ಅಹಮದಾಬಾದ್: ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಶಿಶಿರನೆಡೆಗೆ ಯಾತ್ರೆ ಕೈಗೊಂಡಿರುವ ಚಂದ್ರಯಾನ- 3 ನೌಕೆಯು ಬುಧವಾರ ಸಂಜೆ ಶಶಿಯ ಅಂಗಳನಲ್ಲಿ ನೆಲೆಯೂರಲು ಇಡೀ ವಿಶ್ವವೇ ಕಾಯುತ್ತಿದೆ. ಇಸ್ರೋ ಅಂದುಕೊಂಡಂತೆ ನಡೆದರೆ ಬುಧವಾರ ಸಂಜೆ 6.04ಕ್ಕೆ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮತ್ತು ಅದರ ಮೇಲೆ ಕುಳಿತಿರುವ ಪ್ರಗ್ಯಾನ್ ರೋವರ್ ಚಂದ್ರನ ಮಡಿಲು ಸ್ಪರ್ಷಿಸಲಿದೆ.
ಆದರೆ ಇದೀಗ ಈ ಚಂದ್ರ ಸ್ಪರ್ಷ ವಿಳಂಬವಾಗಬಹುದು ಎಂದು ಇಸ್ರೋ ಮಾಹಿತಿ ನೀಡಿದೆ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಆ. 23ರಂದು ಚಂದ್ರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಆಗದಿದ್ದರೆ, ಆ. 27ರಂದು ಲ್ಯಾಂಡ್ ಆಗಲಿದೆ ಎಂದು ಇಸ್ರೋ ತಿಳಿಸಿದೆ.
ಲ್ಯಾಂಡರ್ ಮಾಡ್ಯೂಲ್ ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಲ್ಯಾಂಡಿಂಗ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಹಮದಾಬಾದ್ ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ-ಇಸ್ರೋ ನಿರ್ದೇಶಕ ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.
ಇದನ್ನೂ ಓದಿ:Asia Cup 2023; ‘ಈ ಆಟಗಾರ ಅದೃಷ್ಟದಿಂದಲೇ ತಂಡದಲ್ಲಿರುವುದು..’: ಟಾಮ್ ಮೂಡಿ ಅಭಿಪ್ರಾಯ
“ಆಗಸ್ಟ್ 23 ರಂದು, ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು, ಲ್ಯಾಂಡರ್ ಮಾಡ್ಯೂಲ್ ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಅದನ್ನು ಇಳಿಸುವುದು ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನಾವು ನಿರ್ಧರಿಸುತ್ತೇವೆ. ಒಂದು ವೇಳೆ ಯಾವುದೇ ಅಂಶವು ಅನುಕೂಲಕರವಾಗಿಲ್ಲ ಎಂದು ತೋರಿದರೆ, ನಾವು ಆಗಸ್ಟ್ 27 ರಂದು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ. ಯಾವುದೇ ಸಮಸ್ಯೆ ಉಂಟಾಗಬಾರದು, ನಾವು ಆಗಸ್ಟ್ 23 ರಂದು ಮಾಡ್ಯೂಲ್ ಅನ್ನು ಇಳಿಸಲು ಸಾಧ್ಯವಾಗುತ್ತದೆ ಎಂದು ದೇಸಾಯಿ ಹೇಳಿದರು.
ಆರ್ಬಿಟರ್ ಜತೆ ಸಂಪರ್ಕ: ಮತ್ತೂಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಈಗಾಗಲೇ ಚಂದಿರನ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ-2ರ ಆರ್ಬಿಟರ್ ಸೋಮವಾರ ಚಂದ್ರಯಾನ-3ರ ಲ್ಯಾಂಡರ್ ಮಾಡ್ನೂಲ್‌ನೊಂದಿಗೆ ಸಂಪರ್ಕ ಸಾಧಿಸಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಜಾಲತಾಣದ ಮೂಲಕ ಮಾಹಿತಿ ನೀಡಿರುವ ಇಸ್ರೋ, “ವೆಲ್‌ಕಂ, ಬಡ್ಡಿ! ಚಂದ್ರಯಾನ-2ರ ಆರ್ಬಿಟರ್ ಅಧಿಕೃತವಾಗಿ ಇಂದು ಚಂದ್ರಯಾನ-3ರ ಲ್ಯಾಂಡರ್ ಮಾಡ್ನೂಲ್ ಅನ್ನು ಸ್ವಾಗತಿಸಿದೆ. ಇವೆರಡರ ಮಧ್ಯೆ ಸಂವಹನವೂ ಏರ್ಪಟ್ಟಿದೆ’ ಎಂದು ಹೇಳಿಕೊಂಡಿದೆ.
2019ರಲ್ಲಿ ಚಂದ್ರಯಾನ-2 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ವಿಫಲಗೊಂಡಿತ್ತಾದರೂ, ಆರ್ಬಿಟರ್ ಮಾತ್ರ ಸುಗಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದು, ಸೋಮವಾರ ತನ್ನ ಗೆಳೆಯ ಚಂದ್ರ ಯಾನ-3ರ ಜತೆ ಸಂಪರ್ಕ ಸಾಧಿಸಿದೆ.