Advertisement
ಎಸ್.ಸೋಮನಾಥ್ ಇಸ್ರೋ ಅಧ್ಯಕ್ಷ
Related Articles
Advertisement
ಲಕ್ನೋ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್‌ಸಿ ಪದವಿ ಪಡೆದಿರುವ ರಿತು ಕರಿದಾಲ್ ಶ್ರೀವಾಸ್ತವ ಅವರು, ಲಕ್ನೋ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದಲ್ಲಿ ಪಿ.ಎಚ್‌ಡಿಗೆ ಪ್ರವೇಶ ಪಡೆದಿದ್ದಾರೆ. ಇದಕ್ಕೂ ಮುನ್ನ ಲಕ್ನೋ ವಿಶ್ವವಿದ್ಯಾನಿಲಯದಿಂದ ಆರು ತಿಂಗಳ ಕಾಲ ಸಂಶೋಧನಾರ್ಥಿ ಆಗಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿ ಸಿದ್ದಾರೆ. “ಭಾರತದ ರಾಕೆಟ್ ಮಹಿಳೆ’ ಎಂದೇ ರಿತು ಖ್ಯಾತಿ ಪಡೆದಿದ್ದಾರೆ. 1997ರಲ್ಲಿ ಇಸ್ರೋ ಸೇರ್ಪಡೆಯಾದ ಇವರು, ಮಂಗಳ ಉಪಗ್ರಹಕ್ಕೆ ಭಾರತದ ಮಹತ್ವದ ಯೋಜನೆ “ಮಂಗಳಯಾನ’ದ ಡೆಪ್ಯೂಟಿ ಅಪರೇಷನ್ಸ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಜತೆಗೆ “ಚಂದ್ರಯಾನ-3’ರ ಯೋಜನಾ ನಿರ್ದೇಶಕಿಯಾಗಿದ್ದಾರೆ. 2007ರಲ್ಲಿ ಇಸ್ರೋ ಯುವ ವಿಜ್ಞಾನಿ ಪ್ರಶಸ್ತಿಗೆ ರಿತು ಭಾಜನರಾಗಿದ್ದಾರೆ. ಅಲ್ಲದೇ ಲಕ್ನೋ ವಿಶ್ವವಿದ್ಯಾನಿಲಯವು ಇವರಿಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ.
ಎಸ್.ಉನ್ನಿಕೃಷ್ಣನ್ ನಾಯರ್, ನಿರ್ದೇಶಕ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ(ವಿಎಸ್‌ಎಸ್‌ಸಿ)
ಹಿರಿಯ ವಿಜ್ಞಾನಿ ಎಸ್.ಉನ್ನಿಕೃಷ್ಣನ್ ನಾಯರ್ ಅವರು ಕೇರಳ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಮಾರ್ ಅಥಾನಾಸಿಯಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಿಂದ ಬಿ.ಟೆಕ್ ಪದವೀಧರರಾಗಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಎಂಇ ಪದವಿ ಹಾಗೂ ಐಐಟಿ ಮದ್ರಾಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಉನ್ನಿಕೃಷ್ಣನ್ ಅವರು ತಿರುವನಂತಪುರದ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ನಿರ್ದೇಶಕರಾಗಿದ್ದು, ಬೆಂಗಳೂರಿನ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್‌ನ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ.
1985ರಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಸೇರ್ಪಡೆಯಾದ ಅವರು, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ಎಲ್‌ವಿಎಂ3 ಗಾಗಿ ವಿವಿಧ ಏರೋಸ್ಪೇಸ್ ವ್ಯವಸ್ಥೆ ಮತ್ತು ಕಾರ್ಯವಿಧಾನಗಳ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದರು. ಜತೆಗೆ ಸ್ಪೇಸ್ ಕ್ಯಾಪುÕಲ್ ರಿಕವರಿ ಎಕ್ಸ್ ಪರಿಮೆಂಟ್(ಎಸ್‌ಆರ್‌ಇ)ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಹ್ಯೂಮನ್ ಸ್ಪೇಸ್ ಫ್ಲೈಟ್ ಯೋಜನೆಯ ಪೂರ್ವ ಯೋಜನೆಯ ತಂತ್ರಜ್ಞಾನ ಅಭಿವೃದ್ಧಿ ಚಟುವಟಿಕೆಗಳ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2014ರಲ್ಲಿ ಇಸ್ರೋದ ಟೀಮ್ ಎಕ್ಸಲೆನ್ಸ್ ಅವಾರ್ಡ್‌ಗೆ ಅವರು ಭಾಜನರಾಗಿದ್ದಾರೆ. 2014ರಲ್ಲಿ ಇಸ್ರೋ ಇಂಡಿವಿಶ್ಯೂಯಲ್ ಮೆರಿಟ್ ಅವಾರ್ಡ್ ಪಡೆದಿದ್ದಾರೆ. 2022ರ ಫೆಬ್ರವರಿಯಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಪದಗ್ರಹಣ ಮಾಡಿದರು.
