Advertisement

ವಿಕ್ರಮ ಸಾಧಿಸಲಿ ಇಸ್ರೋ

11:13 AM Sep 07, 2019 | Sriram |

ಹೊಸದಿಲ್ಲಿ/ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇಡಿಯ ದೇಶ ಮತ್ತು ಜನತೆ ಕಾತರದಿಂದ ಕಾಯುತ್ತಿರುವ ಘಳಿಗೆ ಹತ್ತಿರವಾಗುತ್ತಿದ್ದು, ಶುಕ್ರವಾರ ನಡು ಇರುಳು ಕಳೆದ ಬಳಿಕ ಚಂದಿರನ ನಮಗೆ ಕಾಣಿಸದ ನೆಲದಲ್ಲಿ ಇಳಿಯುವ ಸಾಹಸವನ್ನು ವಿಕ್ರಮ್‌ ನಡೆಸಲಿದೆ. ಅತ್ತ ಇಸ್ರೋದ ನೂರಾರು ವಿಜ್ಞಾನಿಗಳು ಕಂಪ್ಯೂಟರ್‌ಗಳ ಎದುರು ಕುಳಿತು ವಿಕ್ರಮನ ಸುಗಮ ಲ್ಯಾಂಡಿಂಗ್‌ ಕಸರತ್ತಿಗಾಗಿ ಸಂದೇಶಗಳನ್ನು ಕಳುಹಿಸುತ್ತ ಶ್ರಮಿಸುತ್ತಿದ್ದರೆ ದೇಶಕ್ಕೆ ದೇಶವೇ ಇದರ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದೆ.

Advertisement

ಶುಕ್ರವಾರ ಮಧ್ಯರಾತ್ರಿ 1.30ರಿಂದ 2.30ರ ನಡುವೆ ಚಂದ್ರಯಾನ-2 ಪ್ರಮುಖ ಪರಿಕರವಾದ ವಿಕ್ರಮ್‌, ಚಂದ್ರನ ಮೇಲೆ ‘ಸಾಫ್ಟ್ ಲ್ಯಾಂಡಿಂಗ್‌’ ಮಾಡಲಿದೆ. ಇದು ಈಗ ಇಸ್ರೋ ವಿಜ್ಞಾನಿಗಳ ಎದುರು ಇರುವ ಅಂತಿಮ ಅಗ್ನಿಪರೀಕ್ಷೆ.

ಯಾಕೆ ಈ ಒತ್ತಡ?
ಇಸ್ರೋ ಪಾಲಿಗೆ ಈ ‘ಸಾಫ್ಟ್ ಲ್ಯಾಂಡಿಂಗ್‌’ ‘ಹಾರ್ಡ್‌ ಚಾಲೆಂಜ್‌’ ಆಗಿದೆ. ಇಸ್ರೋದ ಪಾಲಿಗೆ ಇದು ಚೊಚ್ಚಲ ಅನ್ಯ ಗ್ರಹ ಯಾನ. ಇದೇ ಮೊದಲ ಬಾರಿಗೆ ಅಂಥ ಸಾಹಸಕ್ಕೆ ಕೈ ಹಾಕಿದ್ದು, ಸಾವಿರಾರು ವಿಜ್ಞಾನಿಗಳು, ತಂತ್ರಜ್ಞರು ಕಂಪ್ಯೂಟರ್‌ಗಳಲ್ಲಿ ದೃಷ್ಟಿ ನೆಟ್ಟು ಕ್ಷಣಕ್ಷಣಕ್ಕೂ ರೇಡಿಯೋ ಸಂದೇಶಗಳನ್ನು ಕಳುಹಿಸುತ್ತ ವಿಕ್ರಮ್‌ ಅನ್ನು ಯಶಸ್ವಿಯಾಗಿ ಚಂದ್ರನ ನಮಗೆ ಕಾಣದ ದಕ್ಷಿಣ ಧ್ರುವದ ಬಳಿ ಇಳಿಸಬೇಕಿದೆ. ಹಾಗಾಗಿಯೇ ನಮ್ಮ ದೇನಿದ್ದರೂ ಮನುಷ್ಯ ಪ್ರಯತ್ನವಷ್ಟೇ; ಅದಕ್ಕೆ ದೈವಬಲವೂ ಇರಬೇಕು ಎನ್ನುತ್ತಾರೆ ಇಸ್ರೋದ ಆಸ್ತಿಕ ವಿಜ್ಞಾನಿಗಳು.

ಮಾಜಿಗಳ ವಿಶ್ವಾಸ
ವಿಜ್ಞಾನಿಗಳು ಒತ್ತಡದಲ್ಲಿದ್ದರೂ ವಿಕ್ರಮ್‌ ಲ್ಯಾಂಡಿಂಗ್‌ನಲ್ಲಿ ಭಾರತ ಯಶಸ್ಸು ಗಳಿಸಿ, ಹೊಸ ಇತಿಹಾಸ ನಿರ್ಮಿಸುತ್ತದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್‌ ನಾಯರ್‌, ಎ.ಎಸ್‌. ಕಿರಣ್‌ ಕುಮಾರ್‌ ಮುಂತಾದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲು ವಿಕ್ರಮ್‌, ಬಳಿಕ ರೋವರ್‌
ಶುಕ್ರವಾರ ಮಧ್ಯರಾತ್ರಿ 1.30ರಿಂದ 2.30ರ ನಡುವೆ ವಿಕ್ರಮ್‌ ಚಂದ್ರನ ನೆಲದಲ್ಲಿ ಇಳಿದ ಅನಂತರ, ಶನಿವಾರ ಬೆಳಗ್ಗೆ 5.30ರಿಂದ 6.30ರ ನಡುವೆ ವಿಕ್ರಮ್‌ನ ಒಳಗೆ ಹುದುಗಿರುವ ರೋವರ್‌ ಚಂದ್ರನ ಮೇಲೆ ಇಳಿದು ನಡೆದಾಡಲಿದೆ.

