಡುವಂಥದ್ದು. ಅದೂ ಸಾಲದ್ದಕ್ಕೆ, ನಮ್ಮಲ್ಲಿ ಈ ಹೊಸ ಕೋವಿಡ್‌-19 ವೈರಸ್‌ಗೆ ಇನ್ನೂ ಲಸಿಕೆ ಅಥವಾ ಪರಿಣಾಮಕಾರಿ ಔಷಧವೂ ಇಲ್ಲ.

ಈ ಲೇಖನವನ್ನು ಬರೆಯುವ ಹೊತ್ತಿಗೆ ಭಾರತದಲ್ಲಿ ಸಿಕ್ಕಿಂ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್‌-19 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸುಮಾರು 23,000 ಪ್ರಕರಣಗಳು ಕಂಡುಬಂದಿದ್ದು, 700ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ. ಕೋವಿಡ್‌-19ರ ಡಯಾಗ್ನೊàಸ್ಟಿಕ್‌ ಪರೀಕ್ಷಾ ಕಾರ್ಯತಂತ್ರವು ಇನ್ನೂ ವಿಕಸನಗೊಳ್ಳುತ್ತಿರುವುದರಿಂದ, ಹೆಚ್ಚು ಹೆಚ್ಚು ಪ್ರಯೋಗಾಲಯಗಳನ್ನು ನಿಯೋಜಿಸಲಾಗುತ್ತಿರುವುದರಿಂದ ಈಗ ನಾವು ನೋಡುತ್ತಿರುವ ಸಂಖ್ಯೆಗಳು ಮುಳುಗಿದ ಮಂಜುಗಡ್ಡೆಯ ಮೇಲು¤ದಿಯಂತೆ. ಪರೀಕ್ಷೆ ಮುಂದುವರಿದ ಹಾಗೆ ಹೆಚ್ಚು ರೋಗಿಗಳು ಕಾಣಿಸಿಕೊಳ್ಳಬಹುದು.

ಆದರೆ ಈ ಕೋವಿಡ್‌-19 ಹೊಸ ಭಾರತವನ್ನು ಎದುರಿಸುತ್ತಿದೆ. ಹಾಗಾಗಿ ಸ್ವಲ್ಪ ಭರವಸೆಯೂ ಇದೆ.ಈ 2020ರ ಸಮಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವ ಭಾರತದ ಸಾಮರ್ಥ್ಯ ಮೊದಲಿಗಿಂತ ಉತ್ತಮವಾಗಿದೆ. ನಮ್ಮ ಸರಕಾರವು ನಿರ್ಣಾಯಕ ನಾಯಕತ್ವವನ್ನು ಹೊಂದಿದೆ. ನಮ್ಮ ಪ್ರಾದೇಶಿಕ ಆಡಳಿತದ ಕಾರ್ಯವೈಖರಿಯು ಅನೇಕ ಜಿಲ್ಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ಉತ್ತಮವಾಗಿದೆ. ನಮ್ಮ ಪ್ರಯೋಗಾಲಯಗಳು ಹೆಚ್ಚು ಉತ್ತಮ ಮತ್ತು ರೋಗಪತ್ತೆಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡು ತಯಾರಾಗಿವೆ. ಇವೆಲ್ಲದರ ಜತೆಗೆ ನಮ್ಮ ಜನರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಈ ತೊಂದರೆಯ ಸಮಯದಲ್ಲಿ ನಮ್ಮ ಇಡೀ ದೇಶವೇ ಒಟ್ಟಾಗಿ ನಿಂತಿದೆ.

