ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯಿಂದ ಬಿಬಿಎಂಪಿಯ ಶಾಲಾ ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.
ಕಳೆದ ವರ್ಷ ಬಿಬಿಎಂಪಿ ಶಾಲೆಗಳಲ್ಲಿನ 3,500 ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡಲಾಗಿತ್ತು. ಈ ತರಬೇತಿಯಿಂದ ಶಾಲಾ ಮಕ್ಕಳ ನಡೆವಳಿಕೆಯಲ್ಲಿ ಬದಲಾವಣೆ ಕಂಡು ಬಂದಿದ್ದು, ಬಿಬಿಎಂಪಿ ಶಾಲಾ ವಾತಾವರಣವೂ ಬದಲಾಗಿದೆ. ಇದರ ಜತೆಗೆ ದುಶ್ಚಟಗಳಿಂದಲೂ ಮಕ್ಕಳು ದೂರ ಉಳಿಯುತ್ತಿದ್ದಾರೆ ಹಾಗೂ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಫ್ರೇಜರ್‌ಟೌನ್‌ನ ಪಾಲಿಕೆಯ ಶಾಲೆಯ ಸಹಾಯಕ ಮುಖ್ಯ ಶಿಕ್ಷಕ ಬಾಳಪ್ಪ.
‘ಆಹಾರ ಮತ್ತು ಸ್ವಚ್ಛತೆಯ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡಿದೆ. ಸಮಾಜ ಸೇವಾ ಮನೋಭಾವವೂ ಬದಲಾಗಿದೆ. ತರಬೇತಿ ಪಡೆದ ಮಕ್ಕಳು ಇತರ ಮಕ್ಕಳಿಗೂ ತಿಳಿಸುತ್ತಿದ್ದಾರೆ. ತರಗತಿಯಲ್ಲಿ ಪೇಪರ್ ಹರಿಯುವುದು, ಕಸ ಎಸೆಯುವುದು ಸಂಪೂರ್ಣ ತಪ್ಪಿದೆ. ಶಿಕ್ಷಕರಿಗೆ ಗೌರವ ನೀಡುವುದು ಮತ್ತು ಶಿಕ್ಷಣದ ಕಡೆಗೂ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಅವರು ವಿವರಿಸುತ್ತಾರೆ.
ಬಿಬಿಎಂಪಿಯ ಶಾಲೆಗಳಿಗೆ ಬಡ, ಮಧ್ಯಮ ವರ್ಗದ ಮತ್ತು ಸ್ಲಂಗಳಲ್ಲಿ ನೆಲೆಸಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚುವಟಿಕೆಗಳಿಗೂ ಉತ್ತೇಜನ ನೀಡುವ ಮತ್ತು ಕೌಶಲ್ಯ ವೃದ್ಧಿಸುವ ಉದ್ದೇಶದಿಂದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡುವುದಕ್ಕೆ ಪಾಲಿಕೆ ಮುಂದಾಗಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಯಾವ ರೀತಿ ತರಬೇತಿ ನೀಡಬೇಕು ಎಬ ಕುರಿತು ಮೊದಲ ಹಂತದಲ್ಲಿ ದೊಡ್ಡಬಳ್ಳಪುರದ 120 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. 2019-20ನೇ ಸಾಲಿನ ಬಜೆಟ್‌ನಲ್ಲಿ ಈ ತರಬೇತಿಗೆ ಒಂದು ಕೋಟಿ ರೂ.ಗಳನ್ನು ಪಾಲಿಕೆ ಮೀಸಲಿರಿಸಿತ್ತು. ಕಳೆದ ವರ್ಷ ಪಾಲಿಕೆ ಶಾಲೆಗಳ ಮಕ್ಕಳ ನಡೆವಳಿಕೆಯಲ್ಲಿ ಬದಲಾವಣೆ ಕಂಡು ಬಂದಿರುವುದರಿಂದ, ಈ ವರ್ಷದಿಂದ ಬಿಬಿಎಂಪಿ ಶಾಲೆಗಳಲ್ಲಿ ದಾಖಲಾಗಿರುವ ಎಲ್ಲ ಮಕ್ಕಳಿಗೂ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡಲಾಗುತ್ತಿದೆ.
ಈ ಬಾರಿ ಜೂ.25ರವರೆಗೆ ಪಾಲಿಕೆ ಶಾಲೆಗಳಲ್ಲಿ 15,807 ಮಕ್ಕಳು ದಾಖಲಾಗಿದ್ದಾರೆ. ಆಗಸ್ಟ್‌ವರೆಗೆ ದಾಖಲಾತಿ ಮುಂದುವರಿಯಲಿದ್ದು, ಮತ್ತಷ್ಟು ಮಕ್ಕಳು ದಾಖಲಾಗುವ ಸಾಧ್ಯತೆ ಇದೆ. ಎಲ್ಲ ಮಕ್ಕಳಿಗೂ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡಲು ಬಿಬಿಎಂಪಿ ತೀರ್ಮಾನಿಸಿದೆ.
ದುಶ್ಚಟಗಳಿಂದ ದೂರ ಉಳಿಯಲು ಅನುವು: ಸ್ಲಂ ಮಕ್ಕಳು ಸಾಮಾನ್ಯವಾಗಿ ಉಳಿದ ಮಕ್ಕಳಿಗಿಂತ ಬೇಗ ದುಶ್ಚಟಗಳಿಗೆ ಬಲಿಯಾಗುತ್ತಾರೆ ಎಂಬ ಆರೋಪವಿದೆ. ಇದಕ್ಕೆ ಅಲ್ಲಿನ ವಾತಾವರಣವೂ ಕಾರಣ. ಮಕ್ಕಳನ್ನು ದುಶ್ಚಟಗಳಿಂದ ತಪ್ಪಿಸುವಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ನೆರವಾಗಿದೆ. ಘಟಕದಲ್ಲಿ ನೀಡುವ ತರಬೇತಿ ಗುಟ್ಕಾ, ತಂಬಾಕು ಮತ್ತು ಗಾಂಜಾ ಸೇವನೆಯಿಂದ ಮಕ್ಕಳನ್ನು ದೂರ ಉಳಿಸಿದೆ. ಇದು ಶಾಲಾ ಶಿಕ್ಷಕರಲ್ಲೂ ಆಶಾಭಾವನೆ ಮೂಡಿಸಿದೆ. ಮಕ್ಕಳು ದುಶ್ಚಗಳಿಂದ ದೂರವಾಗುವ ಜತೆಗೆ ಇತರರಿಗೂ ತಿಳಿವಳಿಕೆ ನೀಡುತ್ತಿದ್ದಾರೆ. ಮಕ್ಕಳೇ ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ ಎನ್ನುತ್ತಾರೆ ಬಿಬಿಎಂಪಿ ಶಾಲೆಯ ಶಿಕ್ಷಕರು.
ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಮಾರ್ಚ್ ಫಾಸ್ಟ್, ಸಮಾಜ ಸೇವೆ, ಸ್ವಚ್ಛತೆ, ಶಿಕ್ಷಣ, ಆರೋಗ್ಯ, ಮನೆಕೆಲಸ, ಶಿಸ್ತು, ನಡೆವಳಿಕೆ ಮತ್ತು ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ.