ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ 3 ನೌಕೆಗಳನ್ನು ಹೊತ್ತ ಎಲ್‌ವಿಎಂ3 ರಾಕೆಟ್ ನಭಕ್ಕೆ ಹಾರಿದ್ದು, ಯಶಸ್ವಿಯಾಗಿ ಕಕ್ಷೆ ಸೇರಿದೆ. ಇನ್ನು ಸುಮಾರು 40 ದಿನಗಳ ಕಾಲ ಭೂಮಿ ಮತ್ತು ಚಂದ್ರನನ್ನು ಸುತ್ತುವರಿಯಲಿರುವ ಈ ಚಂದ್ರಯಾನ 3 ನೌಕೆ, ಅಂತಿಮವಾಗಿ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಲಿದೆ. ಆ.23ರಂದು ದಕ್ಷಿಣ ಧ್ರುವದ ಮೇಲೆ ಸಾಫ್ಟ್ಲ್ಯಾಂಡಿಂಗ್ ಮಾಡುವುದೇ ದೊಡ್ಡ ಸವಾಲಾಗಿದ್ದು, ವಿಜ್ಞಾನಿಗಳು ಇನ್ನು ಹಗಲು ರಾತ್ರಿ ಚಂದ್ರಯಾನ 3 ನೌಕೆಯ ಬೆನ್ನು ಹತ್ತಲಿದ್ದಾರೆ. ಚಂದ್ರಯಾನ ಉಡ್ಡಯನ ಯಶಸ್ಸಿಗೆ ಇಡೀ ಭಾರತವೇ ಸಂಭ್ರಮಿಸಿದೆ.
ಹೊಸ ಅಧ್ಯಾಯ ಆರಂಭ
ಇಸ್ರೋ ತನ್ನ ಚಂದ್ರಯಾನ 3 ಅನ್ನು ಕಕ್ಷೆಗೆ ಸೇರಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂಭ್ರಮಿಸಿದ್ದಾರೆ. ಫ್ರಾನ್ಸ್ ಪ್ರವಾಸದಲ್ಲಿರುವ ಅವರು, ಟ್ವೀಟ್ ಮೂಲಕವೇ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದು, ಭಾರತದ ಬಾಹ್ಯಾಕಾಶ ಯುಗದಲ್ಲಿ ಹೊಸ ಅಧ್ಯಾಯ ಶುರುವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನ ಕನಸು, ಮಹತ್ವಾಕಾಂಕ್ಷೆಗಳನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ ಎಂದೂ ಹೇಳಿದ್ದಾರೆ. ಈ ಯಶಸ್ಸಿಗೆ ನಮ್ಮ ವಿಜ್ಞಾನಿಗಳ ವಿಶ್ರಾಂತಿ ಇಲ್ಲದ ಪರಿಶ್ರಮವೇ ಕಾರಣ, ಅವರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದಿದ್ದಾರೆ ಮೋದಿ.
ಚಂದ್ರಯಾನ 3 ಉಡ್ಡಯನಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು ಇದು ಭಾರತದ ಕನಸುಗಳನ್ನು ಬಾನೆತ್ತರಕ್ಕೆ ಕೊಂಡೊಯ್ಯಲಿದೆ ಎಂದಿದ್ದಾರೆ. ಚಂದ್ರಯಾನ 1ರ ವರೆಗೆ ಚಂದ್ರ ಕೇವಲ ಬರಡು ನೆಲ ಎಂದೇ ನಂಬಿದ್ದರು. ಚಂದ್ರನ ಮೇಲ್ಮೈ ಅನ್ನು ನಿಷ್ಟ್ರಿಯ, ವಾಸಯೋಗ್ಯಕ್ಕೆ ತಕ್ಕುದಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಚಂದ್ರಯಾನ 1ರ ಮೂಲಕ ಚಂದ್ರನಲ್ಲೂ ನೀರಿನಂಶವಿದೆ ಎಂಬುದನ್ನು ಪತ್ತೆ ಹಚ್ಚಲಾಯಿತು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮಾನವ ವಾಸ ಮಾಡಬಹುದೇನೋ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಚಂದ್ರನ ಒಂದು ದಿನ, ಭೂಮಿಯ 14 ದಿನ. ಚಂದ್ರನ ಮೇಲೆ ವಿಕ್ರಮ್ ಇಳಿದ ಮೇಲೆ ಚಂದ್ರನ ಲೆಕ್ಕಾಚಾರದಲ್ಲಿ ಒಂದು ದಿನ, ಭೂಮಿಯ ಲೆಕ್ಕದಲ್ಲಿ 14 ದಿನಗಳ ಕಾಲ ಅಧ್ಯಯನ ನಡೆಸಲಿದೆ.
