Advertisement
ನಿಜ ಹೇಳುತ್ತೇನೆ… ನಾನು ನಿನ್ನ ಬಳಿ ಬಂದರೆ ಅವತ್ತೂಂದು ಇತಿಹಾಸ ಸೃಷ್ಟಿಯಾಗುತ್ತೆ. ಕೋಟ್ಯಂತರ ಭಾರತೀಯರ ಮೊಗದಲ್ಲಿ ಮಂದಹಾಸ ಮೂಡುತ್ತೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಗಂತೂ ಕುಣಿದು ಕುಪ್ಪಳಿಸುವ ಹಾಗಾಗುತ್ತೆ. ಏಕೆಂದರೆ, ನಾನು ಅವರ ಕನಸಿನ ಕಣ್ಮಣಿ. ನಾನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ ದರೆ ಈ ಸಾಧನೆ ಮಾಡಿದ ಭೂಮಿಯ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತಕ್ಕೆ ಬರುತ್ತೆ. ಹಾಗಾಗಿಯೇ, ದೂರದ ಅಮೆರಿಕ, ಮಗ್ಗುಲಿನ ಚೀನಾ ಸೇರಿದಂತೆ ಭೂಮಂಡಲದ ಅನೇಕ ರಾಷ್ಟ್ರಗಳು ನಾನು ನಿನ್ನಲ್ಲಿ ಸಂಸ್ಥಾಪಿತವಾಗುವುದನ್ನು ಕಾತರದಿಂದ ನೋಡುತ್ತಿವೆ.
Related Articles
Advertisement
ನಿನಗೆ ಗೊತ್ತಾ ನನ್ನನ್ನು ನಿನ್ನಲ್ಲಿಗೆ ಕಳುಹಿಸಲು ರಾಷ್ಟ್ರಪತಿಯವರೇ ಬಂದಿದ್ದರು. ಜು. 15ರ ಬೆಳಗ್ಗೆಯೇ ಅವರು ಶ್ರೀಹರಿಕೋಟಾಕ್ಕೆ ಬಂದಿದ್ದರು. ಉಡಾವಣೆ ನೋಡುವ ಉತ್ಸಾಹದಲ್ಲಿದ್ದರು. ಆದರೆ, ರಾತ್ರಿ ಉಡಾವಣೆ ನಿಂತಿದ್ದಕ್ಕೆ ಬೇಸರವಾಗಲಿಲ್ಲ. ಬದಲಿಗೆ, ಗೋ ಅಹೆಡ್ ಅಂತ ವಿಜ್ಞಾನಿಗಳಿಗೆ ಧೈರ್ಯತುಂಬಿದರು.
ಅದರ ಪರಿಣಾಮವೋ ಏನೋ ಗೊತ್ತಿಲ್ಲ. ಉಡಾವಣೆ ಸ್ಥಗಿತಗೊಂಡ 48 ಗಂಟೆಗಳಲ್ಲೇ ವಿಜ್ಞಾನಿಗಳು ಸಮಸ್ಯೆ ಪತ್ತೆ ಹಚ್ಚಿದರು. ಹಾಗೆ ಪತ್ತೆ ಹಚ್ಚಲೇಬೇಕಿತ್ತು. 978 ಕೋಟಿ ರೂಪಾಯಿಯ ಯೋಜನೆಯಿದು. ಎಲ್ಲಕ್ಕೂ ಮಿಗಿಲಾಗಿ ಭಾರತದ ಗರ್ವ, ಪ್ರತಿಷ್ಠೆಗಳ ಪ್ರಶ್ನೆಯದು.
ಉಡಾವಣೆ ನಿಂತ ದಿನದಿಂದ ಮರುದಿನ 2 ಗಂಟೆಯವರೆಗೆ ಮಹೇಂದ್ರಗಿರಿಯಲ್ಲಿರುವ ಲಿಕ್ವಿಡ್ ಪ್ರೊಪಲನ್ ಸಿಸ್ಟಮ್ಸ್ ಸೆಂಟರ್ ಹಾಗೂ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್‌ನಲ್ಲಿ ಸಮಸ್ಯೆ ಪತ್ತೆಗೆ ನಿರತರಾಗಿದ್ದ ಒಬ್ಬನೇ ಒಬ್ಬ ವಿಜ್ಞಾನಿಯೂ ಅರೆಕ್ಷಣ ಕಣ್ಣು ಮುಚ್ಚಲಿಲ್ಲ, ನಿದ್ದೆ ಮಾಡಲಿಲ್ಲ.
