ಲಕ್ನೋ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಗೋರಖ್ ಪುರ್ ಕ್ಷೇತ್ರದಿಂದ ಆಜಾದ್ ಸಮಾಜ್ ಪಕ್ಷದ ವರಿಷ್ಠ ಚಂದ್ರಶೇಖರ್ ಆಜಾದ್ ಅಖಾಡಕ್ಕಿಳಿಯಲಿದ್ದಾರೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಯತ್ನಾಳ್ ಭೇಟಿಯಾದ ರೇಣುಕಾಚಾರ್ಯ: ಕಾಲ ಬಂದರೆ ವರಿಷ್ಠರ ಭೇಟಿ
ಬಾಬಾ ಸಾಹೇಬ್ ಡಾ.ಭೀಮ್ ರಾವ್ ಅಂಬೇಡ್ಕರ್ ಜೀ ಹಾಗೂ ಕಾಶ್ಶಿ ರಾಮ್ ಸಾಹೇಬ್ ಅವರ “ಬಹಜನ ಹಿತಾಯ, ಬಹುಜನ ಸುಖಾಯ ಎಂಬ ಸಿದ್ಧಾಂತವನ್ನು ಮುಂದುವರಿಸಲು ಚಂದ್ರಶೇಖರ್ ಆಜಾದ್ ಅವರನ್ನು ಗೋರಖ್ ಪುರ್ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಆಜಾದ್ ಸಮಾಜ್ ಪಕ್ಷ ಘೋಷಿಸಿದೆ.
ಭಾರತೀಯ ಜನತಾ ಪಕ್ಷ ಯೋಗಿ ಅವರನ್ನು ಗೋರಖ್ ಪುರ್ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಯೋಗಿ ಆದಿತ್ಯನಾಥ್ ಅವರು ಸತತ ಐದು ಬಾರಿ ಗೋರಖ್ ಪುರ್ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.
ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಈ ಮೊದಲು ತಿಳಿಸಿದ್ದು, ಅಖಿಲೇಶ್ ಯಾದವ್ ದಲಿತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ ವಿನಃ, ದಲಿತರು ಬೇಕಾಗಿಲ್ಲ ಎಂದು ಆರೋಪಿಸಿದ್ದರು.
ಫೆಬ್ರುವರಿ 10ರಿಂದ 7 ಹಂತಗಳಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 7ರಂದು ಏಳನೇ ಹಂತದ ಚುನಾವಣೆ ನಡೆಯಲಿದ್ದು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ.