Advertisement

ಡಿಸಿ ಮನ್ನಾ ಭೂಮಿ ಆರ್‌ಟಿಸಿ ಬದಲಾಯಿಸಿ

02:16 PM Oct 25, 2017 | |

ಪುತ್ತೂರು: ಡಿಸಿ ಮನ್ನಾ ಭೂಮಿಯನ್ನು 1934ರಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಲಾಗಿದೆ. 20 ವರ್ಷದ ಬಳಿಕ ಇದನ್ನು ಅರಣ್ಯ ಇಲಾಖೆ ಹೆಸರಿಗೆ ಮಾಡಲಾಗಿದೆ. ಪುತ್ತೂರಿನ ಉಪನೋಂದಣಿ ಕಚೇರಿಯನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಿದಂತೆ ಅರಣ್ಯ ಇಲಾಖೆ ಹೆಸರಿನಲ್ಲಿದ್ದ ಜಾಗವನ್ನು ಎಸ್ಸಿ, ಎಸ್ಟಿಗಳ ಹೆಸರಿಗೆ ಬದಲಾಯಿಸಿ ಎಂಬ ಆಗ್ರಹ ಕೇಳಿಬಂದಿತು. 

Advertisement

ಪುತ್ತೂರು ತಾ. ಪಂ. ಸಭಾಂಗಣದಲ್ಲಿ ಮಂಗಳವಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ . ಪೊಲೀಸ್‌ ಅಧೀಕ್ಷಕ ವೇದಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಂಬೇಡ್ಕರ್‌ ತತ್ವರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್‌ ನಾಯ್ಕ, ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಡಿಸಿ ಮನ್ನಾ ಭೂಮಿಯನ್ನು ಎಸ್ಸಿ, ಎಸ್ಟಿಗಳಿಗೆ ನಿವೇಶನಕ್ಕೆಂದು ನೀಡಬೇಕು. ಟೆಂಟ್‌ ಕಟ್ಟಿ ಕುಳಿತವರಿಗೆ ಹಕ್ಕುಪತ್ರ ನೀಡಬೇಕು. ಈ ಜಾಗ ಶ್ರೀಮಂತರಿಗೆ ಸಿಗಬಾರದು. ಇತ್ತೀಚೆಗೆ ಗೇರು ಅಭಿವೃದ್ಧಿ ನಿಗಮದ ಯು.ಟಿ. ಖಾದರ್‌, ಎಸ್ಸಿ, ಎಸ್ಟಿಗಳಿಗೆ ಜಾಗ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಮ್ಮೆ ಪುತ್ತೂರಿಗೆ ಬಂದರೆ ಘೇರಾವ್‌ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಅನಂತಶಂಕರ, ಜಾಗ ಅರಣ್ಯ ಇಲಾಖೆ ಹೆಸರಿನಲ್ಲಿದೆ. ಸಮಿತಿ ತೀರ್ಮಾನದ ಬಳಿಕ ಕ್ರಮ ಕೈಗೊಳ್ಳಲು ಸಾಧ್ಯ ಎಂದರು.

ಒಂದೇ ದಿನದಲ್ಲಿ ಆಸ್ಪತ್ರೆ ಹೆಸರಿಗೆ ಆರ್‌ಟಿಸಿ ಬದಲಾವಣೆ ಮಾಡಿದಂತೆ ಅರಣ್ಯ ಇಲಾಖೆಯ ಹೆಸರಿನಲ್ಲಿರುವ ಜಾಗವನ್ನು ಎಸ್ಸಿ, ಎಸ್ಟಿಗಳ ಹೆಸರಿಗೆ ಬದಲು ಮಾಡಿ. ಬ್ರಿಟಿಷರು ಎಸ್ಸಿ, ಎಸ್ಟಿಗಳಿಗೆ ನೀಡಿದ ಡಿಸಿ ಮನ್ನಾ ಭೂಮಿ ಹಕ್ಕನ್ನು, ವರ್ಗಾಯಿಸಿದ್ದು ಕಂದಾಯ ಇಲಾಖೆ ತಪ್ಪು. ಹೋರಾಟ ಮುಂದುವರಿಸಲಾಗುವುದು. ತೊಂದರೆ ಆದರೆ ಅಧಿಕಾರಿಗಳೇ ಹೊಣೆ ಎಂದರು.

ದಲಿತ ಮುಖಂಡ ಸೋಮನಾಥ ಮಾತನಾಡಿ, ಯು.ಟಿ. ಖಾದರ್‌ ಕಾನೂನು ಪ್ರಕಾರ ಮಾತನಾಡಿದ್ದಾರೆ. ಡಿಸಿ ಮನ್ನಾ ಭೂಮಿಯನ್ನು ಒಂದು ಸಂಘಟನೆಗೆ ಮಾತ್ರ ನೀಡಬಾರದು. ಎಲ್ಲ ಎಸ್ಸಿ, ಎಸ್ಟಿಗಳಿಗೆ ಹಂಚಿ ನೀಡಬೇಕು ಎಂದರು. ಪರಿಶೀಲಿಸಿ ಕ್ರಮಗೊಳ್ಳುವುದಾಗಿ ವೇದಮೂರ್ತಿ ಭರವಸೆ ನೀಡಿದರು. 

