Advertisement
ಕಂಬಾರರ ಕಾವ್ಯದ ಮೂಲ ಶಕ್ತಿ ನನ್ನ ಅನುಭವಕ್ಕೆ ಬಂದ ಒಂದು ಸಂಜೆ ಈಗ ನೆನಪಾಗುತ್ತಿದೆ. ನಮ್ಮ ಕನ್ನಡ ವಿಭಾಗದ ಒಂದು ಸಭೆ. ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಕಂಬಾರರು ತಮ್ಮ ಒಂದು ಕವಿತೆಯನ್ನು ಹಾಡಬೇಕಾಯಿತು. ನಾನು ಕುತೂಹಲದಿಂದ ಹಾಡಲು ನಿಂತ ಕಂಬಾರರನ್ನೇ ನೋಡುತ್ತಿದ್ದೆ. ಹಾಡಲು ನಿಂತ ಕಂಬಾರರ ನಿಲುವು ಕಣ್ಣೆದುರೇ ಬದಲಾಯಿತು. ಅವರೀಗ ಆಕಾಶಕ್ಕೆ ಮುಖವೆತ್ತಿದರು. ಅವರು ನಿಂತಿರುವಲ್ಲೇ ಅವರೊಳಗಿಂದ ಒಬ್ಬ ಹಳ್ಳಿಗ ಹೊರಗೆ ಬಂದ. ಹೆಳತೇನ ಕೇಳ ಎಂಬ ಲಾವಣಿಯ ಕೆಲವು ಪದ್ಯಗಳನ್ನು ಕಂಬಾರ ಆವತ್ತು ಹಾಡಿದರು. ಹಾಡಿನ ಅನುರಣನ ನನ್ನ ಎದೆ ಕಂಪಿಸುವಂತೆ ಮಾಡಿತು. “ಇದಪ್ಪಾ ಕವಿತೆ ಎಂದರೆ’ ಎಂದು ಉದ್ಗಾರ ತೆಗೆದೆ.
Related Articles
Advertisement
ಕಂಬಾರರು ಬೇಂದ್ರೆ ಮತ್ತು ಅಡಿಗರಂಥ ಪ್ರಭಾವಿ ಕವಿಗಳ ಜೊತೆಗೆ ಸೆಣಸುತ್ತಲೇ ಬೆಳೆದವರು. ಬೇಂದ್ರೆಯವರ ಗಂಗಾವತರಣವನ್ನು ಕಂಬಾರರ ಗಂಗಾಮಾಯಿ, ಅಡಿಗರ ಬತ್ತಲಾರದ ಗಂಗೆ ಕವಿತೆಗಳೊಡನೆ ಓದುವುದು ಕುತೂಹಲಕಾರಿ ಅಭ್ಯಾಸವಾಗಬಹುದು. ಯಾಕೆ ಆಕಾಶಗಂಗೆ? ಪಾತಾಳ ಗಂಗೆಯನ್ನು ನೋಡಿರಿ-ಎನ್ನುತ್ತಾರೆ ಕಂಬಾರ. ಆಧುನಿಕವಾದ ಎಲ್ಲ ಅನಾರೋಗ್ಯಕ್ಕೂ ದೇಸೀಮದ್ದು ಅರೆಯುವ ಹುನ್ನಾರದಲ್ಲಿ ಕಂಬಾರರು ತೊಡಗಿರುವರೇ? ಅದರ ಸಾಫಲ್ಯದಲ್ಲಿ ಅವರಿಗೆ ನಂಬಿಕೆಯುಂಟೋ ಅಥವಾ ಸಂದೇಹವೋ? ಕೆಣಕುವ ತೀವ್ರ ಪ್ರಶ್ನೆಗಳನ್ನು ಎದುರು ಹಾಕಿಕೊಂಡು ಕೂತ ಕವಿ ಕಂಬಾರರು.
