Advertisement

ಚಂದ್ರಯಾನ – 3ಕ್ಕೆ ಇಸ್ರೋ ತಯಾರಿ

10:20 AM Jan 02, 2020 | Sriram |

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೋ) ಚಂದ್ರಯಾನ – 3ಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಿದ್ದು, 2021ಕ್ಕೆ ಚಂದ್ರನಂಗಳಕ್ಕೆ ಇಸ್ರೋ ಲಗ್ಗೆ ಇಡಲಿದೆ.

Advertisement

ನಗರದ ಅಂತರಿಕ್ಷ ಭವನದಲ್ಲಿ ಬುಧವಾರ ನಡೆದ ಇಸ್ರೋ ವಾರ್ಷಿಕ ಯೋಜನೆಗಳ ಕುರಿತ ಸುದ್ದಿಗೋಷ್ಠಿಯಲ್ಲಿ ಇಸ್ರೋ ಅಧ್ಯಕ್ಷ ಕೆ. ಶಿವನ್‌ ಮಾತನಾಡಿ, ಚಂದ್ರಯಾನ – 2ರಲ್ಲಿ ಲ್ಯಾಂಡರ್‌ ಸಮಸ್ಯೆ ಹೊರತು ಪಡಿಸಿದರೆ ಯೋಜನೆ ಬಹುತೇಕ ಯಶಸ್ವಿಯಾಗಿದೆ. ಈಗ ಮತ್ತೂಮ್ಮೆ ಚಂದ್ರಯಾನ – 2 ಮಾದರಿಯಲ್ಲಿಯೇ ಮತ್ತೂಂದು ಚಂದ್ರಯಾನಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಇಸ್ರೋ ಕೂಡಾ ಸಿದ್ಧತೆ ಆರಂಭಿಸಿದೆ. ಚಂದ್ರಯಾನ – 3 ಕೂಡಾ ಚಂದ್ರಯಾನ – 2ರ ಗುರಿ, ಉದ್ದೇಶವನ್ನೇ ಒಳಗೊಂಡಿರುತ್ತದೆ. ಈ ಯೋಜನೆಯ ಒಟ್ಟಾರೆ ವೆಚ್ಚವು 615 ಕೋಟಿ ರೂ. ಆಗಲಿದೆ. 2021ರ ಮೊದಲಾರ್ಧದಲ್ಲಿಯೇ ಉಡಾವಣೆಗೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಹಿಂದಿನ ಚಂದ್ರಯಾನದಲ್ಲಿ ಉದ್ದೇಶಿಸಿದಂತೆ ಚಂದ್ರನ ದಕ್ಷಿಣ ಧ್ರುವದಲ್ಲಿಯೇ ಕಾರ್ಯಾಚರಣೆ ನಡೆಯಲಿದೆ. ಹೀಗಾಗಲೇ ಚಂದ್ರಯಾನ – 2ರಲ್ಲಿ ಕಳುಹಿಸಲಾಗಿದ್ದ ಆರ್ಬಿಟ್‌ ಚಂದ್ರನ ಸುತ್ತ ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿ ಕೇವಲ ಲ್ಯಾಂಡರ್‌ ಹಾಗೂ ರೋವರ್‌ ಅನ್ನು ಮಾತ್ರ ಕಳಿಸಲಾಗುತ್ತದೆ. ಬಳಿಕ ಅಲ್ಲಿನ ಆರ್ಬಿಟ್‌ನೊಂದಿಗೆ ಹೊಸದಾಗಿ ಕಳಿಸುವ ಲ್ಯಾಂಟರ್‌, ರೋವರ್‌ ಅನ್ನು ಸಂಪರ್ಕ (ಲಿಂಕ್‌) ಮಾಡಲಾಗುತ್ತದೆ. ಚಂದ್ರಯಾನ – 2ರಲ್ಲಿದ್ದ ಯೋಜನಾ ತಂಡದಲ್ಲಿ ಬಲಾವಣೆ ಮಾಡಿದ್ದು, ನಿರ್ದೇಶಕರಾಗಿ ವೀರ ಮುತ್ತು ವೇಲು ಅವರನ್ನು ನೇಮಿಸಲಾಗಿದೆ. ಈ ಯೋಜನೆಯ ಅವಧಿ 12 ರಿಂದ 14 ತಿಂಗಳು ಎಂದರು.

ಮಾನವ ಸಹಿತ ಗಗನಯಾನಕ್ಕೂ ಸಿದ್ಧತೆ
ಇಸ್ರೋದ ಮತ್ತೂಂದು ಮಹಾತ್ವಾಂಕಾಕ್ಷೆಯ ಯೋಜನೆಯಾದ ಗಗನಯಾನ (ಮೊದಲ ಮಾನವ ಸಹಿತ ಗಗನಯಾನ)ಯೋಜನೆಯ ಸಿದ್ಧತೆಯೂ ಭರದಿಂದ ಸಾಗಿದ್ದು, ಮೂರು ಮಂದಿ ಗಗನಯಾತ್ರಿಗಳು ಆಯ್ಕೆಯಾಗಿದ್ದು, ನಾಲ್ಕನೆಯವರನ್ನು ಅಂತಿಮ ಮಾಡಲಾಗಿದೆ. ಇವರೆಲ್ಲರೂ ವಾಯುಸೇನೆಯವರೇ ಆಗಿದ್ದಾರೆ. ಇವರುಗಳ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಜನವರಿ ಮೂರನೇ ವಾರದಿಂದ ತರಬೇತಿ ರಷ್ಯಾದಲ್ಲಿ ಆರಂಭವಾಲಿದೆ. ಗಗನಯಾನ್‌ ಸಲಹಾ ಸಮಿತಿ ಈಗಾಗಲೇ ರಚಿಸಲಾಗಿದೆ. 2022ರಲ್ಲಿ ಜರುಗುವ ಮೊದಲ ಗಗನಯಾನದಲ್ಲಿ ಒಬ್ಬರು ತೆರಳುವ ಸಾಧ್ಯತೆ ಇದ್ದು, ಅಂತಿಮ ಗೊಳಿಸಿಲ್ಲ. ಇನ್ನು ಈ ವರ್ಷಾಂತ್ಯಕ್ಕೆ ಪ್ರಾಯೋಗಿಕವಾಗಿ ಮಾನವ ರಹಿತ ಯಾನವನ್ನು ಕೈಗೊಳ್ಳಲಿದ್ದು, ಇದರಲ್ಲಿ ಮನುಷ್ಯ ಮಾದರಿಯನ್ನು ಕಳಿಸುವ ಮೂಲಕ ಹೆಚ್ಚಿನ ಅಧ್ಯಯನ ನಡೆಲಾಗುತ್ತದೆ ಎಂದರು.

Advertisement

2020ರಲ್ಲಿ ವಿವಿಧ ಯೋಜನೆ; 25 ಮಿಷನ್‌ ಗುರಿ
ಇಸ್ರೋ 2020ರಲ್ಲಿ ಸಾಕಷ್ಟು ಯೋಜನೆಗಳ ವಿಸ್ತರಣೆ, ಶಕ್ತಿ ವರ್ಧನೆ, ಕಾರ್ಖಾನೆಗಳ ಜತೆ ಕೈಜೋಡಿಸಲು ಉದ್ದೇಶಿಸಿತ್ತು. ಈ ನಿಟ್ಟಿನಲ್ಲಿ ಇಸ್ರೋ ಕೇಂದ್ರ ಇಲ್ಲದ ದೇಶದ ವಿವಿಧ ಭಾಗದಲ್ಲಿ ಆರು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸದ್ಯ ಮೂರು ಕಡೆ ಪೂರ್ಣಗೊಂಡಿದೆ. ಶ್ರೀಹರಿ ಕೋಟಾದ ಸಾರ್ವಜನಿಕ ವೀಕ್ಷಣಾ ಗ್ಯಾಲರಿ ಅಭಿವೃದ್ದಿ ಪಡಿಸಲಾಗುತ್ತಿದೆ. ಜತೆಗೆ ಸೂರ್ಯನ ಅಧ್ಯಯನಕ್ಕಾಗಿ ಯೋಜಿಸಿರುವ ಆದಿತ್ಯ ಮಿಷನ್‌ ಕೂಡಾ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ವರ್ಷ ಚಂದ್ರಯಾನ – 3, ಗಗನಯಾನ, ಆದಿತ್ಯ ಮಿಷನ್‌ ಸೇರಿದಂತೆ ಒಟ್ಟು 25 ಮಿಷನ್‌ಗಳನ್ನು ಇಸ್ರೋ ಹಮ್ಮಿಕೊಂಡಿದೆ. ಬರುವ ಜನವರಿ 17ಕ್ಕೆ ಜಿಸ್ಯಾಟ್‌ – 30 ಉಡಾವಣೆಯಾಗಲಿದೆ. ಇನ್ನು ನಾನಾ ಕಾರಣಗಳಿಗೆ ಇಸ್ರೋದ ಕೆಲವು ಕೆಲವು ನೌಕೆಗಳು ಇಂದಿಗೂ ಉಡಾವಣೆಯಾಗಿಲ್ಲ. ಈ ವರ್ಷ ಮಾರ್ಚ್‌ ವೇಳೆಗೆ ಎಲ್ಲವನ್ನು ಉಡಾವಣೆ ಮಾಡಲಾಗುತ್ತದೆ. ತಮಿಳುನಾಡಿನ ತೂತುಕುಡಿಯಲ್ಲಿ 2ನೇ ಬಾಹ್ಯಾಕಾಶನೌಕೆ ಉಡಾವಣಾ ಕೇಂದ್ರದ ಭೂಸ್ವಾಧೀನ ಪ್ರಕ್ರಿಯೆ ನಡಯುತ್ತಿದ್ದು, ಪೂರ್ಣಗೊಂಡ ಬಳಿಕ ಎಸ್‌ಎಸ್‌ಎವಿಯಂತಹ ಚಿಕ್ಕ ನೌಕೆಗಳನ್ನು ಉಡಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ವೇಳೆ ವೈಜ್ಞಾನಿಕ ಕಾರ್ಯದರ್ಶಿ ವೈಜ್ಞಾನಿಕ ಕಾರ್ಯದರ್ಶಿ, ಮಾಧ್ಯಮ ಸಂಪರ್ಕ ವಿಭಾಗದ ನಿರ್ದೇಶಕ ವಿವೇಕ್‌ ಸಿಂಗ್‌ ಉಪಸ್ಥಿತರಿದ್ದರು.