ಆ 44 ಮೀಟರ್ ಎತ್ತರದ “ಬಾಹುಬಲಿ’ ರಾಕೆಟ್‌ನಲ್ಲಿ ಸಮಸ್ಯೆ ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಇಂಧನ ತುಂಬಿದ ರಾಕೆಟ್ ಬಲು ಅಪಾಯಕಾರಿ. ಹಾಗಾಗಿಯೇ ಅದರ ಉಡಾವಣೆ ವೇಳೆ ಸುತ್ತಮುತ್ತ 5 ಕಿ.ಮೀ.ವರೆಗೆ ಯಾರಿಗೂ ಇರಲು ಅವಕಾಶವಿರುವುದಿಲ್ಲ. ಎಲ್ಲವನ್ನೂ ರಿಮೋಟ್ ಮೂಲಕವೇ ನಿಯಂತ್ರಿಸುತ್ತಾರೆ. ಹಾಗಾಗಿ, ರಾಕೆಟ್ ಪರಿಶೀಲಿಸಲು ತೆರಳಿದ ವಿಜ್ಞಾನಿಗಳಿಗೆ ಮೊದಲು ಸುರಕ್ಷತೆಗೆ ಆದ್ಯತೆ ನೀಡಲಾಯಿತು. ಮೊದಲಿಗೆ ರಾಕೆಟ್‌ನಲ್ಲಿನ ಇಂಧನವನ್ನು ಪೂರ್ತಿಯಾಗಿ ಹೊರತಗೆಯಲಾಯಿತು. ಆನಂತರವಷ್ಟೇ ರಾಕೆಟನ್ನು ಪರಿಶೀಲಿಸಲು ಅವರನ್ನು ಬಿಡಲಾಯಿತು.
ನಾನು ವಿಕ್ರಮ್ ಒಳಗಿನಿಂದಲೇ ಕುಳಿತು ಎಲ್ಲವನ್ನೂ ಅಂದಾಜಿಸುತ್ತಿದ್ದೆ. ರಾಕೆಟ್‌ನ ಪ್ರತಿಯೊಂದು ಭಾಗವನ್ನೂ ಪರಿಶೀಲಿಸಿದ ವಿಜ್ಞಾನಿಗಳು ಸತತ 48 ಗಂಟೆಗಳ ಹುಡುಕಾಟದ ನಂತರ, ಸಮಸ್ಯೆ ಪತ್ತೆ ಹಚ್ಚಿದರು. ಜಿಎಸ್‌ಎಲ್‌ವಿ-ಎಂಕೆ 3 ರಾಕೆಟ್‌ನ ಕ್ರಯೋಜೆನಿಕ್ ಇಂಜಿನ್ ಹಾಗೂ ಹೀಲಿಯಂ ಗ್ಯಾಸ್ ಬಾಟಲ್‌ಗಳನ್ನು ಬೆಸೆದಿದ್ದ ನಿಪ್ಪಲ್ ಜಾಯಿಂಟ್‌ನಲ್ಲಿ ಆಗುತ್ತಿದ್ದ ಲೀಕೇಜ್‌ನಿಂದ ಸಮಸ್ಯೆ ಉಂಟಾಗಿತ್ತು. ಆ ನಿಪ್ಪಲ್ ಜಾಯಿಂಟ್ ಅನ್ನು ಟೈಟಾಗಿ ಫಿಟ್ ಮಾಡುವುದರ ಜತೆಗೆ ಅದಕ್ಕೆ ಸಂಬಂಧಿಸಿದ ಕೆಲವಾರು ಜೋಡಣೆಗಳನ್ನು ಮತ್ತಷ್ಟು ಬಿಗಿಯಾಗಿ ಜೋಡಿಸಿದ ನಂತರ ಸಮಸ್ಯೆ ನಿವಾರಣೆಯಾಯಿತು.*****
ಉಫ್… ಅಲ್ಲಿಗೆ ನಿನ್ನನ್ನು ಕಾಣಲು ನಾನು ಕಂಡಿದ್ದ ಕನಸಿಗೆ ಮರುಜೀವ ಬಂತು. ಸಮಸ್ಯೆ ನಿವಾರಣೆಯಾದ ಕೂಡಲೇ ಹೊಸ ಉಡಾವಣಾ ದಿನಾಂಕ, ವೇಳೆ (ಜು. 22, ಮಧ್ಯಾಹ್ನ 2:45ಕ್ಕೆ) ಪ್ರಕಟವಾಯಿತು. ಆ ದಿನ ಬಂದೇ ಬಿಟ್ಟಿತು. ನನಗಂತೂ ಪುಳಕವೋ ಪುಳಕ. ಆದರೆ, ಅಷ್ಟೇ ದುಗುಡ. ಮತ್ತೆ ಏನಾದರೂ ಸಮಸ್ಯೆ ಆಗಿಬಿಟ್ಟರೆ ಅಥವಾ ಭೂಮಿಯ ಮೇಲೆ ಪತ್ತೆಯಾಗದ ಸಮಸ್ಯೆ ಆಕಾಶಕ್ಕೆ ಹಾರಿದ ಮೇಲೆ ಕಾಣಿಸಿಕೊಂಡರೆ… ಹೀಗೆ ಏನೇನೋ ಭೀತಿ. ಅದೇ ದುಗುಡ, ಭಯ, ವಿಜ್ಞಾನಿಗಳಿಗೂ ಇತ್ತೆಂದು ಭಾವಿಸುತ್ತೇನೆ. ಆದರೆ, ಉಡಾವಣೆಗೆ ಕೆಲವೇ ನಿಮಿಷಗಳ ಮುನ್ನ ಉಡಾವಣಾ ಕೇಂದ್ರದಿಂದಲೇ ಒಂದೇ ವಿಭಾಗವನ್ನು ಚೆಕ್ ಮಾಡುತ್ತಾ ಬಂದ ವಿಜ್ಞಾನಿಗಳು ಎಲ್ಲವೂ ಓ.ಕೆ. ಎಂದಾಗ ನನ್ನಲ್ಲಿ ಹೊಸ ಹುಮ್ಮಸ್ಸು ಬಂತು. ಸರಿಯಾದ ವೇಳೆಗೆ ನಾನು ಭೂಮಿಯಿಂದ ಹೊರಟೆ. 48 ದಿನಗಳ ಮಹಾ ಪ್ರಯಾಣ ಮುಗಿಸಿದ್ದೇನೆ. 3 ಲಕ್ಷಕ್ಕೂ ಹೆಚ್ಚು ಕಿ.ಮೀ. ದೂರದಷ್ಟು ಸಾಗಿಬಂದಿದ್ದೇನೆ. ಕೇವಲ ನಿನ್ನನ್ನು ನೋಡುವಾಸೆಯಿಂದ. ನಿನ್ನನ್ನು ಪರೀಕ್ಷಿಸಿ ನಿನ್ನಲ್ಲಿ ಮನುಷ್ಯರಿಗೆ ಅತ್ಯಗತ್ಯವಾಗಿ ಬೇಕಾದ ನೀರು ಇದೆಯೋ ಇಲ್ಲವೋ, ಜತೆಗೆ ಅಲ್ಲಿ ಮತ್ತೇನು ಖನಿಜಗಳಿವೆ ಎಂಬುದನ್ನು ಪತ್ತೆ ಹಚ್ಚುವುದು ನನ್ನ ಸೃಷ್ಟಿಕರ್ತರು ನನಗೆ ಕೊಟ್ಟಿರುವ ಆದೇಶ. ಆದರೆ, ನನಗೋ ನಿನ್ನಲ್ಲೇ ಲೀನವಾಗುವ ಆಸೆ. ಹೋನಾ ಹೈ ತುಝ್ ಮೇ ಫನಾ! ಹೌದು, ಶಶಿ. ನನಗೆ ಆಯುಷ್ಯ ಹೆಚ್ಚೇನಿಲ್ಲ. ನಿನ್ನನ್ನು ತಲು ಪಿ ದ ಮೇಲೆ ನಿನ್ನಲ್ಲಿ ಒಂದು ದಿನ ಕಳೆದು ಹೋಗುತ್ತಲ್ಲ? ಅಷ್ಟೇ ಸಮಯದವರೆಗೆ ನಾನು ಇರುವುದು. ನಿನ್ನ ಒಂದು ದಿನ, ಭೂಮಿಯ ಲೆಕ್ಕಾ ಚಾ ರ ದಲ್ಲಿ 14ದಿನಕ್ಕೆ ಸಮ. ಅಷ್ಟರಲ್ಲಿ ನಿನ್ನಲ್ಲಿ ಪುಟ್ಟ ಮಗುವಿನಂತೆ ಓಡಾಡುತ್ತೇನೆ. ಅಂಬೆಗಾಲಿಡುವ ಕೂಸಿನಂತೆ ಸುತ್ತಾಡುತ್ತೇನೆ. ನನ್ನ ಜನಕರು ವಹಿಸಿದ ಕೆಲಸ ಮುಗಿಸಿದ ನಂತರ ನಿನ್ನನ್ನು ಬಿಗಿದಪ್ಪುತ್ತೇನೆ. ಅದೇ ಅಪ್ಪುಗೆಯಲ್ಲಿ ನನ್ನ ಉಸಿರು ನಿಲ್ಲುತ್ತೆ. ಹಾಗಂತ ನನಗೇನೂ ಬೇಜಾರಿಲ್ಲ ಶಶಿ. ಹುಟ್ಟಿದ್ದೇ ನಿನಗಾಗಿ, ಬದುಕುವುದೂ ನಿನಗಾಗಿ. ಸಾಯುವುದೂ ನಿನ್ನಲ್ಲೇ. ಅದೇನೇ ಇರಲಿ… ನಾನು ನಿನ್ನಲ್ಲಿ ಇಂದು ಇಳಿಯುತ್ತಿದ್ದೇನೆ. ನನಗೆ ಭವ್ಯ ಸ್ವಾಗತ ಕೋರದಿದ್ದರೂ ಪರವಾಗಿಲ್ಲ. ನಿನ್ನದೊಂದು ಹಸನ್ಮುಖವಿದ್ದರೆ ಸಾಕು. ಇತಿ ನಿನ್ನ ಪ್ರೀತಿಯ
ರೋವರ್ – ಚೇತನ್ ಓ.ಆರ್.