Advertisement

ಖಂಡಿತ ಯಶಸ್ವಿಯಾಗಲಿದೆ ಚಂದ್ರಯಾನ-3

10:08 AM Jan 04, 2020 | sudhir |

ನಾನು ಭಾವುಕನಾಗಿದ್ದಾಗ, ಗೌರವಾನ್ವಿತ ಪ್ರಧಾನಮಂತ್ರಿಗಳು ನನ್ನ ಮನಸ್ಸಲ್ಲೇನು ಓಡುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಂಡು ತಬ್ಬಿ  ಸಾಂತ್ವನ ಹೇಳಿದರು. ಪ್ರಧಾನಿಯೊಬ್ಬರ ಈ ರೀತಿಯ ಬೆಂಬಲ ನಮಗೆಲ್ಲರಿಗೂ ಇನ್ನಷ್ಟು ಪರಿಶ್ರಮ ಪಡುವುದಕ್ಕೆ ಪ್ರೇರೇಪಿಸಿತು.

Advertisement

‌ಗನಯಾನಕ್ಕಾಗಿ ಭಾರತೀಯ ವಾಯುಪಡೆಯ ನಾಲ್ಕು ಜನರನ್ನು ಆಯ್ಕೆ ಮಾಡಿದ್ದು, ಇವರೆಲ್ಲ ಬಹಳ ಆರೋಗ್ಯವಂತರಾಗಿದ್ದಾರೆ.

ಚಂದ್ರನನ್ನು ಸುತ್ತುತ್ತಿರುವ ಚಂದ್ರಯಾನ-2ರ ಆರ್ಬಿಟರ್‌ ಹೇಗೆ ಕಾರ್ಯಾಚರಿಸುತ್ತಿದೆ? ಅಲ್ಲಿಂದ ಯಾವ ರೀತಿಯ ಮಾಹಿತಿ ಸಿಗುತ್ತಿದೆ?
ಕುತೂಹಲದ ವಿಷಯವೆಂದರೆ, ನಾವು ಆರ್ಬಿಟರ್‌ ಅನ್ನು ಒಂದು ವರ್ಷಕ್ಕಾಗಿ ರೂಪಿಸಿದ್ದೆವು, ಆದರೆ ತಂಡದ ಸಕ್ಷಮ ನಿರ್ವಹಣೆಯ ಫ‌ಲವಾಗಿ ಅದೀಗ ಏಳೂವರೆ ವರ್ಷ ಕಾರ್ಯಾಚರಿಸಲಿದೆ. ಆರ್ಬಿಟರ್‌ನಲ್ಲಿ ಸುಮಾರು 8 ವೈಜ್ಞಾನಿಕ ಪರಿಕರಗಳನ್ನು ಅಳವಡಿಸಿದ್ದೇವೆ. ಈಗದು ಅಪಾರ ಪ್ರಮಾಣದಲ್ಲಿ ವೈಜ್ಞಾನಿಕ ಮಾಹಿತಿಯನ್ನು ಕಳುಹಿಸಿಕೊಡುತ್ತಿದೆ. ನಾವು ದೇಶಾದ್ಯಂತ ವಿಜ್ಞಾನಿಗಳನ್ನು ಒಗ್ಗೂಡಿಸಿ, ಅವರಿಗೆ ಈ ಮಾಹಿತಿ-ದತ್ತಾಂಶಗಳನ್ನು ತಲುಪಿಸುತ್ತಿದ್ದೇವೆ. ಈಗಾಗಲೇ ಈ ನಿಟ್ಟಿನಲ್ಲಿ 2 ವೈಜ್ಞಾನಿಕ ಸಮಾವೇಶಗಳನ್ನು ನಡೆಸಲಾಗಿದ್ದು, ಈಗ ಮೂರನೇ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದೇವೆ. ಆಗ ವಿಜ್ಞಾನಿಗಳಿಗೆಲ್ಲ ಈ ಮಾಹಿತಿಯನ್ನು ಒದಗಿಸುತ್ತೇವೆ. ಅವರು ಈ ದತ್ತಾಂಶಗಳನ್ನೆಲ್ಲ ಪರಿಶೀಲಿಸಲಿದ್ದಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಚಂದ್ರಯಾನ-2ರ ಆರ್ಬಿಟರ್‌ ಅದ್ಭುತವಾಗಿ ಕೆಲಸ ಮಾಡುತ್ತಿದೆ. ನಿಸ್ಸಂಶಯವಾಗಿಯೂ ಇದು ಕೆಲವು ಅಪ್ರತಿಮ ಸಂಶೋಧನೆಗಳಿಗೆ, ಆವಿಷ್ಕಾರಗಳಿಗೆ ಕಾರಣವಾಗಲಿದೆ ಎಂಬ ಭರವಸೆ ನನಗಿದೆ.

ಚಂದ್ರಯಾನ 3ಕ್ಕೆ ಇಸ್ರೋ ಸಜ್ಜಾಗುತ್ತಿದೆ. ಚಂದ್ರಯಾನ-2ಕ್ಕೂ ಇದಕ್ಕೂ ಏನು ವ್ಯತ್ಯಾಸ?
ಲ್ಯಾಂಡರ್‌ ಮತ್ತು ರೋವರ್‌ನ ದೃಷ್ಟಿಕೋನದಿಂದ ನೋಡಿದಾಗ ಇವೆರಡೂ ಕಾರ್ಯಕ್ರಮಗಳು ಒಂದೇ ರೀತಿಯಲ್ಲೇ ಇವೆ. ಆಗಲೇ ಹೇಳಿದಂತೆ, ಚಂದ್ರಯಾನ-2 ಯೋಜನೆಯ ಆರ್ಬಿಟರ್‌ ಚೆನ್ನಾಗಿ ಕೆಲಸ ಮಾಡುತ್ತಿರುವುದರಿಂದ ನಾವು ಚಂದ್ರಯಾನ-3ಕ್ಕೆ ಪ್ರತ್ಯೇಕ ಆರ್ಬಿಟರ್‌ ಕಳಿಸುವ ಬದಲು, ಈಗ ಇರುವುದನ್ನೇ ಬಳಸಿಕೊಳ್ಳುತ್ತೇವೆ. ಚಂದ್ರಯಾನ-3ರಲ್ಲಿ ಆರ್ಬಿಟರ್‌ ಬದಲಾಗಿ ಒಂದು ಪ್ರೊಪಲ್ಶನ್‌ ಮಾಡ್ನೂಲ್‌ ಇರುತ್ತದೆ. ಇದು ಲ್ಯಾಂಡರ್‌ ಮತ್ತು ರೋವರ್‌ ಅನ್ನು ಚಂದ್ರನ ಮೇಲೆ ಇಳಿಸಲು ಸಹಕರಿಸುತ್ತದೆ. ಇದನ್ನು ಹೊರತುಪಡಿಸಿದರೆ, ಎರಡೂ ಕಾರ್ಯಕ್ರಮಗಳ ನಡುವೆ ವ್ಯತ್ಯಾಸವಿಲ್ಲ.

ಚಂದ್ರಯಾನ-3 ಯೋಜನೆಗೆ ಎಷ್ಟು ಖರ್ಚಾಗಲಿದೆ?
ಪ್ರೊಪಲ್ಶನ್‌ ಮಾಡ್ನೂಲ್‌, ರೋವರ್‌ ಮತ್ತು ಲ್ಯಾಂಡರ್‌ಗೆ 250 ಕೋಟಿ ರೂಪಾಯಿ ಆಗುತ್ತದೆ. ಉಡಾವಣೆಗೆ ನಾವು ಜಿಎಸ್‌ಎಲ್‌ವಿ-ಮಾರ್ಕ್‌-3 ರಾಕೆಟ್‌ ಬಳಸಲಿದ್ದೇವೆ, ಇದಕ್ಕೆ ಸುಮಾರು 365 ಕೋಟಿ ಖರ್ಚಾಗಲಿದೆ.

Advertisement

ರೋವರ್‌ ಮತ್ತು ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಸಾಧ್ಯತೆ ಅಧಿಕವಿದೆಯೇ?
ನಾವು ಚಂದ್ರಯಾನ-2 ಯೋಜನೆಯಿಂದ ದೊರೆತ ಪ್ರಾಥಮಿಕ ಡೇಟಾಗಳಿಂದ ಅನೇಕ ಪಾಠಗಳನ್ನು ಕಲಿತಿದ್ದೇವೆ. ಈ ಮಾಹಿತಿಯನ್ನು ಬಳಸಿಕೊಂಡು ಚಂದ್ರಯಾನ-3ನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದೇವೆ.

ಇಸ್ರೋದ ಪತ್ರಿಕಾಗೋಷ್ಠಿಯಲ್ಲಿ ನೀವು ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾತ್ರೆ “ಗಗನಯಾನದ’ ಬಗ್ಗೆ ಮಾತನಾಡಿದ ಮೇಲಂತೂ ಜನರಲ್ಲಿ ಉತ್ಸಾಹ ಮಡುಗಟ್ಟಿದೆ. ಹೇಗೆ ನಡೆದಿದೆ ತಯಾರಿ? ಏನಿದು ಗಗನಯಾನ, ಹೇಳುತ್ತೀರಾ?
ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳು ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುವ ಮುನ್ನವೇ ನಾವು ಮಾನವ ಸಹಿತ ಗಗನಯಾತ್ರೆ ಮಾಡಬೇಕು ಎಂದು ಭಾಷಣದಲ್ಲಿ ಹೇಳಿದ್ದರು. ಇದರ ಆಧಾರದಲ್ಲಿ ಇಸ್ರೋ ಬಹಳ ಶ್ರಮ ಪಡುತ್ತಿದೆ. ಈಗಾಗಲೇ ಈ ಯೋಜನೆಯ ಡಿಸೈನ್‌ ಹಂತ ಮುಗಿದಿದೆ. ಸರ್ಟಿಫಿಕೇಷನ್‌ ಪ್ರಕ್ರಿಯೆಯೂ ಆಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಗಗನಯಾನ ಸಲಹಾ ಸಮಿತಿಯನ್ನೂ ರಚಿಸಲಾಗಿದ್ದು, ಮೊದಲ ಸಭೆಯನ್ನೂ ಮಾಡಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಯೋಜನೆಯ ಅತಿದೊಡ್ಡ ಪ್ರಕ್ರಿಯೆಯಾದ ಗಗನಯಾತ್ರಿಗಳ ತರಬೇತಿ ಪ್ರಕ್ರಿಯೆಯನ್ನು ಕಳೆದ ವರ್ಷವೇ ಆರಂಭಿಸಿದ್ದು, ಆಯ್ಕೆಯಾದವರ ಆರೋಗ್ಯ ತಪಾಸಣೆಯೂ ಆಗಿದೆ(ಭಾರತ ಮತ್ತು ರಷ್ಯಾದಲ್ಲಿ ). ಗಗನಯಾನಕ್ಕಾಗಿ ಭಾರತೀಯ ವಾಯುಪಡೆಯ ನಾಲ್ಕು ಜನರನ್ನು ಆಯ್ಕೆ ಮಾಡಿದ್ದು, ಇವರೆಲ್ಲ ಬಹಳ ಆರೋಗ್ಯವಂತರಾಗಿದ್ದಾರೆ. ಇದೇ ತಿಂಗಳ ಮೂರನೇ ವಾರದಿಂದ ಇವರಿಗೆಲ್ಲ ರಷ್ಯಾದಲ್ಲಿ ತರಬೇತಿ
ನೀಡಲಾಗುತ್ತದೆ. ಈ ವರ್ಷಪೂರ್ತಿ ಗಗನಯಾನಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನೂ ನಾವು ನಡೆಸಲಿದ್ದೇವೆ. ಇಂಜಿನ್‌ಗಳು ಮತ್ತು “ಸಿಬ್ಬಂದಿ ಪಾರು ವ್ಯವಸ್ಥೆ’ಯ ಮೇಲೆ ಅತ್ಯಂತ ಜಟಿಲ ಪರೀಕ್ಷೆಗಳು ಆಗಲಿವೆ. ಪ್ರತಿಯೊಂದು ಪರೀಕ್ಷೆಯೂ ರಾಕೆಟ್‌ ಉಡಾವಣೆಯಷ್ಟೇ ಜಟಿಲವಾದ ಪ್ರಕ್ರಿಯೆಯಾಗಿರುತ್ತದೆ. ಒಟ್ಟಲ್ಲಿ ಈ ವರ್ಷದ ಅಂತ್ಯದೊಳಗೆ, ಒಮ್ಮೆಯಾದರೂ ಮಾನವ”ರಹಿತ’ ಗಗನಯಾನ ಪರೀಕ್ಷೆ ಮಾಡಬೇಕು ಎಂಬುದು ನಮ್ಮ ಇಚ್ಛೆ. ಮಾನವರಹಿತ ಗಗನಯಾನ ಅಂದರೆ, ಅದರಲ್ಲಿ ಮನುಷ್ಯನ ಬದಲು, ಮನುಷ್ಯನನ್ನು ಹೋಲುವಂಥ ಹ್ಯೂಮನಾಯ್ಡ(ರೊಬಾಟ್‌) ಇರುತ್ತದೆ. ಗಗನನೌಕೆಯ ವಾತಾವರಣ ಈ ಹ್ಯೂಮನಾಯ್ಡ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನಾವು ಪರೀಕ್ಷಿಸಲಿದ್ದೇವೆ.

