ಮುಂಬಯಿ: ಯಾವುದೇ ಸೇವೆಗೆ ಬೇಕಾದಂತಹ ಅರ್ಪಣಾ ಮನೋಭಾವ, ಶ್ರದ್ಧೆ ಚಂದ್ರಶೇಖರ ರಾವ್ ಅವರಿಂದ ನಾವೂ ಕಲಿಯಬೇಕಾದದ್ದು ಬಹಳಷ್ಟಿದೆ. ಮುರಿಯುವುದು ಸುಲಭ, ಆದರೆ ಕಟ್ಟುವುದು ಕಷ್ಟ. ಅಂತಹ ಕಟ್ಟುವ ಕೆಲಸಗಳನ್ನು ಚಂದ್ರಶೇಖರ್ ತಮ್ಮ ಸಂಬಂಧಗಳ ಮೂಲಕ ಸಾಧಿಸಿದ್ದಾರೆ. ಇಂದಿನ ಸಂಘ ಸಂಸ್ಥೆಯಲ್ಲಿರುವವರಿಗೆ ಚಂದ್ರಶೇಖರ್ ಅವರೋರ್ವ ಮಾದರಿಯಾಗಿದ್ದಾರೆ. ಆದ್ದರಿಂದಲೇ ಅವರಿಂದು ಭೌತಿಕಕಾಗಿ ನಮ್ಮೊಂದಿಗಿಲ್ಲದಿದ್ದರೂ ನೆನಪುಗಳಿಂದ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ಸಾಹಿತಿ, ವಿಮರ್ಶಕ ಪ್ರಾಚಾರ್ಯ ಡಾ| ಕೆ. ರಘುನಾಥ್ ತಿಳಿಸಿದರು.
ಕವಿ, ಕಥೆಗಾರ, ರಂಗನಟ ಚಂದ್ರಶೇಖರ ರಾವ್ ಅವರ ಸ್ಮರಣಾರ್ಥ ಕಳೆದ ಶನಿವಾರ ಭಾಂಡೂಪ್‌ನಲ್ಲಿ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಮುಂಬಯಿ ವತಿಯಿಂದ ಶ್ರೀದೇವಿ ಸಿ. ರಾವ್ ಅಧ್ಯಕ್ಷತೆಯಲ್ಲಿ ನೇರವೇರಿದ ಚಂದ್ರಶೇಖರ ರಾವ್ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಅಭಿನಂದಿಸಿದರು. ಸಮಕಾಲೀನ ವಸ್ತುವನ್ನೊಳಗೊಂಡಿದ್ದ ವೈವಿಧ್ಯತೆಗಳಿಂದ ಕೂಡಿದ ಕವಿತೆಗಳನ್ನು ಇಂದು ಕವಿಗಳು ಪ್ರಸ್ತುತಪಡಿಸಿದ್ದಾರೆ. ಮಾತ್ರವಲ್ಲದೆ ಸಂಬಂಧಗಳ ತೀವ್ರವಾದ ಶೋಧನೆ ಈ ಕವಿತೆಗಳಲಿತ್ತು. ಹೆಚ್ಚು ತೀವ್ರವಾದಷ್ಟು ಕವಿತೆಯ ತೀÅತೆ ಹೆಚ್ಚುತ್ತದೆ. ಅಂತಹ ಕವಿತೆಗಳ ಅಗತ್ಯ ಇಂದು ಇದೆ ಎಂದರು.
ಗೌರವ ಅತಿಥಿಗಳಾಗಿ ಟ್ರಸ್ಟ್‌ನ ವಿಶ್ವಸ್ಥರಾದ ಎಂ. ಎಸ್. ಪ್ರತಾಪ್, ಗೋಪಾಲ್ ಶೇಟ್ ಉಪಸ್ಥಿತರಿದ್ದರು. ಶ್ರೀದೇವಿ ರಾವ್ ಅವರು ಮಾತನಾಡಿ, ಚಂದಶೇಖರ್ ಅವರು ಜೀವಿತ ಕಾಲದಲ್ಲಿ ಹಲವು ಕನಸುಗಳನ್ನು ಹೊಂದಿದ್ದರು. ಇದೀಗ ಅವರ ಹೆಸರಿನ ಟ್ರಸ್ಟಿನ ಮೂಲಕ ಆ ಆಸೆಗಳನ್ನು ಕನಸುಗಳನ್ನು ನೇರವೇರಿಸಲು ಪಣತೊಟ್ಟಿದ್ದೇವೆ. ಯೋಗಾನು ಯೋಗವೆಂಬಂತೆ ವಿವೇಕಾನಂದರ ಹುಟ್ಟುಹಬ್ಬದ ದಿನದಂದೆ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯುತ್ತಿದೆ. ಕವಿಗೋಷ್ಠಿಯ ರೂಪದಲ್ಲಿ ಸಂಬಂಧ ಗಟ್ಟಿಯಾಗಿ ಉಳಿಯಬೇಕು. ಅವರ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂಬುವುದೇ ನಮ್ಮ ಟ್ರಸ್ಟ್‌ನ ಆಶಯ ಎಂದರು.
ಡಾ| ಕರುಣಾಕರ ಎನ್. ಶೆಟ್ಟಿ, ಡಾ| ದಾûಾಯನಿ ಎಡಹಳ್ಳಿ, ಡಾ| ರಜನಿ ವಿ. ಪೈ, ಡಾ| ಜಿ. ಪಿ. ಕುಸುಮಾ, ಗೋಪಾಲ್ ತ್ರಾಸಿ, ಕುಸುಮಾ ಸಿ. ಅಮೀನ್ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕವಿಯೂ ಆಗಿದ್ದ ಚಂದ್ರಶೇಖರ ರಾವ್ ಅವರ ಕವಿತೆಗಳನ್ನು ವಾಚಿಸಿ ಸಾ. ದಯಾ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿ.ಪಿ.ಎಂ ಶಾಲೆ ಮುಲುಂಡ್ ಇದರ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಪುಟಾಣಿ ಮಕ್ಕಳಿಂದ ಶ್ಲೋಕ, ಸ್ತುತಿ ಪಠಣೆ ಹಾಗೂ ಭಗವದ್ಗೀತೆಯ ವಾಚನ ಕಾರ್ಯಕ್ರಮ ನಡೆಯಿತು. ಎಂ. ಎ. ಅಂಜನ್, ಸಂಧ್ಯಾ ರೈಕರ್, ಸುಶ್ಮಿತಾ ರಾಯ್ಕರ್ ಸಹಕರಿಸಿದ್ದು ಟ್ರಸ್ಟ್‌ನ ಗೌ| ಪ್ರ| ಕಾರ್ಯದರ್ಶಿ ಸಜ್ಜನ್ ಎಂ. ಎಸ್ ವಂದಿಸಿದರು.