ವಿ.ನಾರಾಯಣ್ ನಿರ್ದೇಶಕ, ಎಲ್‌ಪಿಎಸ್‌ಸಿ
ಹಿರಿಯ ವಿಜ್ಞಾನಿ ವಿ.ನಾರಾಯಣ್ ಅವರು ಐಐಟಿ ಖರಗ್‌ಪುರದಲ್ಲಿ ಬಿಟೆಕ್ ಪದವಿ ಹಾಗೂ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರೊಪಲ್ಷನ್ ಸಿಸ್ಟಮ್ ಅನಾಲಿಸಿಸ್, ಕ್ರಯೋಜೆನಿಕ್ ಎಂಜಿನ್ ವಿನ್ಯಾಸ ಮತ್ತು ದೊಡ್ಡ ಯೋಜನೆಗಳ ನಿರ್ವಹಣೆಯಲ್ಲಿ ವಿ.ನಾರಾಯಣ್ ಪರಿಣಿತರಾಗಿದ್ದಾರೆ. ಪ್ರಸ್ತುತ ಅವರು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್(ಎಲ್‌ಪಿಎಸ್‌ಸಿ)ನ ನಿರ್ದೇಶಕರಾಗಿದ್ದಾರೆ. ಎಲ್‌ಪಿಎಸ್‌ಸಿನಲ್ಲಿ ಚಂದ್ರಯಾನ-3ರ ಎಲ್‌ವಿಎಂ3 ರಾಕೆಟ್‌ಗಾಗಿ ಕ್ರಯೋಜೆನಿಕ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಎಂ. ವನಿತಾ ಯುಆರ್ ರಾವ್ ಸ್ಯಾಟಲೈಟ್ ಕೇಂದ್ರದ ಉಪ ನಿರ್ದೇಶಕಿ
ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದ ಉಪನಿರ್ದೇಶಕಿಯಾಗಿರುವ ಎಂ.ವನಿತಾ ಅವರು, ಚಂದ್ರಯಾನ 2 ಮಿಷನ್‌ನ ಯೋಜನಾ ನಿರ್ದೇಶಕಿಯಾಗಿದ್ದರು. ಸ್ಪೇಸ್‌ಕ್ರಾಫ್ಟ್ ಮತ್ತು ಲ್ಯಾಂಡರ್‌ಗಳ ಬಗ್ಗೆ ಅಪಾರ ಅನುಭವವಿದೆೆ. ಇವರು ಎಲೆಕ್ಟ್ರಾನಿಕ್ ಸಿಸ್ಟಮ್ ಎಂಜಿನಿಯರ್ ಆಗಿದ್ದು, ಚಂದ್ರಯಾನ ನಿರ್ದೇಶಕಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಎಂ.ಶಂಕರ್ ನಿರ್ದೇಶಕ, ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರ(ಯುಆರ್‌ಎಸ್‌ಸಿ)
ಎಂ.ಶಂಕರ್ ಅವರು 1986ರಲ್ಲಿ ತಮಿಳುನಾಡಿನ ತಿರುಚಿರಾಪಲ್ಲಿಯ ಭಾರತೀದಾಸನ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದಾರೆ. 2017ರಲ್ಲಿ ಇಸ್ರೋ ಪರ್ಫಾಮೆನ್ಸ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜರಾಗಿದ್ದಾರೆ. 2017 ಮತ್ತು 2018ರಲ್ಲಿ ಇಸ್ರೋ ಟೀಮ್ ಎಕ್ಸಲೆನ್ಸ್ ಅವಾರ್ಡ್ ಗಳನ್ನು ಪಡೆದಿದ್ದಾರೆ. ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರ(ಯುಆರ್‌ಎಸ್‌ಸಿ)ದ ಕಮ್ಯೂನಿಕೇಶನ್ ಆ್ಯಂಡ್ ಪವರ್ ಸಿಸ್ಟಮ್ಸ್ ಕ್ಷೇತ್ರದ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೋಲರ್ ಆರೆ, ಪವರ್ ಸಿಸ್ಟಮ್, ಉಪಗ್ರಹ ಸ್ಥಾನೀಕರಣ ವ್ಯವಸ್ಥೆ ಮತ್ತು ಲೋ ಅರ್ಥ್ ಆರ್ಬಿಟ್(ಎಲ್‌ಇಒ) ಉಪಗ್ರಹಗಳಿಗೆ ಸಂವಹನ ವ್ಯವಸ್ಥೆ, ನ್ಯಾವಿಗೇಶನ್ ಉಪಗ್ರಹಗಳು ಮತ್ತು ಮಂಗಳಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಸ್ರೋದ ಮಹಾತ್ವಾಕಾಂಕ್ಷೆಯ ಗಗನಯಾನ ಯೋಜನೆಯಲ್ಲೂ ಕೂಡ ಎಂ.ಶಂಕರ್ ತೊಡಗಿಕೊಂಡಿದ್ದಾರೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. 2021ರ ಜೂನ್‌ನಿಂದ ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಿ.ಎನ್.ರಾಮಕೃಷ್ಣ, ನಿರ್ದೇಶಕ ಐಎಸ್‌ಟಿಆರ್‌ಎಸಿ
ಬೆಂಗಳೂರಿನವರಾದ ಬಿ.ಎನ್.ರಾಮಕೃಷ್ಣ ಅವರು ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯಾವಿಗೇಶನ್ ಉಪಗ್ರಹಗಳು ಹಾಗೂ ಗಗನನೌಕೆ ಇರುವ ಕಕ್ಷೆಯನ್ನು ಗುರುತಿಸುವ ಕ್ಷೇತ್ರದಲ್ಲಿ ರಾಮಕೃಷ್ಣ ತಜ್ಞರಾಗಿದ್ದಾರೆ. ಬೆಂಗಳೂರಿನ ಬ್ಯಾಲಾಳುನಲ್ಲಿರುವ ಇಸ್ರೋ ಟೆಲಿಮಿಟ್ರಿ ಟ್ರ್ಯಾಕ್ಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ)ನಲ್ಲಿ ಪ್ರಸ್ತುತ ನಿರ್ದೇಶಕರಾಗಿದ್ದಾರೆ.
ಪಿ.ವೀರಮುತ್ತುವೆಲ್, ಯೋಜನಾ ನಿರ್ದೇಶಕ, ಚಂದ್ರಯಾನ-3
ವಿಜ್ಞಾನಿ ಪಿ.ವೀರಮುತ್ತುವೆಲ್ ಅವರು ಮದ್ರಾಸಿನ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ. ಈ ಹಿಂದೆ ಇಸ್ರೋ ಪ್ರಧಾನ ಕಚೇರಿಯಲ್ಲಿ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆ ಯ ಉಪ ನಿರ್ದೇಶಕ ಹುದ್ದೆಯನ್ನು ಅವರು ಆಲಂಕರಿಸಿದ್ದರು. 2019ರಲ್ಲಿ ಚಂದ್ರಯಾನ-3 ಯೋಜನೆಯ ಯೋಜನಾ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡರು.
ಕಲ್ಪನಾ ಕೆ. ಚಂದ್ರಯಾನ 3 ಯೋಜನೆಯ ಉಪನಿರ್ದೇಶಕಿ
ಚಂದ್ರಯಾನ 3 ಮಿಷನ್‌ನಲ್ಲಿ ಕಲ್ಪನಾ ಕೆ. ಅವರು ಉಪನಿರ್ದೇಶಕರಾಗಿದ್ದಾರೆ. ಈ ಹಿಂದಿನ ಚಂದ್ರಯಾನ 2 ಮತ್ತು ಮಂಗಳಯಾನ ಯೋಜನೆಗಳಲ್ಲೂ ಕೆಲಸ ಮಾಡಿದ ಅನುಭವ ಇವರಿಗಿದೆ.