ಭಾರತ ನಾಲ್ಕನೇ ದೇಶ
ಚಂದ್ರನ ಮೇಲೆ ಭಾರತದ ವಿಕ್ರಮ ಇಳಿದಾದ ಮೇಲೆ ಹೊಸದೊಂದು ಶಕೆ ಆರಂಭವಾಗಲಿದೆ. ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಖ್ಯಾತಿಗೂ ಭಾರತ ಒಳಗಾಗಲಿದೆ. ಸದ್ಯ ಅಮೆರಿಕ, ಸೋವಿಯತ್ ಯೂನಿಯನ್ ಮತ್ತು ಚೀನ ಮಾತ್ರ ಈ ಸಾಧನೆ ಮಾಡಿವೆ.
ವಾಜಪೇಯಿ ನೆನೆದ ಕಾಂಗ್ರೆಸ್
ಚಂದ್ರಯಾನ 3 ಉಡಾವಣೆ ಯಶಸ್ವಿಯಾಗುತ್ತಿದ್ದಂತೆ, ಕಾಂಗ್ರೆಸ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಹಿತ ಹಿಂದಿನ ಪ್ರಧಾನಿಗಳ ಶ್ರಮವನ್ನು ನೆನೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ವಾಜಪೇಯಿ ಸಹಿತ ಎಲ್ಲ ಮಾಜಿ ಪ್ರಧಾನಿಗಳಿಗೆ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ. ಇಂದು ಚಂದ್ರಯಾನ 3 ಯಶಸ್ವಿಯಾಗಿದೆ. ಇದು ಸಾಧ್ಯವಾಗಿದ್ದು ನಮ್ಮ ಮಾಜಿ ಪ್ರಧಾನಿಗಳ ದೂರದೃಷ್ಟಿತ್ವದ ಫಲದಿಂದ. ಅಂದರೆ ಪಂಡಿತ್ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸಿŒ, ಇಂದಿರಾ ಗಾಂಧಿ, ಪಿ.ವಿ.ನರಸಿಂಹರಾವ್, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಕನಸಿದೆ. ಹಾಗೆಯೇ ನಾವು ಡಾ| ವಿಕ್ರಮ್ ಸಾರಾಭಾಯಿ ಮತ್ತು ಸತೀಶ್ ಧವನ್ ಅವರು ಸೇರಿದಂತೆ ದೇಶದ ವಿಜ್ಞಾನಿಗಳಿಗೆ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.
ಇಸ್ರೋ ಕಚೇರಿಯಲ್ಲಿ ಸಂಭ್ರಮ
ಚಂದ್ರಯಾನ -3 ಹೊತ್ತ ರಾಕೆಟ್ ಕಕ್ಷೆ ಸೇರುತಿದ್ದಂತೆ ಇಸ್ರೋ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತು. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಇಸ್ರೋದ ಮಾಜಿ ಅಧ್ಯಕ್ಷರುಗಳು ಉಡ್ಡಯನ ಸಂದರ್ಭದಲ್ಲಿ ಹಾಜರಿದ್ದು, ಸಂಭ್ರಮದಲ್ಲಿ ಖುಷಿಯಾದರು. ಉಡ್ಡಯನದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸೋಮನಾಥ್, ಆ.23ರ ಸಾಫ್ಟ್ ಲ್ಯಾಂಡಿಂಗ್ ತಾಂತ್ರಿಕವಾಗಿ ಸವಾಲಾಗಿದೆ ಎಂದರು. ಹಾಗೆಯೇ ಆ.1ರಂದು ಚಂದ್ರನ ಕಕ್ಷೆಗೆ ನೌಕೆಯನ್ನು ಸೇರಿಸುವ ಉದ್ದೇಶ ಇರಿಸಿಕೊಂಡಿದ್ದೇವೆ. ಇದಾದ ಎರಡು ಅಥವಾ ಮೂರು ವಾರಗಳ ಬಳಿಕ ಪ್ರೋಪಲ್ಶನ್ ಮಾಡ್ನೂಲ್ ಮತ್ತು ಲ್ಯಾಂಡರ್ ಮಾಡ್ನೂಲ್ ಪ್ರತ್ಯೇಕವಾಗಲಿವೆ. ಇದು ಆ.17ರಂದು ಆಗಲಿದೆ. ಇವೆಲ್ಲವೂ ಯೋಜನೆಯಂತೆ ನಡೆದರೆ ಆ.23ರ ಸಂಜೆ 5.47ಕ್ಕೆ ಚಂದ್ರನ ಮೇಲ್ಮೆ„ ಮೇಲೆ ವಿಕ್ರಮ್ ಇಳಿಯಲಿದೆ ಎಂದರು.