ಗಗನಯಾನಕ್ಕೆ ಆಯ್ಕೆಯಾದ ಈ ನಾಲ್ವರು ಯಾರು, ಯಾವ ಊರಿನವರು ಎಂದು ಹೇಳುತ್ತೀರಾ?
(ನಗುತ್ತಾ) ಸದ್ಯಕ್ಕೆ ನಾವು ಅವರ ಹೆಸರನ್ನು ಘೋಷಿಸುವುದಿಲ್ಲ.

ಚಂದ್ರಯಾನ-2ರ ಕೊನೆಯ ಹದಿನೈದು ನಿಮಿಷಗಳನ್ನು ನೀವು “ಆತಂಕದ 15 ನಿಮಿಷಗಳು’ ಎಂದಿದ್ದೀರಿ. ಆಗ ನಿಮ್ಮ ಮನಸ್ಸಲ್ಲಿ ಏನೇನು ನಡೆಯಿತು ಹೇಳುವಿರಾ?
ಮೊದಲ ಹಂತ ಯಶಸ್ವಿಯಾಗಿ ಮುಗಿದಾಗ ಬಹಳ ಖುಷಿಯಾಗಿದ್ದೆವು. ಎರಡನೇ ಹಂತವೂ ಯಶಸ್ವಿಯಾಯಿತು. ಆದರೆ ಮೂರನೇ ಹಂತದಲ್ಲಿ ನಾವು ಸಂಪರ್ಕ ಕಳೆದುಕೊಂಡಾಗ ಬಹಳವೇ ಬೇಸರವಾಯಿತು. ನಿಜಕ್ಕೂ ನಮ್ಮ ಹೃದಯ ಒಡೆದಿತ್ತು. ಏನೇ ಇರಲಿ, ಈಗಂತೂ ಆರ್ಬಿಟರ್‌ನಿಂದ ನಮಗೆ ಉತ್ತಮ ಮಾಹಿತಿ ಸಿಗುತ್ತಿದೆ…ನಮ್ಮ ಇಸ್ರೋದ ಗುಣವೇ ಹೀಗೆ, ಏನಾದರೂ ತಪ್ಪಾದರೆ ಅದರಿಂದ ಪಾಠ ಕಲಿತು ಮುಂದೆ ಸಾಗುತ್ತೇವೆ. ಈ ಪಾಠಗಳ ಫ‌ಲವಾಗಿ ಚಂದ್ರಯಾನ-3 ಅದ್ಭುತ ಯಶಸ್ಸು ಪಡೆಯಲಿದೆ ಎಂಬ ಖಾತ್ರಿಯಿದೆ. ಯಾವುದೇ ಉತ್ತಮ ಸಂಸ್ಥೆಯಿರಲಿ, ಅದಕ್ಕೆ ಒಳ್ಳೆಯ ಲೀಡರ್‌ನ ಅಗತ್ಯವಿರುತ್ತದೆ. ಅಂಥ ಲೀಡರ್‌ಗೂ ಪ್ರೋತ್ಸಾಹ ಬೇಕಾಗುತ್ತದೆ. ಚಂದ್ರಯಾನ-2 ಸಮಯದಲ್ಲಿ ಭಾವುಕರಾಗಿದ್ದ ನಿಮ್ಮನ್ನು ಪ್ರಧಾನಿ ನರೇಂದ್ರ ಮೋದಿಯವರು ತಬ್ಬಿಕೊಂಡು ಸಾಂತ್ವನ ಹೇಳಿದರಲ್ಲ…ಆ ಅಪ್ಪುಗೆಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಯಾವ ಸಂದೇಶ ಕಳುಹಿಸಿತು? ನೀವು ಮುನ್ನಡೆಯಿರಿ, ನಾವು ಬೆಂಬಲಕ್ಕೆ ಇರುತ್ತೇವೆ ಎಂದೇ? ಖಂಡಿತ ಹೌದು. ನಾನು ಭಾವುಕನಾಗಿದ್ದಾಗ, ಗೌರವಾನ್ವಿತ ಪ್ರಧಾನಮಂತ್ರಿಗಳು ನನ್ನ ಮನಸ್ಸಲ್ಲೇನು ಓಡುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಂಡು ತಬ್ಬಿ ಸಾಂತ್ವನ ಹೇಳಿದರು. ಪ್ರಧಾನಿಯೊಬ್ಬರ ಈ ರೀತಿಯ ಬೆಂಬಲ ನನಗ ಷ್ಟೇ ಅಲ್ಲ, ನಮಗೆಲ್ಲರಿಗೂ ಇನ್ನಷ್ಟು ಶ್ರಮಪಡುವುದಕ್ಕೆ ಪ್ರೇರೇಪಿಸಿತು. ಆ ಘಟನೆಯ ನಂತರ ಮತ್ತಷ್ಟು ಹುರುಪಿನಿಂದ ಕೆಲಸದಲ್ಲಿ ತೊಡಗಿದ್ದೇವೆ.

ಇಸ್ರೋದ ಯಶಸ್ಸು ಮತ್ತೂಮ್ಮೆ ಬಾಲಿವುಡ್‌ಗೆ ಪ್ರೇರಕವಾಗಲಿ ಎಂದು ನೀವು ಆಶಿಸುತ್ತೀರಾ? ಅಂದರೆ, ಚಂದ್ರಯಾನ-3, ಗಗನಯಾನ ಎಂಬ ಸಿನೆಮಾಗಳು ಬರಬೇಕೇ? ಈ ಕುರಿತು ನಿಮಗೆ ಏನನ್ನಿಸುತ್ತದೆ?
ಬಾಲಿವುಡ್‌ಗೆ ಇಸ್ರೋದ ಪಾಠಗಳು ಪ್ರೇರಣೆಯಾಗಿ, ಅವರು ಎಂಟರ್‌ಟೇನ್‌ಮೆಂಟ್‌ ಸಿನೆಮಾ ಮಾಡಬೇಕು ಎಂದು ಇಚ್ಛಿಸಿದರೆ, ಮಾಡಿಕೊಳ್ಳಲಿ. ಅದು ಅವರಿಗೆ ಬಿಟ್ಟ ವಿಷಯ. ನಮಗೆ ಬಾಲಿವುಡ್‌ ಪ್ರೇರಣೆಯಾಗಬೇಕಿಲ್ಲ. ನಮಗೆ ಸ್ವ-ಸಾಮರ್ಥ್ಯವಿದೆ.

(ಕೃಪೆ-ಎನ್‌ಡಿಟಿವಿ)

ಕೆ. ಶಿವನ್‌, ಇಸ್ರೋ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next