Advertisement

ನವರಸಭರಿತ ಚಂದ್ರಮುಖಿ ಸೂರ್ಯಸಖಿ

06:28 PM Dec 05, 2019 | mahesh |

ಸಾಲಿಗ್ರಾಮ ಮೇಳ ಈ ಸಾಲಿನ ತಿರುಗಾಟದ ದೇವದಾಸ ಈಶ್ವರಮಂಗಲ ವಿರಚಿತ “ಚಂದ್ರಮುಖೀ ಸೂರ್ಯಸಖೀ’ ಆಖ್ಯಾನ ಜಯಭೇರಿ ಕಾಣುವ ಎಲ್ಲಾ ಲಕ್ಷಣವನ್ನು ಹೊಂದಿದೆ. ಚಲನಚಿತ್ರಗಳ ಕತೆಯನ್ನು ಆಧರಿಸಿ ಸಿದ್ಧಗೊಂಡ ಅದೆಷ್ಟೋ ಪ್ರಸಂಗಗಳು ಸೋತದ್ದೂ ಉಂಟು, ಗೆದ್ದದ್ದೂ ಉಂಟು. ಆದರೆ ಈ ಬಾರಿ ಯಾವುದೇ ಚಲನಚಿತ್ರದಿಂದ ಪ್ರಚೋದಿತವಾಗದೆ, ಕೇವಲ ಕಲಾವಿದರನ್ನು ಮನಸ್ಸಿನಲ್ಲಿ ಕೇಂದ್ರೀಕರಿಸಿಟ್ಟುಕೊಂಡು ಬರೆದ ಸುಂದರ ಆಖ್ಯಾನ ರಂಗದಲ್ಲಿ ಬಿತ್ತರಗೊಂಡು ಯಶಸ್ವಿ ಪ್ರದರ್ಶನದತ್ತ ದಾಪುಗಾಲು ಹಾಕುತ್ತಿದೆ.

Advertisement

ಪ್ರಸಂಗದ ಆರಂಭವು ವಿಭಿನ್ನ ಎರಡು ಬಲದ ವೇಷದ ಹೊಸ ಕಲ್ಪನೆಯೊಂದಿಗೆ ನರಸಿಂಹ ಗಾಂವ್ಕರ್‌ ಒಡ್ಡೋಲಗವನ್ನು ಕೊಟ್ಟು ಉತ್ತಮ ಆರಂಭವನ್ನು ಪ್ರಸಂಗಕ್ಕೆ ಒದಗಿಸಿಕೊಟ್ಟರು. ಮಂಜನ ಪಾತ್ರದಾರಿ ಕ್ಯಾದಿಗೆ ಮಹಾಬಲೇಶ್ವರ ಹೆಗಡೆ ಹಾಗೂ (ಬಸು) ಅರುಣ್‌ ಜಾರRಳರ ಹಾಸ್ಯವನ್ನು ಆಸ್ವಾದಿಸಬೇಕೆಂದು ಸಿದ್ಧರಾದ ಪ್ರೇಕ್ಷಕ ವರ್ಗಕ್ಕೆ ಪ್ರಸಿದ್ಧ ಸ್ತ್ರೀವೇಷದಾರಿ ಶಶಿಕಾಂತ ಶೆಟ್ಟಿಯವರ ಚಂದ್ರಿಕೆ ಪಾತ್ರವು ಹಾಸ್ಯ ಉಣಿಸುತ್ತದೆ ಎಂದು ಅರ್ಥೈಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತು ಬೇಕಾಗುತ್ತದೆ. ಶಶಿಕಾಂತ ಶೆಟ್ಟಿಯವರ ಹಾಸ್ಯಕ್ಕೆ ಜೊತೆಯಾಗಿ ಸಹಕರಿಸುವವರು ಲಂಕೇಶ್‌ ಪಾತ್ರದಾರಿ ನರಸಿಂಹ ಗಾಂವ್ಕರ್‌ ಹಾಗೂ ಬಸು ಪಾತ್ರದಾರಿ ಅರುಣ್‌ ಜಾರ್ಕಳ.

