Advertisement

30 ಗಗನಯಾನಿಗಳ ಆಯ್ಕೆ ಮಾಡಲಿದೆ ಇಸ್ರೋ

02:44 PM Sep 24, 2018 | Team Udayavani |

ಹೊಸದಿಲ್ಲಿ: ಸ್ವಾತಂತ್ರ್ಯ ದಿನದಂದು ಮಾನವ ಸಹಿತ ಮಂಗಳಯಾನ ನಡೆಸುವ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಂತೆಯೇ, ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದಕ್ಕೆ ಅಗತ್ಯ ತಯಾರಿ ನಡೆಸಿದೆ. ಇದರ ಪ್ರಮುಖ ಅಂಶವಾದ ಗಗನಯಾನಿಗಳ ಆಯ್ಕೆಯನ್ನು ಏರೋಸ್ಪೇಸ್‌ ಮೆಡಿಸಿನ್‌ ಸಂಸ್ಥೆ (ಐಎಎಂ) ನಡೆಸಲಿದೆ. ಗಗನಯಾನಿಗಳ ಆಯ್ಕೆ, ಅವರಿಗೆ ಅಗತ್ಯ ತರಬೇತಿಯ ಬಗ್ಗೆ ಏರ್‌ ಕಮಾಂಡರ್‌ ಅನುಪಮ್‌ ಅಗರ್‌ವಾಲ್‌ ವಿವರಿಸಿದ್ದಾರೆ.

Advertisement

ರಷ್ಯಾ ಜತೆಗೂ ಒಪ್ಪಂದ: ಇದೇ ವೇಳೆ, ಫ್ರಾನ್ಸ್‌ ಬಳಿಕ ಗಗನಯಾನಕ್ಕೆ ಸಂಬಂಧಿಸಿ ರಷ್ಯಾದ ನೆರವನ್ನೂ ಪಡೆಯಲು ಇಸ್ರೋ ಮುಂದಾಗಿದೆ. ಮುಂದಿನ ತಿಂಗಳು ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಭಾರತ ಪ್ರವಾಸ ಮಾಡಲಿದ್ದು, ಆಗ ಈ ಕುರಿತ ಒಪ್ಪಂದ ನಡೆಯುವ ಸಾಧ್ಯತೆಯಿದೆ.

ಸಿಮ್ಯುಲೇಟರ್‌ಗಳೇ ಪ್ರಮುಖ
ಎಲ್ಲ ಪ್ರಮುಖ ತರಬೇತಿಗಳಿಗೂ ಐಎಎಂ ಸಿಮ್ಯುಲೇಟರ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸಿಮ್ಯುಲೇಟರ್‌ ಮೈನಸ್‌ 20 ಡಿಗ್ರಿ ಇಂದ ಪ್ಲಸ್‌ 60 ಡಿಗ್ರಿಯವರೆಗೂ ತಾಪಮಾನವನ್ನು ಬದಲಿಸಬಲ್ಲದು. ವಾತಾವರಣದಲ್ಲಿರುವುದಕ್ಕಿಂತ 6 ಪಟ್ಟು ಹೆಚ್ಚು ಒತ್ತಡ ನಿರ್ಮಾಣ ಮಾಡುವ ಸಿಮ್ಯುಲೇಟರ್‌ಗಳನ್ನೂ ಐಎಎಂ ಹೊಂದಿದೆ. ಇವೆಲ್ಲವೂ ಗಗನಯಾನಿಗಳ ತರಬೇತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಕೆಲವೇ ದೇಶಗಳ ಬಳಿ ಇರುವ ಹ್ಯೂಮನ್‌ ಸೆಂಟ್ರಿಫ್ಯೂಜ್‌ ಕೂಡ ಐಎಎಂ ಬಳಿ ಇದ್ದು, ಇದು ಗಗನಯಾನಿಗಳು ಎದುರಿಸಬಹುದಾದ ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಅರಿಯಲು ನೆರವಾಗಲಿದೆ.

ಯಾನಿಗಳ ಆಯ್ಕೆ ಹೇಗೆ?
– 30 ಗಗನಯಾನಿಗಳ ಆಯ್ಕೆ
– ಈ ಪೈಕಿ 15 ಜನರಿಗೆ ಪ್ರಾಥಮಿಕ ತರಬೇತಿ
– ಮೂವರ ಮೂರು ಗುಂಪು ಅಂತಿಮವಾಗಿ ಆಯ್ಕೆ
– ಈ ಪೈಕಿ 1 ಗುಂಪಿನಿಂದ ಗಗನಯಾನ
– ಉಳಿದ ಎರಡರ ಪೈಕಿ ಒಂದು ಗುಂಪಿಗೆ ಗಗನಯಾನ ಆರಂಭಕ್ಕೂ ಮೂರು ತಿಂಗಳು ಮೊದಲು ವಿದಾಯ
– ಮತ್ತೂಂದು ಗುಂಪು ಗಗನಯಾನ ನಡೆಯುವ ದಿನದವರೆಗೆ ಜೊತೆಗಿರುತ್ತದೆ
– ಒಟ್ಟು ಆಯ್ಕೆಗೆ 12-14 ತಿಂಗಳ ಕಾಲಾವಕಾಶ

ಪರೀಕ್ಷೆ ಹೇಗೆ?
– ಪ್ರಾಥಮಿಕ ಹಂತದಲ್ಲಿ ಮೂರು ತಿಂಗಳವರೆಗೆ ಮಾನಸಿಕ ಹಾಗೂ ವೈದ್ಯಕೀಯ ತಪಾಸಣೆ
– ಮೂರು ತಿಂಗಳ ನಂತರ ಮೌಲೀಕರಣ ಪರೀಕ್ಷೆ
– ಒಂಟಿತನ ನಿರ್ವಹಣೆ, ಮಾನಸಿಕ ಬದಲಾವಣೆಗೆ ಒಗ್ಗಿಕೊಳ್ಳುವುದು, ತಾಪಮಾನ, ಸನ್ನಿವೇಶವನ್ನು ನಿರ್ವಹಿಸುವುದು, ನಿರ್ಧಾರ ತೆಗೆದುಕೊಳ್ಳುವ ಸಾಮಥ್ಯದ ಬಗ್ಗೆ ಸಂಕೀರ್ಣ ಪರೀಕ್ಷೆಗಳು
– ಪ್ರಾಥಮಿಕ ಬಯಾಲಜಿ, ಫಿಸಿಕ್ಸ್‌, ಸಿಸ್ಟಂಗಳು ಮತ್ತು ಔಷಧಗಳ ಬಗ್ಗೆಯೂ ತರಬೇತಿ
– ಈ ವಿಚಾರಗಳಿಗೆ ಪರಿಣಿತರಿಂದ ತರಬೇತಿ
– ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರಾಥಮಿಕ ಚಿಕಿತ್ಸೆ ಹಾಗೂ ಇತರ ವೈದ್ಯಕೀಯ ತರಬೇತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next