ನಾಸಾ ಅಭಿನಂದನೆ
ಇಸ್ರೋದ ಚಂದ್ರಯಾನ 3 ಸಾಹಸವನ್ನು ನಾಸಾ ಅಭಿನಂದಿಸಿದೆ. ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಟ್ವೀಟ್ ಮಾಡಿದ್ದು, ಇಸ್ರೋಗೆ ಅಭಿನಂದನೆಗಳು. ಚಂದ್ರನತ್ತ ಸುರಕ್ಷಿತವಾಗಿ ಪ್ರಯಾಣ ಸಾಗಲಿ. ಈ ಮಿಷನ್‌ನಿಂದ ವೈಜ್ಞಾನಿಕ ಫಲಿತಾಂಶಗಳು ಬರಲಿ ಎಂದು ಆಶಿಸುತ್ತೇವೆ ಎಂದಿದ್ದಾರೆ. ಯೂರೋಪ್‌ನ ಸ್ಪೇಸ್ ಏಜೆನ್ಸಿ, ಇಂಗ್ಲೆಂಡ್‌ನ ಬಾಹ್ಯಾಕಾಶ ಸಂಸ್ಥೆಯೂ ಇಸ್ರೋವನ್ನು ಅಭಿನಂದಿಸಿದೆ.
ಚಂದ್ರಯಾನ 3ರ ಹಿಂದಿನ ನಾರಿ ಶಕ್ತಿ ರಿತು ಕರಿಧಾಲ್
ಚಂದ್ರಯಾನ-3 ಉಡಾವಣೆಯ ಯಶಸ್ಸಿನ ಹಿಂದೆ ಇಸ್ರೋದ ಹಲವು ವಿಜ್ಞಾನಿಗಳ ಶ್ರಮವಿದೆ. ಅದರಲ್ಲೂ ಈ ಯೋಜನೆಯ ಹೊಣೆ ಹೊತ್ತಿರುವ ಡಾ| ರಿತು ಕರಿಧಾಲ್ ಶ್ರೀವಾಸ್ತವ ಎಂಬ ಮಹಿಳಾ ವಿಜ್ಞಾನಿಯತ್ತ ಎಲ್ಲರ ಗಮನ ನೆಟ್ಟಿದೆ. ಇಸ್ರೋದ ಹಿರಿಯ ವಿಜ್ಞಾನಿಗಳ ಪೈಕಿ ಒಬ್ಬರಾಗಿರುವ ಡಾ| ರಿತು ಅವರು ಈ ಮಿಷನ್‌ನ ನೇತೃತ್ವ ವಹಿಸಿದವರು. ಇವರು “ಭಾರತದ ರಾಕೆಟ್ ಮಹಿಳೆ’ ಎಂದೇ ಖ್ಯಾತರಾಗಿದ್ದಾರೆ.
ಚಂದ್ರಯಾನ-2 ಯೋಜನೆಯ ನಿರ್ದೇಶಕಿಯಾಗಿದ್ದ ರಿತು ಅವರು, ಮಂಗಳಯಾನ ಯೋಜನೆಯ ಉಪ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು. ಲಕ್ನೋದಲ್ಲಿ ಜನಿಸಿದ ಇವರು, ಲಕ್ನೋ ವಿ.ವಿ.ಯಲ್ಲೇ ಭೌತಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಪಡೆದರು. ಬಳಿಕ ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂಇ ಪದವಿ ಪಡೆದು, 1997ರಲ್ಲಿ ಇಸ್ರೋಗೆ ಸೇರಿದರು. ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ರಿತು ಶ್ರೀವಾಸ್ತವ ಅವರಿಗೆ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರು “ಇಸ್ರೋ ಯುವ ವಿಜ್ಞಾನಿ ಪ್ರಶಸ್ತಿ’ ನೀಡಿ ಗೌರವಿಸಿದ್ದರು.