615 ಕೋಟಿ ರೂ.ವೆಚ್ಚ
ಚಂದ್ರಯಾನ -2ಕ್ಕೆ 970 ಕೋಟಿ ರೂ.ವೆಚ್ಚವಾಗಿತ್ತು. ಆದರೆ, ಈ ಬಾರಿ ಚಂದ್ರಯಾನ -3ರಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಮಾತ್ರ ಇರುವುದರಿಂದ ಜತೆಗೆ ಒಮ್ಮೆ ಯೋಜನೆ ಕೈಗೊಂಡಿರುವುದರಿಂದ ವೆಚ್ಚ ಕಡಿಮೆಯಾಗಲಿದೆ. ಲ್ಯಾಂಡರ್‌ ಹಾಗೂ ರೋವರ್‌ ನಿರ್ಮಿಸಲು 250 ಕೋಟಿ ರೂ.ಖರ್ಚಾಗಲಿದೆ. ಇವುಗಳ ಉಡಾವಣೆಗೆ ಅಗತ್ಯವಿರುವ ಉಡಾವಣಾ ವಾಹನ (ಲಾಂಚಿಂಗ್‌ ವೇಕಲ್‌) 365 ಕೋಟಿ ರೂ. ಬೇಕಾಗುತ್ತದೆ. ಈ ಮೂಲಕ ಚಂದ್ರಯಾನ- 3 ಯೋಜನೆಯ ಒಟ್ಟಾರೆ 615 ಕೋಟಿ ರೂ.ವೆಚ್ಚವಾಗಲಿದೆ.

ಕೊನೆಯ ಕ್ಷಣದಲ್ಲಿ ವಿಫ‌ಲ; ಇಂದಿಗೂ ಆರ್ಬಿಟ್‌ ಸಹಾಯಕಾರಿ
ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫ‌ಲಗೊಂಡಿತ್ತು. ನಾಲ್ಕು ಹಂತದಲ್ಲಿ ಲ್ಯಾಂಡರ್‌ ಇಳಿಸಲು ಉದ್ದೇಶಿಸಲಾಗುತ್ತು. ಮೊದಲೆರಡು ಹಂತ ಪೂರ್ಣಗೊಂಡ ನಂತರ ಕ್ಯಾಮರಾಪೋಸ್ಟಿಂಗ್‌ ಹಂತದಲ್ಲಿ ವೇಗೋತ್ಕರ್ಘ‌ ವ್ಯತ್ಯಯವಾಗಿ ಲ್ಯಾಂಡರ್‌ ನಿಯಂತ್ರಣ ಕಳೆದುಕೊಂಡಿತು. ಲ್ಯಾಂಡಿಂಗ್‌ ವಿಚಾರದಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಚಂದ್ರಯಾನ -2ರ ಆರ್ಬಿಟ್‌ ಇಂದಿಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಏಳು ವರ್ಷ ಚಂದ್ರ ಅಧ್ಯಯನ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ನೀಡಲಿದೆ ಎಂದು ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.

14 ಸಾವಿರ ಕೋಟಿ ಬಜೆಟ್‌ ನಿರೀಕ್ಷೆ
ಇಸ್ರೋ ತನ್ನ ಚಟುವಟಿಕೆಗಳಿಗಾಗಿ 2020-21 ರ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ 14,000 ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಕೆ.ಶಿವನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next