Advertisement

ಬಿಎಸ್‌ವೈ ನಡೆ-ನುಡಿಯಲ್ಲಿ ಬದಲಾವಣೆ

08:52 AM Jul 30, 2019 | Sriram |

ಬೆಂಗಳೂರು: ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ ಅವರ ನಡೆ, ನುಡಿ, ಕಾರ್ಯವೈಖರಿಯಲ್ಲಿ ಕೆಲ ಬದಲಾವಣೆ ಗೋಚರಿಸುತ್ತಿದ್ದು, ಅದರ ಹಿಂದೆ ಬಿಜೆಪಿ ಹೈಕಮಾಂಡ್‌ನ‌ ಛಾಯೆ ಇರುವಂತಿದೆ.

Advertisement

ತರಾತುರಿಯಲ್ಲಿ ರೂಪಿಸುವ ಕಾರ್ಯತಂತ್ರ, ಶರವೇಗದಲ್ಲಿ ಅದರ ಅನುಷ್ಠಾನ, ಏಕಪಕ್ಷೀಯ ತೀರ್ಮಾನ ಕೈಗೊಳ್ಳುವ ಆತುರದ ನಡೆಗಿಂತ ಪರಿಸ್ಥಿತಿಗೆ ತಕ್ಕಂತೆ ಸಮಾಲೋಚಿಸಿ ಕಾರ್ಯ ಸೂಚಿ ತಯಾರಿ, ಯೋಜಿತ ರೀತಿಯಲ್ಲಿ ಜಾರಿಗೊಳಿಸಿ, ಸುಸ್ಥಿರ ಆಡಳಿತ ನೀಡಬೇಕೆಂಬ ಸೂಚನೆಯನ್ನು ವರಿಷ್ಠರು ರವಾನಿಸಿ ದಂತಿದೆ. ಅದರ ಪರಿಣಾಮ ಯಡಿಯೂರಪ್ಪನವರ ನಡೆ-ನುಡಿಯಲ್ಲಿ ವ್ಯಕ್ತವಾಗುತ್ತಿದೆ ಎಂಬುದು ಹಿರಿಯ ನಾಯಕರ ಅಭಿಮತ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಈ ಹಿಂದೆ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದಾಗಿನ ನಡೆ ಹಾಗೂ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕಾರಕ್ಕಿಂತ ಮುನ್ನ ತೋರಿದ ವರ್ತನೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಅವರ ಆಪ್ತರೇ ಗುರುತಿಸುತ್ತಾರೆ.

ಮೈತ್ರಿ ಸರ್ಕಾರ ಕಳೆದ ಮಂಗಳವಾರ ಬಹುಮತ ಸಾಬೀತುಪಡಿಸಲಾಗದೆ ಪತನವಾಗುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಯಡಿಯೂರಪ್ಪ ಅವರು ಮರುದಿನ ಬುಧವಾರವೇ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ಕೋರಿ ಸಮಯ ನೀಡುತ್ತಿದ್ದಂತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂಬ ಮಾತು ಪಕ್ಷದಲ್ಲೇ ದಟ್ಟವಾಗಿ ಕೇಳಿ ಬಂದಿತ್ತು. ಯಡಿಯೂರಪ್ಪ ಅವರ ನಡೆಯನ್ನು ಸಮೀಪದಿಂದ ಬಲ್ಲ ಬಹುತೇಕರ ನಿರೀಕ್ಷೆಯೂ ಅದೇ ಆಗಿತ್ತು. ಆದರೆ, ಆಗಿದ್ದು ಮಾತ್ರ ಬೇರೆ.

ಮಂಗಳವಾರ ಮೈತ್ರಿ ಸರ್ಕಾರ ಪತನವಾದರೂ ಬುಧವಾರ ಹಾಗೂ ಗುರುವಾರ ಬಿಜೆಪಿ ವತಿಯಿಂದ ಸರ್ಕಾರ ರಚನೆಗೆ ಯಾವುದೇ ಪ್ರಯತ್ನ ಕಾಣಲಿಲ್ಲ. ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆ ಬಗ್ಗೆ ತಿಳಿಸಿ, ಸರ್ಕಾರ ರಚನೆಗೆ ಅವಕಾಶ ಕೋರಲು ದೆಹಲಿಗೆ ತೆರಳಿದ ರಾಜ್ಯ ಬಿಜೆಪಿ ನಿಯೋಗಕ್ಕೂ ಹೈಕಮಾಂಡ್‌ನಿಂದ ತಕ್ಷಣ ಹಸಿರು ನಿಶಾನೆ ಸಿಗದಿದ್ದಾಗಲೇ ಪರಿಸ್ಥಿತಿ ಹಿಂದಿನಂತಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅಂತಿಮವಾಗಿ ವರಿಷ್ಠರು ಒಪ್ಪಿಗೆ ನೀಡಿದ ಬಳಿಕವಷ್ಟೇ ಶುಕ್ರವಾರ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದರು.