ತೀವ್ರವೂ ಪ್ರಾಕೃತಿಕವೂ ಆದ ಕಾಮಶಕ್ತಿಯನ್ನು ಕಂಬಾರರು ಆರಾಧಿಸುತ್ತಾರೆ. ಆಧುನಿಕ ಸಾಮಾಜಿಕ ಪರಿಸ್ಥಿತಿಯನ್ನು ಆ ಮೂಲಕವೇ ಶೋಧಿಸಲು ನೋಡುತ್ತಾರೆ. ಅನೈತಿಕ ಕಾಮ, ಬಾಳಗೊಂಡನಂಥ ಹೊಸ ಸಾಧ್ಯತೆಯನ್ನು ಸೃಷ್ಟಿಸಬಲ್ಲುದೆ? ಒಂದು ಕಡೆ ರಾಮಗೊಂಡ; ಇನ್ನೊಂದು ಕಡೆ ಬಾಳಗೊಂಡ. ಈ ಜೋಡಿ ಕಂಬಾರರ ಎಲ್ಲ ಮುಖ್ಯ ಕೃತಿಗಳಲ್ಲೂ ಬೇರೆಬೇರೆ ನಾಮ-ವೇಷದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ ಅಲ್ಲವೆ? ಶಿವಾಪುರವನ್ನು ಮತ್ತೆ ಕಟ್ಟುವ ಗಾಢವಾದ ಪ್ರಜ್ಞೆಯು ಅವರ ಬರವಣಿಗೆಯ ಮೂಲ ಅಸ್ತಿವಾರವಾಗಿದೆ ಅನ್ನಿಸುತ್ತಿದೆ.
ಅಹಲ್ಯೆಯನ್ನು ಬರೆದ, ಗೋಕುಲ ನಿರ್ಗಮನ ಬರೆದ ಪುತಿನರಸಿಂಹಾಚಾರ್, ಕಂಬಾರರಿಗೆ ಒಂದು ಮೇಜರ್ ಧ್ವನಿ ಅನ್ನಿಸಿದ್ದಾರೆ. ಕಾಮದ ನೈತಿಕತೆ ಮತ್ತು ಅನೈತಿಕತೆಯನ್ನು ಮುಕ್ತ ಸಂವೇದನೆಗೆ ಒಳಪಡಿಸಿದ ಕವಿ ಪುತಿನ. ಹಾಗಾಗಿ, ಅವರು ಕಂಬಾರರಿಗೆ ಪ್ರಿಯವಾಗುವುದು ಸಹಜವೇ ಆಗಿದೆ. ಅಹಲ್ಯೆ ಮತ್ತು ಹೇಳತೇನ ಕೇಳದಲ್ಲಿ ಇರುವ ಭಿನ್ನತೆಯನ್ನು ಲೆಕ್ಕದಲ್ಲಿಟ್ಟೂ ಅವುಗಳ ನಡುವೆ ಕಾಣುವ ಮೂಲ ಎಳೆಗಳ ಸಮಾನತೆ ಬೆರಗು ತರಿಸುವಂತಿದೆ. ಅದನ್ನು ಈವರೆಗೆ ಕನ್ನಡ ವಿಮರ್ಶೆಗುರುತಿಸಿದಂತಿಲ್ಲ. ಅನೂಚೀನವಾದ ಒಂದು ಬಾಳ್ವಿಕೆಯ ನೆಲೆಗೇಡಿನ ದುರಂತವನ್ನು ಎರಡೂ ಕೃತಿಗಳು ಪರಾಂಬರಿಸುತ್ತಿವೆ. ಎಸ್. ಎಲ್. ಭೈರಪ್ಪ ಅವರ ಗೃಹಭಂಗದ ಕಲ್ಪನೆ ಎರಡಕ್ಕೂ ಸಮಾನವಾದುದು. (ಬೇರಿನ ಹುಡುಕಾಟ ಮತ್ತು ಅಸ್ಮಿತೆಯ ಸಮಸ್ಯೆಯನ್ನು ಶೋಧಿಸುವ ಗೃಹಭಂಗದ ಭೈರಪ್ಪ , ಕಂಬಾರರಿಗೆ ಪ್ರಿಯರಾದ ಲೇಖಕರೆಂಬುದನ್ನು ಇಲ್ಲಿ ಪ್ರಾಸಂಗಿಕವಾಗಿ ನೆನೆಯಬಹುದು). ಅಹಲ್ಯೆ ಮತ್ತು ಹೇಳತೇನಕೇಳದಲ್ಲಿ ಗೃಹಭಂಗ ಸಂಭವಿಸುವ ಕ್ರಮವೂ ಸಮಾನವಾದುದು. ಅಹಲ್ಯೆಯಲ್ಲಿ, ಇಂದ್ರ ಗೌತಮನ ಆಶ್ರಮವನ್ನು (ಗೃಹಸ್ಥಾಶ್ರಮ?)ಹೊರಗಿನಿಂದ ಬಂದು ಆಕ್ರಮಿಸುವ ದುರ್ದಮ್ಯಪರಕೀಯತೆ. ಹೇಳತೇನ ಕೇಳಾದ ಮಾಯಾವಿ ರಾಕ್ಷಸ ಸಹ ಹೊರಗಿನಿಂದ ಶಿವಾಪುರವನ್ನು ಅತಿಕ್ರಮಿಸುವ ಶಕ್ತಿ. ಇಂದ್ರನು ಹೇಗೆ ಗೌತಮನ ವೇಷದಲ್ಲಿ ಅಹಲ್ಯೆಯನ್ನು ಭೇದಿಸುವನೋ ಹಾಗೇ ಹೇಳತೇನ ಕೇಳದ ರಾಕ್ಷಸ ಗೌಡನ ವೇಷದಲ್ಲಿ ಗೌಡತಿಯನ್ನು ಆಕ್ರಮಿಸುವನು. ಈ ವಿಷಮಸಂಯೋಗದ ಫಲ ಅಹಲ್ಯೆ ಮತ್ತು ಗೌಡತಿಯ ಗೃಹಭಂಗದ ದಾರುಣ ಕೇಡು. ನಿರ್ವೀರ್ಯತೆ. ಆತ್ಮನಾಶ. ನೆಲೆಗೇಡಿನ ದುರಂತ. ಸಮಾಜದ ಮೂಲಭೂತ ಘಟಕವಾದ ದಾಂಪತ್ಯದ ಪುರಾತನ ಚೌಕಟ್ಟು ಕಂಪಿಸುವ, ಹಾಳ್ಗೆಡುವ ಪರಿಣಾಮ ಎರಡೂ ಕೃತಿಗಳಲ್ಲೂ ಕಂಡುಬಂದಿದೆ. ಒಂದರಲ್ಲಿ ಶಿಷ್ಟ ಭಾಷಾ ಸಂವಿಧಾನದ ಕ್ರಮದಲ್ಲಿ. ಇನ್ನೊಂದರಲ್ಲಿ ದೇಸೀ ಭಾಷಾ ಸಂವಿಧಾನದ ನೆಲೆಯಲ್ಲಿ. ವಸಾಹತೋತ್ತರದ ಜಟಿಲ ಅನುಭವವನ್ನು ಎರಡೂ ಕಡೆಯೂ ಕಥಿಸಲಾಗಿದೆ. ಗೋಕುಲ ನಿರ್ಗಮನದಲ್ಲಂತೂ ಹೊರನಾಡಿನ ಕರೆ- ಕೇಡಿನ ಕರೆ ಎಂದು ಪುತಿನ ಸ್ಪಷ್ಟವಾಗಿಯೇ ಬರೆದಿದ್ದಾರೆ.
