ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಆಗಸ್ಟ್ 23ರಂದು ಚಂದ್ರನಲ್ಲಿ ಇಳಿಯುವ ನಿರೀಕ್ಷೆ ಇದ್ದು, ಏತನ್ಮಧ್ಯೆ ಚಂದ್ರಯಾನ-3 ನೌಕೆ ಚಂದ್ರನ ಮೇಲ್ಪದರದಿಂದ ಕೇವಲ 163 ಕಿಲೋ ಮೀಟರ್ ದೂರದಲ್ಲಿದ್ದು, ದಕ್ಷಿಣ ಧ್ರುವ ತಲುಪಲು ಸಜ್ಜಾಗಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:Actor Darren Kent: 36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಖ್ಯಾತ ಹಾಲಿವುಡ್ ನಟ
ಚಂದ್ರಯಾನ-3 ನೌಕೆಯ ಕಕ್ಷೆ ಎತ್ತರಿಸುವ ಮತ್ತೊಂದು ಅಂತಿಮ ಸುತ್ತು ಯಶಸ್ವಿಯಾಗಿ ನೆರವೇರಿದ್ದು, ಇದೀಗ ಚಂದ್ರಯಾನ 3 ನೌಕೆ ಚಂದಿರನಿಗೆ ಮತ್ತಷ್ಟು ಸನಿಹವಾಗಿದೆ ಎಂದು ಇಸ್ರೋ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್) ಬುಧವಾರ (ಆಗಸ್ಟ್ 16) ಘೋಷಿಸಿದ್ದು, ಇದೊಂದು ಯೋಜನೆಯ ಮಹತ್ವದ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡ್ಡಯಗೊಳಿಸಲಾಗಿತ್ತು. ಇದೀಗ ಚಂದ್ರಯಾನ-3 ನೌಕೆ ಕಕ್ಷೆಯಿಂದ ಕೇವಲ 163 ಕಿಲೋ ಮೀಟರ್ ಗಳಷ್ಟು ಮಾತ್ರ ದೂರದಲ್ಲಿದೆ.
ಆಗಸ್ಟ್ 5ರಿಂದ ಹಂತ, ಹಂತವಾಗಿ ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆಯಲ್ಲಿ ಇಸ್ರೋ ವಿಜ್ಞಾನಿಗಳ ತಂಡ ತೊಡಗಿಕೊಂಡಿದ್ದು, ಚಂದ್ರಯಾನ-3 ನೌಕೆ ಕಕ್ಷೆಯಿಂದ ಸ್ವಯಂ ಆಗಿ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಲಿದೆ ಎಂದು ವಿವರಿಸಿದೆ.
ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ ಬಳಸಿ ಇಂದು ಬೆಳಗ್ಗೆ 8.30 ನಿಮಿಷಕ್ಕೆ ಕಕ್ಷೆ ಎತ್ತರಿಸು ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ. ಚಂದ್ರನ ಮೇಲೆ ಚಂದ್ರಯಾನ-3 ನೌಕೆಯಲ್ಲಿರುವ ರೋವರ್ ಅನ್ನು ಯಶಸ್ವಿಯಾಗಿ ಇಳಿಸುವುದು ಇಸ್ರೋದ ಮೊದಲ ಗುರಿಯಾಗಿದೆ.
ಬಳಿಕ ಚಂದ್ರನ ಮೇಲ್ಮೈಯಿಂದ ಬರುವ ಮಾಹಿತಿ ಆಧಾರದಲ್ಲಿ ಅಧ್ಯಯನ ನಡೆಸಲಿದೆ. ಚಂದ್ರಯಾನ-1ರ ಮೂಲಕ ಇಸ್ರೋ ಆ ಗ್ರಹದಲ್ಲಿ ನೀರಿದೆ ಎಂಬ ಅಂಶವನ್ನು ಕಂಡುಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.
ಒಂದು ವೇಳೆ ಚಂದ್ರಯಾನ-3 ಯಶಸ್ವಿಯಾದಲ್ಲಿ ಜಾಗತಿಕವಾಗಿ ಈ ಗುರಿಯನ್ನು ಸಾಧಿಸಿದ 4ನೇ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ. ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ಈ ಸಾಧನೆ ಮಾಡಿದ ಮೂರು ದೇಶಗಳಾಗಿವೆ.