Advertisement

ಗಮನಾರ್ಹ ನಡೆ: ಬುಧವಾರ ಬೆಳಗ್ಗೆ ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅವಕಾಶ ಕೋರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ದಿನ ಬೆಳಗ್ಗೆ ಮನೆಯಿಂದ ಹೊರಟ ಯಡಿಯೂರಪ್ಪ ಅವರು ಕೇಶವ ಕೃಪಾಗೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರೊಂದಿಗೆ ಮಾತುಕತೆ ನಡೆಸಿದರು. ಗುರುವಾರ ಬಹುತೇಕ ಮನೆಯಲ್ಲೇ ಕಳೆದ ಅವರು ಶುಕ್ರವಾರ ವರಿಷ್ಠರ ಸೂಚನೆ ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ಪಡೆದರು.

ಬಳಿಕ ಕಾರ್ಗಿಲ್ ವಿಜಯ ದಿವಸ್‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದ್ದರೂ ಅವರಿನ್ನೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಅಲ್ಲದೇ, ಕಾರ್ಗಿಲ್ ವಿಜಯ ದಿವಸ್‌ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ 8.45ಕ್ಕೆ ಆಯೋಜನೆಯಾಗಿತ್ತು. ಹಾಗಿದ್ದರೂ, ಮಧ್ಯಾಹ್ನ 12ರ ಸುಮಾರಿಗೆ ಸೇನಾ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದು, ಗಮನಾರ್ಹ ನಡೆ.

ಸಂಜೆ 6ರಿಂದ 6.30ರ ಅವಧಿಯಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾ ಗಿತ್ತು. ಅದಕ್ಕೂ ಮೊದಲು ತಮ್ಮ ನಿವಾಸದಿಂದ ಹೊರಟ ಯಡಿಯೂರಪ್ಪ ಅವರು, ಬಿಜೆಪಿ ಕಾರ್ಯಾಲಯಕ್ಕೆ ತೆರಳಿದರು. ಪಕ್ಷದ ನಾಯಕರು, ಮುಖಂಡರು, ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದ ಯಡಿಯೂರಪ್ಪ, ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಅಭಿನಂದನೆ ಸಲ್ಲಿಸಿ, ನಂತರ ರಾಜಭವನದ ಕಡೆಗೆ ಹೆಜ್ಜೆ ಹಾಕಿದ್ದು ಕೂಡ ಅಪರೂಪದ ಬೆಳವಣಿಗೆ ಎನ್ನುತ್ತದೆ ಆಪ್ತ ಬಳಗ.

ಮುಖ್ಯಮಂತ್ರಿಯಾಗಿ ವಿಧಾನಸೌಧದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ಚೊಚ್ಚಲ ಸಚಿವ ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲೂ ಯಡಿಯೂ ರಪ್ಪ ಅವರು ಕಾರ್ಗಿಲ್ ವಿಜಯ ದಿನವನ್ನು ಸ್ಮರಿಸಿದರು. ’20 ವರ್ಷದ ಹಿಂದೆ ನಡೆದ ಕಾರ್ಗಿಲ್ ಯುದ್ದದಲ್ಲಿ ನಾವು ಜಯ ಗಳಿಸಿದ್ದು, ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದ ಬಳಿಕವಷ್ಟೇ ಮಾತು ಮುಂದುವರಿಸಿದ್ದು ಗಮನ ಸೆಳೆಯಿತು.

ಸಿದ್ಧಾಂತ, ಸಂಘಟನೆ ಮುಖ್ಯ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಸರ್ಕಾರಗಳು ಸಿದ್ಧಾಂತ, ಸಂಘಟನೆಗೆ ಅನುಗುಣವಾಗಿಯೇ ನಡೆಯಬೇಕು ಎಂಬುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆಶಯ. ಕಳೆದ ಐದು ವರ್ಷ ಗಳಿಂದ ಈ ವ್ಯವಸ್ಥೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೊಳಿಸುವ ಪ್ರಯತ್ನವನ್ನು ಅವರು ಮಾಡುತ್ತಾ ಬಂದಿದ್ದಾರೆ. ರಾಜ್ಯದಲ್ಲೂ ಸರ್ಕಾರ ರಚಿಸಿ ಅದನ್ನು ಯಡಿಯೂರಪ್ಪ ಅವರೇ ಮುನ್ನಡೆಸಿದರೂ ಅದರಲ್ಲಿ ಪಕ್ಷದ ಸಿದ್ಧಾಂತ ಪಾಲನೆ ಜತೆಗೆ ಸಂಘಟನೆ ಯನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂಬುದು ವರಿಷ್ಠರ ನಿರ್ದೇಶನವಿದ್ದಂತಿರುವುದು ಮೇಲ್ನೋಟಕ್ಕೆ ಕಾಣುವಂತಿದೆ.