ಕುವೆಂಪು, ಬೇಂದ್ರೆ, ಪುತಿನರಂತೆ ಕಂಬಾರ ಕೂಡ ಕವಿ ನಾಟಕಕಾರ ಪರಂಪರೆಗೆ ಸೇರಿದವರು. ಕನ್ನಡ ನಾಟಕದ ಪ್ರಮುಖವಾದ ಈ ಧಾರೆಯನ್ನು ಎಚ್ಚರದಿಂದಲೇ ನಾವು ಗಮನಿಸಬೇಕಾಗಿದೆ. ಕನ್ನಡದ ಈ ಮುಖ್ಯ ಧಾರೆಯಲ್ಲಿ ಕಾಣುವ ಆಶಯಗಳ ಸಮಾನತೆಯನ್ನು ಕೂಡ ನಾವು ಗಮನಿಸಬೇಕಾಗಿದೆ. ವಿಷಮದಾಂಪತ್ಯದ ದುರಂತವನ್ನು ಅಹಲ್ಯೆ, ಮತ್ತು ಹೇಳತೇನ ಕೇಳ ಕೃತಿಗಳಲ್ಲಿ ಅಭಿವ್ಯಕ್ತಿಸಲು ಬಳಸುವ ಕ್ರಮಗಳನ್ನು ವಿಶ್ಲೇಷಿಸುವುದು ಕೂಡ ಕುತೂಹಲಕಾರಿ ಅಭ್ಯಾಸವಾಗಬಲ್ಲುದು. ಆಶ್ಚರ್ಯ
ವೆಂದರೆ ನಮ್ಮ ಕಾಲದ ಮಹತ್ವದ ಕವಿಗಳಾದ ಅಡಿಗರ ಭೂಮಿಗೀತ ಕವಿತೆಯಲ್ಲೂ ವಿಷಮಕಾಮದ ಚಿತ್ರಗಳು ಗಡದ್ದಾಗಿ ಬಂದಿವೆ. ಕಂಬಾರರ ಗದ್ಯಾತ್ಮಕ ಕವಿತೆಗಳಿಗಿಂತ ಅವರ ಗೀತಾತ್ಮಕ ಕವಿತೆಗಳೇ ನನಗೆ ಹೆಚ್ಚು ಪ್ರಿಯ. ಆ ಗೀತೆಗಳನ್ನು ಕಂಬಾರರು ಹಾಡಿದಾಗ ಸ್ಫೋಟಗೊಳ್ಳುವ ಶಕ್ತಿ ವಿಶೇಷವಾದದ್ದು ಎಂಬುದನ್ನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಒಂದು ಕವಿಗೋಷ್ಠಿ ಏರ್ಪಟ್ಟಿತ್ತು. ಕನ್ನಡದ ಅನೇಕ ಚಾಲ್ತಿಯಲ್ಲಿದ್ದ ಕವಿಗಳು ಆ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಗೋಷ್ಠಿಯ ಅಧ್ಯಕ್ಷರು ಗೋಪಾಲಕೃಷ್ಣ ಅಡಿಗರು. ಕವಿತೆಯನ್ನು ಹಾಡುವುದರ ಬಗ್ಗೆ
ಅವರಿಗಿದ್ದ ಅಸಮ್ಮತಿ ಎಲ್ಲರಿಗೂ ತಿಳಿದದ್ದೇ. ಕಂಬಾರರು ತಮ್ಮ ಸರತಿ ಬಂದಾಗ ಮರೆತೇನೆಂದರೆ ಮರೆಯಲಿ ಹ್ಯಾಂಗ ಎಂಬ ತಮ್ಮ ಜನಪ್ರಿಯ ಕವಿತೆಯನ್ನು ಹಾಡಿದರು. ಅದು ಸಹಜವಾಗಿಯೇ ಸಭಿಕರಿಗೆ ಪ್ರಿಯವಾಯಿತು. ವಿಶೇಷವೆಂದರೆ ಅಡಿಗರು ಆವತ್ತು ತಮ್ಮ ಕವಿತೆಯನ್ನು ಓದದೆ ಕೆಲವೇ ಮಾತುಗಳಲ್ಲಿ ತಮ್ಮ ಅಧ್ಯಕ್ಷ ಭಾಷಣ ಮುಗಿಸಿದರು. ಕವಿತೆಯನ್ನು ಹಾಡುವಂತೆ ಬರೆಯುವ ಮತ್ತು ಕವಿತೆಯನ್ನು ಹಾಡುವ ವಿಷಯದ ಬಗ್ಗೆ ತಮ್ಮ ಅಸಮ್ಮತಿಯನ್ನು ಸ್ಪಷ್ಟವಾದ ಮಾತುಗಳಲ್ಲಿ ಖಂಡಿಸಿದರು ಕೂಡ!
ತಮಗಿಂತ ಕಿರಿಯರಾದ ಕವಿಗಳ ಬಗ್ಗೆ ಕಂಬಾರರಿಗೆ ನಿರ್ಮತ್ಸರ ಅಭಿಮಾನ. ನನ್ನ ಕಾವ್ಯದ ಬಗ್ಗೆ ಮೊದಲಿಂದಲೂ ಒಳ್ಳೆಯ ಮಾತುಗಳಾಡುತ್ತ ಬಂದವರು ಅವರು. ನನ್ನ ಉತ್ತರಾಯಣ ಕವಿತೆಯ ಬಗ್ಗೆ ಕಂಬಾರರು ಬರೆದ ಕೆಲವು ಸಾಲುಗಳು ನನಗೆ ನೆನಪಾಗುತ್ತಿವೆ: ನಮ್ಮ ಉತ್ತಮ ಕವಿಗಳಲ್ಲಿ ಒಬ್ಬರಾದ ಎಚ್ಚೆಸ್ವಿಯವರ ಹಾಗೆ ಮನುಷ್ಯನ ಅಂತಃಕರಣ ಮತ್ತು ಭಾಷೆಯ ಒಳ ಮಿಡಿತಗಳನ್ನು ಅರಿತವರು ವಿರಳ. ಆಧುನಿಕ ಭಾವನೆಗಳನ್ನು ಪುರಾಣಗಳ ಅನುಭವದಲ್ಲಿ ಕರಗಿಸಿ ಅಭಿವ್ಯಕ್ತಿಸುವಲ್ಲಿ ಅವರ ಸಾಧನೆ ಅಸಾಧಾರಣವಾದುದು. ನರಸಿಂಹಸ್ವಾಮಿಗಳನ್ನು ಬಿಟ್ಟರೆ ಬೆಂಗಳೂರಿನ ಆಡುನುಡಿಯನ್ನು ಮೂರ್ತಿಯವರ ಹಾಗೆ ಧ್ವನಿಪೂರ್ಣವಾಗಿ ಬಳಸಿಕೊಂಡವರು ಇನ್ನೊಬ್ಬರಿಲ್ಲ.
ನನ್ನ ಕಾವ್ಯಕ್ಕೆ ದಕ್ಕಿದ ಬಹುದೊಡ್ಡ ಪ್ರಶಸ್ತಿ ಕಂಬಾರರ ಈ ಮೆಚ್ಚುಗೆ. ಸಂಬಂಧಪಟ್ಟ ಕವಿಯನ್ನು ಮಾತ್ರವಲ್ಲ ಒಟ್ಟಾರೆ ಕಾವ್ಯ ಸಂದರ್ಭವನ್ನು ಕೂಡಾ ಇಂಥ ನಿವ್ಯಾìಜ ಕಾವ್ಯಪ್ರೀತಿ ಜೀವಂತವಾಗಿ ಇಡಬಲ್ಲುದು.
ಎಚ್ ಎಸ್ ವೆಂಕಟೇಶಮೂರ್ತಿ