ತಂಗಿ ವಿಮಲೆಯನ್ನು (ವಂಡಾರು ಗೋವಿಂದ) ನೃತ್ಯ ಸ್ಪರ್ಧೆಗೆ ಅಣಿಗೊಳಿಸಿದ ಕಮಲಿ (ನೀಲ್ಕೋಡು ಶಂಕರ ಹೆಗಡೆ) ಪಾತ್ರದ ಗಾಂಭೀರ್ಯವನ್ನು ಪ್ರಸಂಗದುದ್ದಕ್ಕೂ ಹಿಡಿದಿಟ್ಟುಕೊಂಡು ಪ್ರಸಂಗದ ಕೊನೆಯ ಭಾಗದಲ್ಲಿ ಸೂರ್ಯಸಖೀಯಾಗಿ ಪಟ್ಟವೇರುತ್ತಾಳೆ. ಖಳನಾಯಕಿಗೆ ಕಥಾನಾಯಕಿ ತಿರುಗೇಟು ನೀಡುತ್ತಾಳೆ ಎಂಬ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗುತ್ತದೆ. ಪರಿಶುದ್ಧ ಪಾತ್ರದಾರಿ (ಕೃಷ್ಣಯಾಜಿ ಬಳ್ಕೂರು) ದುರಂತ ನಾಯಕನಾಗುತ್ತಾನೆ. ಸುಪ್ರಸನ್ನ (ಪ್ರಸನ್ನ ಶೆಟ್ಟಿಗಾರ) ಖಳನಾಯಕಿಯ ಗಂಡನಾಗಿ ಮಾನವೀಯತೆ ಮೆರೆದು ಪ್ರಸಂಗದ ನಾಯಕ ನಟನಾಗುತ್ತಾನೆ. ಉದಯಸೂರ್ಯ (ಮಂಕಿ ಈಶ್ವರ ನಾಯ್ಕ) ಪ್ರಸಂಗದ ಆಧಾರಸ್ತಂಭವಾಗಿ ಮುನ್ನಡೆಸುತ್ತಾನೆ. ಮಂಜ ನಗಿಸುವುದನ್ನು ಮರೆತು ಪ್ರೇಕ್ಷಕರ ಚಿತ್ತಕ್ಕೆ ಹತ್ತಿರವಾಗಿ ಅಳುವುದರಲ್ಲೇ ಗೆಲ್ಲುತ್ತಾನೆ. ತುಂಬ್ರಿ ಭಾಸ್ಕರರು ಹತಾಶತೆಯನ್ನು ಕಟ್ಟಿಟ್ಟು ನಗುವಿನ ಹೊಳೆಯಲ್ಲಿ ಪ್ರೇಕ್ಷಕರನ್ನು ತೇಲಿಸಿದರು. ಉಳಿದ ಹಲವು ಕಲಾವಿದರು ಕತೆಯ ಪೋಷಕ ನಟರಾಗಿ ಮಿಂಚಿನ ಸಂಚಾರಕ್ಕೆ ಸಾಕ್ಷಿಯಾಗಿ ರಂಗದಲ್ಲಿ ನಿಲ್ಲುತ್ತಾರೆ. ಹಿಮ್ಮೇಳದಲ್ಲಿ ಹಿಲ್ಲೂರು, ಮೂಡುಬೆಳ್ಳೆ, ಪ್ರದೀಪ್‌ಚಂದ್ರ, ಶಿವಾನಂದ ಕೋಟ, ರಾಕೇಶ ಮಲ್ಯ, ಪರಮೇಶ್ವರ ಭಂಡಾರಿ, ನಾಗರಾಜ ಭಂಡಾರಿ ಕಥಾಹಂದರಕ್ಕೆ ಪೂರಕವಾಗಿ ಪ್ರಬುದ್ಧತೆ ಮೆರೆದು ಸಾಥ್‌ ನೀಡಿದರು.

ಒಟ್ಟಿನಲ್ಲಿ ರಾತ್ರಿ ಇಡೀ ಪ್ರೇಕ್ಷಕರಲ್ಲಿ ನಿದ್ದೆ ಸುಳಿಯದಂತೆ ಮಾಡುವ ಕತೆಯ ಹಂದರದಲ್ಲಿ, ಹೊಸ ಅಲೆಯ ರಂಗಭೂಮಿಯ ರಂಗತಂತ್ರ ಹಾಗೂ ಧ್ವನಿ-ಬೆಳಕುಗಳನ್ನು ಬಳಸಿ, 25ಕ್ಕೂ ಮಿಕ್ಕಿದ ಕಲಾವಿದರ ಕಸರತ್ತಿನಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ದೊರಕೀತು ಎಂಬ ಆಶಯ ಪ್ರೇಕ್ಷಕ ವರ್ಗದ್ದು.ಒಟ್ಟಾರೆಯಾಗಿ ನವರಸಗಳನ್ನು ಹೊಂದಿರುವ ಪ್ರಸಂಗವಿದು.

ಪ್ರಶಾಂತ್‌ ಮಲ್ಯಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next