ಹೈಕಮಾಂಡ್‌ ಸೂಚನೆ ಸಹಜ
ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಕೆಲವೊಂದು ಅಂಶಗಳ ಪಾಲನೆ ಮುಖ್ಯ. 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಆದರೆ, ಈಗ ಕೇಂದ್ರದಲ್ಲಿ ಸ್ವಂತ ಬಲದ ಬಿಜೆಪಿ ಸರ್ಕಾರವಿದೆ. ಬಹಳಷ್ಟು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಹಾಗಾಗಿ, ವರಿಷ್ಠರು ಕೆಲ ಸೂಚನೆಗಳನ್ನು ನೀಡುವುದು ಸಹಜ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.

ಸಿಎಂ ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರಕ್ಕಿಂತ ಮೊದಲಿನ ಹಾಗೂ ನಂತರದ ಕೆಲ ನಡೆಯಲ್ಲಿ ಬದಲಾವಣೆಗಳಾಗಿದ್ದರೆ ಅಚ್ಚರಿಯಲ್ಲ. ಪಕ್ಷದ ಸಿದ್ಧಾಂತ ಪಾಲನೆ ಮತ್ತು ಸಂಘಟನೆ ದೃಷ್ಟಿಯಿಂದ ವರಿಷ್ಠರು ಕೆಲ ಸೂಚನೆ ನೀಡಿರಬಹುದು. ಅದನ್ನು ಯಡಿಯೂರಪ್ಪ ಅವರು ಹಿಂದಿನಿಂದಲೂ ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಪಕ್ಷ ಸಂಘಟನೆ ಹಾಗೂ ಉತ್ತಮ ಆಡಳಿತಕ್ಕೆ ವರಿಷ್ಠರು ಕೆಲವೊಂದು ನಿರ್ದೇಶನ, ಸಲಹೆ ನೀಡುವುದು ಸಾಮಾನ್ಯ ಎಂದು ಹೇಳಿದರು.

ಮಂಗಳವಾರ ಮೈತ್ರಿ ಸರ್ಕಾರ ಪತನವಾದ ನಂತರ ಬುಧವಾರ ಸರ್ಕಾರ ರಚನೆ ಸಂಬಂಧ ವರಿಷ್ಠರು ಯಾವುದೇ ಸೂಚನೆ ನೀಡದಿದ್ದುದು, ರಾಜ್ಯ ಬಿಜೆಪಿ ನಿಯೋಗ ದೆಹಲಿಗೆ ತೆರಳಿ ಮನವರಿಕೆ ಮಾಡಿಕೊಟ್ಟರೂ ತಕ್ಷಣಕ್ಕೆ ಹಸಿರು ನಿಶಾನೆ ತೋರದಿದ್ದುದು ಪರಿಸ್ಥಿತಿ ಹಿಂದಿನಂತಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪಕ್ಷದ ಆಗುಹೋಗುಗಳ ಮೇಲೆ ಹೈಕಮಾಂಡ್‌ ನಿರಂತರವಾಗಿ ನಿಗಾ ವಹಿಸಿರಲಿದೆ ಎಂಬ ಪರೋಕ್ಷ ಸಂದೇಶವನ್ನೂ ನೀಡಿದಂತಿದೆ. ಹಾಗೆಂದು ಸಂಪುಟ ರಚನೆ, ಖಾತೆ ಹಂಚಿಕೆ, ದೈನಂದಿನ ಆಡಳಿತದಲ್ಲಿ ಹೈಕಮಾಂಡ್‌ ಮಧ್ಯ ಪ್ರವೇಶಿಸಲಿದೆ ಎಂದರ್ಥವಲ್ಲ. ಪಕ್ಷದ ವರ್ಚಸ್ಸು, ಸಂಘಟನೆಗೆ ಹಾನಿಯಾಗದಂತೆ ಮುಂದುವರಿಯಬೇಕು ಎಂಬುದರ ಬಗ್ಗೆ ವರಿಷ್ಠರ ದೃಷ್ಟಿ ಇರಲಿದೆ ಎಂಬುದನ್ನು ತೋರಿಸುತ್ತದೆಯಷ್ಟೇ ಎಂದು ಅವರು ಹೇಳಿದರು.

-ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next