ಸರಕಾರಿ ಕಾರ್ಯವೈಖರಿಯನ್ನು ನಾವು ಪರಿಪೂರ್ಣ ಎಂದು ಕರೆಯಲಾಗದಿದ್ದರೂ ನಮ್ಮ ಸರಕಾರಿ ಸಂಸ್ಥೆಗಳ ಪ್ರಸ್ತುತ ಮಟ್ಟದ ದೃಢ ನಿಶ್ಚಯ, ಕೆಲಸದಲ್ಲಿ ತೊಡಗುವಿಕೆ ಮತ್ತು ಸಂಪನ್ಮೂಲ ಕ್ರೋಡೀಕರಣವನ್ನು ನಮ್ಮಂಥ ತಜ್ಞ ವೈದ್ಯ ಸಮೂಹ ಈ ಹಿಂದೆಂದೂ ನೋಡಿಲ್ಲ. ರೋಗಧಾರಕ ಮತ್ತು ರೋಗದ ಹಬ್ಬುವಿಕೆಯನ್ನು ತಗ್ಗಿಸುವ ಕ್ರಮಗಳನ್ನು ವಿವಿಧ ಆಡಳಿತ ಮತ್ತು ಪ್ರದೇಶಗಳ ಮಟ್ಟಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಈ ಸಾಂಕ್ರಾಮಿಕ ರೋಗಕ್ಕೆ ತಡೆ ಒಡ್ಡಲು ಸಾಮಾಜಿಕ (ದೈಹಿಕ) ಅಂತರ, ಸಂಪರ್ಕಕ್ಕೊಳಗಾದವರ ಪತ್ತೆಹಚ್ಚುವಿಕೆ ಮತ್ತು ಕೋವಿಡ್‌-19 ಡಯಾಗ್ನೊàಸ್ಟಿಕ್‌ ಪರೀಕ್ಷೆಗಳನ್ನು ಯುದ್ಧದ ತಯಾರಿಯಂತೆ ಮಾಡಲಾಗುತ್ತಿದೆ. ಈ ಕಾರ್ಯಗಳ ಚಕ್ರಗಳಿಗೆ ಕಡ್ಡಿ ತೂರಿಸುವಂತಹ ಕೆಲವು ಧಾರ್ಮಿಕ ಮತ್ತು ರಾಜಕೀಯ ಕೂಟಗಳ ಅಪವಾದಗಳ ನಡುವೆಯೂ ಇದು ಫಲಪ್ರದವಾಗುವ ಹಾಗೆ ಕಾಣುತ್ತಿದೆ.

ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡರೂ ಕೋವಿಡ್‌-19 ಸುಲಭವಾಗಿ ಕಣ್ಮರೆಯಾಗುವುದಿಲ್ಲ. ಮೇಲೆ ಹೇಳಿದ ಎಚ್‌1ಎನ್‌1 ಇನ್‌ಫ‌ುÉಯೆಂಜಾದ ಉದಾಹರಣೆಯಿಂದ ಕಂಡುಕೊಂಡಿರುವ ಹಾಗೆ ನಾವು ಕೋವಿಡ್‌-19ಗೆ ಲಸಿಕೆಗಳನ್ನು ಮತ್ತು ಪರಿಣಾಮಕಾರಿ ಔಷಧಗಳನ್ನು ಅಭಿವೃದ್ಧಿಪಡಿಸಿದರೂ ಮುಂದಿನ ಕೆಲವು ವರ್ಷಗಳ ಕಾಲ ಈ ಕೋವಿಡ್‌-19 ರೋಗವು ನಮ್ಮ ಜನರಿಗೆ ತೊಂದರೆ ಕೊಡಬಹುದು. ಈ ವೈರಸ್‌ ಎಚ್‌1ಎನ್‌1 ಇನ್‌ಫ್ಲೂಯೆಂಜಾ ವೈರಸ್ಸಿನಂತೆ ಭಾರತಕ್ಕೆ “ಸ್ಥಳೀಯ’ವಾಗಬಹುದು ಮತ್ತು ಪ್ರತೀ ವರ್ಷ ಸಾವಿರಾರು ಜೀವಗಳಿಗೆ ಕಂಟಕವಾಗಬಹುದು.