ಬಳಿಕ “ಇಸ್ರೋ ಟೀಂ ಅವಾರ್ಡ್ ಫಾರ್ ಮಾಮ್ ಇನ್ 2015′, “ಎಎಸ್‌ಐ ಟೀಂ ಅವಾರ್ಡ್’, “ವಿಮೆನ್ ಅಚೀವರ್ಸ್ ಇನ್ ಏರೋಸ್ಪೇಸ್ 2017′ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ರಿತು ಅವರಿಗೆ ಸಂದಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಡಾ| ರಿತು ಕರಿಧಾಲ್ ಅವರ ಸುಮಾರು 20 ಪ್ರಬಂಧಗಳು ಪ್ರಕಟಗೊಂಡಿವೆ.
ಗುಡಿಬಂಡೆ ವಿಜ್ಞಾನಿ ಭಾಗಿ
ಚಂದ್ರಯಾನ -3 ಉಡಾವಣಾ ಕಾರ್ಯದಲ್ಲಿ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯ ವಿಜ್ಞಾನಿ ಗುರ್ರಪ್ಪ ಅವರು ಮಿಷನ್ ಕಂಟ್ರೋಲ್ ಸೆಂಟ್ರಲ್‌ನ ಇನ್‌ಚಾರ್ಜ್ ಮತ್ತು ಸಪೋರ್ಟ್ ಸಿಸ್ಟಮ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತಾಲೂಕಿನ ಕುಗ್ರಾಮ ಜಂಗಾಲಹಳ್ಳಿಯ ಚನ್ನಪ್ಪಯ್ಯ-ತಿಮ್ಮಕ್ಕ ದಂಪತಿ ಪುತ್ರ ವಿಜ್ಞಾನಿ ಗುರ್ರಪ್ಪ ಅವರು, 2013ರ ಮಂಗಳಯಾನ, 2019ರ ಚಂದ್ರಯಾನ -2 ಉಡಾವಣೆ ಯಲ್ಲೂ ಕಾರ್ಯ ನಿರ್ವಹಿಸಿದ್ದರು. ಪ್ರಧಾನಿ ಮೋದಿಯಿಂದ ಶ್ಲಾಘನೆ: 2019 ರ ಚಂದ್ರಯಾನ-2 ಉಡಾವಣೆ ಮಿಷನ್‌ನಲ್ಲೂ ವಿಜ್ಞಾನಿ ಗುರ್ರಪ್ಪ ಅವರು ಪ್ರಮುಖ ಪಾತ್ರ ವಹಿಸಿ ಕೆಲಸ ನಿರ್ವಹಿಸಿದ್ದರು. ವಿಜ್ಞಾನಿ ಗುರ್ರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಲಾಘವ ನೀಡಿ ಅಭಿನಂದಿಸಿದ್ದರು.
ಆ.23…
ಚಂದ್ರಯಾನ 3 ಶಿಶಿರನ ದಕ್ಷಿಣ ಭಾಗದಲ್ಲಿ ಇಳಿಯುವ ದಿನ ಇದು. ಅಂದು ಸಂಜೆ 5.47ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. 600 ಕೋಟಿ ರೂ. ವೆಚ್ಚದ ಈ ಚಂದ್ರಯಾನ 3 ಯೋಜನೆಯು ಯಶಸ್ವಿಯಾಗಿ ಆರಂಭವಾಗಿದೆ. ಆ.1ಕ್ಕೆ ಚಂದ್ರನ ಕಕ್ಷೆಗೆ ಸೇರಿಸಲಾಗುತ್ತದೆ. ಹೀಗಾಗಿ ಆ.23ರ ಸಂಜೆ 5.47ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸಲು ಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಮುರ್ಮು ಸಂಭ್ರಮ
ಬಾಹ್ಯಾಕಾಶ ಶೋಧದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಯಾಗಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಸಾಧನೆ ಮಾಡಿದ್ದೇವೆ. ಚಂದ್ರಯಾನ 3ರಲ್ಲಿ ಭಾಗಿಯಾದ ಎಲ್ಲ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು.
ದ್ರೌಪದಿ ಮುರ್ಮು, ರಾಷ್ಟ್ರಪತಿ