Advertisement

ಸಮಿತಿ ಬರ್ಖಾಸ್ತುಗೊಳಿಸಿ
ದಲಿತ ಮುಖಂಡ ಆನಂದ ಮಿತ್ತಬೈಲು ಮಾತನಾಡಿ, ಡಿಸಿ ಮನ್ನಾ ಭೂಮಿಗಾಗಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಗಿರಿಧರ್‌ ನಾಯ್ಕ ಹೊರತುಪಡಿಸಿ ಸಮಿತಿಯ ಬೇರಾರಿಗೂ ಮಾಹಿತಿಯೇ ಇಲ್ಲ. ಮಂಗಳೂರಿನಲ್ಲಿ ಕುಳಿತು ಸಮಿತಿ ರಚಿಸಲಾಗಿದೆ. ಕಡಬ ಭಾಗದಲ್ಲಿ ಸಾಕಷ್ಟು ಡಿಸಿ ಮನ್ನಾ ಭೂಮಿ ಇದೆ. ಇದರ ಸುದ್ದಿಯೇ ಇಲ್ಲ. ಡಿಸಿ ಮನ್ನಾ ಭೂಮಿಯಲ್ಲಿ ಮನೆ ಮಾಡಿರುವ ಮೇಲ್ವರ್ಗದವರ ಜತೆ ಸಮಿತಿಯವರು ಮಾತುಕತೆ ನಡೆಸುತ್ತಿದ್ದಾರೆ ಎಂಬ ಆರೋಪವಿದೆ. ರಾಜಕೀಯ ಪ್ರೇರಿತ ಈ ಕಾರ್ಯಪಡೆಯನ್ನು ಬರ್ಖಾಸ್ತು ಮಾಡಿ ಎಂದರು. ಸೋಮನಾಥ ಮಾತನಾಡಿ, ಒಂದೂ ಸಭೆ ಆಗಿಲ್ಲ. ಹೀಗಿರುವಾಗ ಮಾತುಕತೆ, ಅವ್ಯವಹಾರ ಎಲ್ಲಿಂದ? ಶಾಸಕರ ನೇತೃತ್ವದ ಸಮಿತಿ ಬರ್ಖಾಸ್ತು ಮಾಡುವ ಪ್ರಶ್ನೆಯೇ ಇಲ್ಲ ಎಂದರು. 

ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಇಒ ಜಗದೀಶ್‌, ಸದಸ್ಯರಾದ ಹರೀಶ್‌ ಬಿಜತ್ರೆ, ಮೀನಾಕ್ಷಿ ಮಂಜುನಾಥ್‌, ಲಲಿತಾ ಈಶ್ವರ್‌, ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಉಪಸ್ಥಿತರಿದ್ದರು.

ವಲಸೆ ಪ್ರಮಾಣಪತ್ರ
ಹೊರಜಿಲ್ಲೆಯಿಂದ ಬಂದಿರುವ ಹೆಂಗಸಿಗೆ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಹಿಂದೆ ಇದ್ದ ಜಿಲ್ಲೆಯ ಪ್ರಮಾಣಪತ್ರ ಬೇಕೆಂದು ಕಂದಾಯ ಇಲಾಖೆ ಹೇಳುತ್ತಿದೆ ಎಂದಾಗ, ಸದ್ಯ ಯಾವುದೇ ಸರಕಾರಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಎ, ಆರ್‌ಐಗೆ ತಹಲ್ದಾರ್‌ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಲಿ ಕೆಲಸಕ್ಕೆ ಹೋಗುವ ಬಡ ಕುಟುಂಬವನ್ನು ಸತಾಯಿಸುವುದು ಸರಿಯಲ್ಲ ಎಂದು ಸಭೆ ಅಭಿಪ್ರಾಯಪಟ್ಟಾಗ, ಪರಿಶೀಲಿಸುವುದಾಗಿ ವೇದಮೂರ್ತಿ ಹೇಳಿದರು

ಜಾಗ ಕ್ಯಾನಲ್‌
ಬಾಬು ಪಾಲ್ತಾಡಿ ಮಾತನಾಡಿ, 1996-97ರಲ್ಲಿ ತಂದೆ ಹೆಸರಿಗೆ ಅಕ್ರಮ- ಸಕ್ರಮದಡಿ 1.4 ಎಕರೆ ಜಮೀನು ಮಂಜೂರಾಗಿದೆ. ಆದರೆ ಇದನ್ನು ಸ್ಥಳೀಯರೊಬ್ಬರು ತಮ್ಮ ಬಲ ಪ್ರದರ್ಶಿಸಿ, ಕ್ಯಾನ್ಸಲ್‌ ಮಾಡಿಸಿದ್ದಾರೆ. 25.40 ಎಕರೆ ಜಾಗ ಇರುವ ಅವರು ತನ್ನ ಜಮೀನಿಗೆ ತೊಂದರೆ ಪಡಿಸುತ್ತಿದ್ದಾರೆ. ಒತ್ತಡಕ್ಕೆ ಮಣಿದು, ಕ್ಯಾನ್ಸಲ್‌ ಮಾಡಿಸಿದ ತಹಶೀಲ್ದಾರ್‌ ಕ್ರಮವೇ ತಪ್ಪು. ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next