ಸಮಯ ಮುಂದುವರಿದಂತೆ ಶೀತ – ಜ್ವರ ಇರುವ ಹೆಚ್ಚು ಹೆಚ್ಚು ರೋಗಿಗಳನ್ನು ನಾವು ಖಂಡಿತವಾಗಿಯೂ ಎಚ್‌1ಎನ್‌1, ಕೋವಿಡ್‌-19 ಅಥವಾ ಇನ್ನೊಂದು ವೈರಲ್‌ ಸೋಂಕು ಎಂದು ನಿಖರವಾಗಿ ಪತ್ತೆ ಮಾಡಬಹುದು. ನಿರ್ದಿಷ್ಟ ಡಯಾಗ್ನೊàಸ್ಟಿಕ್‌ ಪರೀಕ್ಷೆಗಳನ್ನು ಬಳಸಿಕೊಂಡು ಈ ಮಾರಕ ಕಾಯಿಲೆಗಳನ್ನು ತ್ವರಿತವಾಗಿ ಸಾಬೀತುಪಡಿಸಿ ವೈದ್ಯರು ಇವನ್ನು ಸಾಮಾನ್ಯ “ವೈರಲ್‌ ಸೋಂಕು’ ಎಂದು ತಳ್ಳಿಹಾಕದೆ ಅಡೆನೊವೈರಸ್‌, ರೈನೋವೈರಸ್‌ ಸೇರಿದಂತೆ ಇದೇ ರೀತಿಯ ಕಾಯಿಲೆಗಳಿಗೆ ಕಾರಣವಾಗುವ ಹಲವಾರು ಅನೇಕ ವೈರಸ್‌ಗಳನ್ನು ಸ್ಪಷ್ಟವಾಗಿ ಗುರುತಿಸಲು ಪ್ರಾರಂಭಿಸಬಹುದು.

ನಾವೇನು ಮಾಡಬೇಕು? ನಮ್ಮ ಹೊಣೆಯೇನು?
ಕೋವಿಡ್‌-19 ರೋಗಕ್ಕೆ ಲಸಿಕೆ ಇದ್ದರೂ ಅಥವಾ ಇಲ್ಲದಿದ್ದರೂ; ಪರಿಣಾಮ ಕಾರಿ ಔಷಧ ಇದ್ದರೂ ಅಥವಾ ಇಲ್ಲದಿದ್ದರೂ ನಾವು ಹಲವಾರು ವೈಯಕ್ತಿಕ ಮತ್ತು ಸಾಮಾಜಿಕ ಶಿಸ್ತನ್ನು ಕಾಪಾಡಿಕೊಳ್ಳಲೇಬೇಕು. ಈಗಿರುವ ಲಾಕ್‌ ಡೌನ್‌ ನಮಗೆ ಅಲ್ಪಾವಧಿಯಲ್ಲಿ ಬಹಳ ಸಹಾಯಕ ಎನ್ನುವುದರಲ್ಲಿ ಸಂಶಯವಿಲ್ಲ, ಆದರೆ ದೀರ್ಘಾವಧಿಯಲ್ಲಿ ಅದು ಅಪ್ರಸ್ತುತ. ನಾವು ನಮ್ಮ ಸಾಮಾಜಿಕ ನಡವಳಿಕೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸುಧಾರಿಸಿಕೊಳ್ಳಲೇ ಬೇಕು. ಕೋವಿಡ್‌-19 ಮತ್ತು ಎಚ್‌1ಎನ್‌1 ಎರಡನ್ನೂ ತಗ್ಗಿ-ಬಗ್ಗಿಸುವ ಮತ್ತು ನಿಲ್ಲಿಸುವ ನಿರ್ಣಾಯಕ ಕ್ರಮಗಳು ಒಂದೇ. ದೇಶದಲ್ಲಿ ನಾವು ಈಗ ಏನು ಮಾಡುತ್ತಿದ್ದೇವೆ? ದೈಹಿಕ ಅಂತರ ಕಾಪಾಡಿಕೊಳ್ಳುತ್ತಿದ್ದೇವೆ, ವೈಯಕ್ತಿಕ ನೈರ್ಮಲ್ಯ ಹೆಚ್ಚಿಸಿಕೊಂಡಿದ್ದೇವೆ, ಕೆಮ್ಮಿದಾಗ ಅಥವಾ ಸೀನಿದಾಗ ನಮ್ಮ ಬಾಯಿಯಿಂದ ತುಂತುರು ಹನಿಗಳು ಚಿಮ್ಮಿ ಹರಡದಂತೆ ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದೇವೆ, ಮಾಸ್ಕ್ ಹಾಕಿಕೊಳ್ಳುತ್ತೇವೆ, ಹೊರಗೆಲ್ಲೂ ಉಗುಳದೆ ಇರುತ್ತೇವೆ ಇತ್ಯಾದಿ – ಇವು ಈ ಸೋಂಕುಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡು ತ್ತವೆ. ಅಷ್ಟೇ ಅಲ್ಲದೆ, ಈ ಶಿಸ್ತಿನ ಕ್ರಮಗಳು ಈ ಉಸಿರಾಟದ ಸೋಂಕು ಗಳನ್ನು ಮಾತ್ರವಲ್ಲದೆ ಟೈಫಾಯಿಡ್‌, ಅಮೀಬಿಯಾಸಿಸ್‌, ಕಾಲರಾ, ವಾಂತಿ – ಭೇದಿ ಮತ್ತು ಅನಾದಿಕಾಲದಿಂದ ನಮ್ಮನ್ನು ಕಾಡುತ್ತಿರುವ ಅನೇಕ ಕಾಯಿಲೆ ಗಳ ಅಪಾಯವನ್ನೂ ಕಡಿಮೆ ಮಾಡುತ್ತವೆ. ಈ ವೈಯಕ್ತಿಕ ನೈರ್ಮಲ್ಯದ ಆಂದೋಲ ನವು ಸ್ವತ್ಛ ಭಾರತ ಅಭಿಯಾನದ ಒಂದು ಪ್ರಮುಖ ಅಂಗವಾಗಬೇಕು.