Advertisement

ಪ್ರಧಾನಿ ಉಪಸ್ಥಿತಿ: ಪ್ರಧಾನಿ ನರೇಂದ್ರ ಮೋದಿ ಇಸ್ರೋದ ಕಚೇರಿಯಲ್ಲಿ ಉಪಸ್ಥಿತರಿದ್ದು, ಚಂದ್ರನ ಮೇಲೆ ಲ್ಯಾಂಡರ್‌ ವಿಕ್ರಮ್‌ ಇಳಿಯುವುದನ್ನು ಕಣ್ತುಂಬಿಕೊಳ್ಳಲಿದ್ದಾರೆ. ಬೆಂಗಳೂರಿನ ಪೀಣ್ಯ ಬಳಿಯಿರುವ ಇಸ್ರೋದ ಟೆಲಿಮೆಟ್ರಿ, ಟ್ರಾಕಿಂಗ್‌ ಮತ್ತು ಕಮಾಂಡ್‌ ನೆಟ್ವರ್ಕ್‌ (ಐಎಸ್‌ಟಿಆರ್‌ಎಸಿ) ಕೇಂದ್ರದಲ್ಲಿ ಮೋದಿ ಇದನ್ನು ವೀಕ್ಷಿಸಲಿದ್ದಾರೆ. ಅವರೊಂದಿಗೆ ದೇಶದ ನಾನಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 60ರಿಂದ 70 ವಿದ್ಯಾರ್ಥಿಗಳು ಇರುತ್ತಾರೆ. ರೋವರ್‌ ಕಾರ್ಯವೇನು?

ಇಡೀ ಚಂದ್ರಯಾನ-2ರ ಮೂಲ ಉದ್ದೇಶ ಚಂದ್ರನ ದಕ್ಷಿಣ ಧ್ರುವವನ್ನು ಪರೀಕ್ಷಿಸಿ ಅಧ್ಯಯನ ಮಾಡುವುದು. ಘನೀಕೃತ ನೀರು ಇರಬಹುದು ಎಂಬ ಊಹೆ ವಿಜ್ಞಾನಿಗಳದು. ಅದು ನಿಜವೇ ಎಂಬುದನ್ನು ಪತ್ತೆ ಮಾಡುವುದು ರೋವರ್‌ಗೆ ವಹಿಸಿರುವ ಮುಖ್ಯ ಜವಾಬ್ದಾರಿ. ಜತೆಗೆ ಅಲ್ಲಿನ ವಾತಾವರಣ, ಮಣ್ಣು ಇತ್ಯಾದಿಗಳ ಬಗ್ಗೆ ಮಾಹಿತಿಗಳನ್ನು ಅದು ಕಲೆಹಾಕಲಿದೆ.

4 ಪ್ರಮುಖ ವಿಶೇಷಗಳು

1. ಅನ್ಯ ಆಕಾಶಕಾಯವೊಂದರ ಮೇಲೆ ತನ್ನ ಯಂತ್ರವನ್ನು ಇಳಿಸಿ ಅಧ್ಯಯನ ನಡೆಸುವಲ್ಲಿ ಭಾರತದ ಮೊದಲ ಪ್ರಯತ್ನ.

2. ಇದೇ ಮೊದಲ ಬಾರಿಗೆ ಚಂದ್ರನ ಅಧ್ಯಯನ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ.

3. ಅನ್ಯಗ್ರಹದ ಮೇಲೆ ಸಾಫ್ಟ್ ಲ್ಯಾಂಡಿಂಗ್‌ ಆಗುತ್ತಿರುವ ಇಸ್ರೋದ ಮೊದಲ ಸ್ವದೇಶಿ ತಂತ್ರಜ್ಞಾನದ ಪರಿಕರ.

4. ಅಮೆರಿಕ, ರಷ್ಯಾ, ಚೀನ ಅನಂತರ ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆ ಭಾರತಕ್ಕೆ.

ಸಾಫ್ಟ್ ಲ್ಯಾಂಡಿಂಗ್‌ ನೇರಪ್ರಸಾರ

(https://www.youtube.com/watch?v=7iqNTeZAq-c)

•ಇಸ್ರೋದ ಅಧಿಕೃತ ಫೇಸ್‌ಬುಕ್‌ ಪುಟ

•ಇಸ್ರೋದ ಅಧಿಕೃತ ಟ್ವಿಟರ್‌ ಖಾತೆ

•ಇಸ್ರೋದ ಅಧಿಕೃತ ವೆಬ್‌ಸೈಟ್ (www.isro.gov.in)

•ದೂರದರ್ಶನ

Advertisement

Udayavani is now on Telegram. Click here to join our channel and stay updated with the latest news.

Next