1980ರ ದಶಕದಲ್ಲಿ ಎಚ್‌ಐವಿ – ಏಡ್ಸ್‌ ಹೊರಹೊಮ್ಮುವಿಕೆಯು ಮನುಷ್ಯರ ಲೈಂಗಿಕ ನಡವಳಿಕೆಯನ್ನು ಗಮನಾರ್ಹವಾಗಿ ಬದಲಾಯಿಸಿತು. 2001ರ ಸೆ.11ರ ದಾಳಿಯು ನಮ್ಮ ಸುರಕ್ಷತೆಯ ವಿಧಾನಗಳನ್ನೇ ಶಾಶ್ವತವಾಗಿ ಬದಲಾಯಿಸಿತು, ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಈಗ ನಾವು ಎದುರಿಸುತ್ತಿರುವ ಕೋವಿಡ್‌-19 ಅಂತಹದ್ದೇ ಒಂದು ಪ್ರಮುಖ ಘಟನೆ. ಇದರ ಪರಿಣಾಮವಾಗಿ ನಮ್ಮ ದೈನಂದಿನ ಜೀವನದ ಪ್ರತಿಯೊಂದು ಅಂಶದಲ್ಲೂ ಸಾಮಾಜಿಕ ನಡವಳಿಕೆ ಮತ್ತು ವೈಯಕ್ತಿಕ ನೈರ್ಮಲ್ಯ ಅಭ್ಯಾಸಗಳನ್ನು ಶಾಶ್ವತವಾಗಿ ರೂಢಿಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಅನಿವಾರ್ಯವಾಗಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗ ಗಳು ನಮಗೆ ಹೆಚ್ಚು ಅಪಾಯವನ್ನು ಉಂಟುಮಾಡದಂತೆ ಹದ್ದುಬಸ್ತಿನಲ್ಲಿ ಇರಿಸಿ ಕೊಳ್ಳಲು ಅಗತ್ಯವಾಗಿರುವ, ನಮ್ಮ ಸಾಮಾಜಿಕ ಸಿದ್ಧತೆಯನ್ನು ಹರಿತ ಗೊಳಿಸಿಕೊಳ್ಳುವುದಕ್ಕೆ ಇರುವ ಒಂದು ಅವಕಾಶ. ಈಗ ಈ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು.

ಡಾ| ಶಶಿಕಿರಣ್‌ ಉಮಾಕಾಂತ್‌
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಮೆಡಿಸಿನ್‌ ವಿಭಾಗ,
ಡಾ| ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ
ನೋಡಲ್‌ ಅಧಿಕಾರಿ,
ಕೋವಿಡ್‌-19 ಆಸ್ಪತ್ರೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next