Advertisement
ಮಾಂಸಾಹಾರಿ ಭೋಜನಕ್ಕೆ ಮತ್ತೀಕೆರೆ, ಯಶವಂತಪುರ, ಗೊರಗುಂಟೆಪಾಳ್ಯ, ಈ ಕಡೆ ಹೆಬ್ಟಾಳ, ಸಂಜಯನಗರದವರೆಗೂ ಖ್ಯಾತಿ ಪಡೆದಿರುವುದು ಚಂದ್ರಪ್ಪ ಹೋಟೆಲಿನ ವಿಶೇಷ. ಇದು ಶುರುವಾಗಿದ್ದು 1976ರಲ್ಲಿ. ಅಂದರೆ ಈ ಹೋಟೆಲ್‌ಗೆ ನಾಲ್ಕು ದಶಕಗಳ ಇತಿಹಾಸವಿದೆ. ಬೆಂಗಳೂರಿನವರೇ ಆದ ರಾಜಶೇಖರ್ ಇದನ್ನು ಆರಂಭಿಸಿದರು. ಹೋಟೆಲಿಗೆ ಯಾವುದಾದರೂ ಹೆಸರಿಡಬೇಕು ಅನ್ನಿಸಿದಾಗ, ತಮ್ಮ ತಂದೆ ಚಂದ್ರಪ್ಪನವರ ಹೆಸರನ್ನೇ ಇಟ್ಟರು. (ತಂದೆಗಿಂತ ದೊಡ್ಡವರು, ತಂದೆಗಿಂತ ಒಳ್ಳೆಯವರು ಯಾರಿದಾರೆ ಹೇಳಿ ಅನ್ನುವುದು ರಾಜಶೇಖರ್ ಅವರ ಮಾತು) ಈಗ, ಚಂದ್ರಪ್ಪನವರ ಮೊಮ್ಮಗ ಲೋಹಿತ್ ಈ ಹೋಟೆಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಶನಿವಾರ-ಭಾನುವಾರಗಳಂದು, ಮಧ್ಯಾಹ್ನ ಹಾಗೂ ರಾತ್ರಿ ಈ ಹೋಟೆಲಿನ ಮುಂದೆ ಕಾಣುವ ಜನಜಂಗುಳಿ ನೋಡಿದರೆ, ಈ ರಶ್ ಕರಗಿ ನಾವು ಊಟ ಪಡೆವ ಹೊತ್ತಿಗೆ ಮೂರು ಗಂಟೆ ಆಗಿಬಿಡುತ್ತೆ ಎಂಬ ಅನುಮಾನ ಜೊತೆಯಾಗುವಷ್ಟು ಗದ್ದಲ ಇರುತ್ತದೆ. ಹಾಗಂತ ಗಾಬರಿಯಾಗಬೇಕಿಲ್ಲ. ಹೋಂ ಡೆಲಿವರಿ ವ್ಯವಸ್ಥೆ ಕೂಡ ಇಲ್ಲಿದೆ.
Related Articles
ಮಟನ್ ಬಿರಿಯಾನಿ, ಮಟನ್ ಖೀಮಾ, ಪುದೀನಾ ಮಟನ್, ಮಟನ್ ಚಾಪ್ಸ್, ಪೆಪ್ಪರ್ ಚಿಕನ್, ಚಿಲ್ಲಿ ಚಿಕನ್, ಗ್ರೀನ್ ಚಿಕನ್, ಗಾರ್ಲಿಕ್ ಚಿಕನ್, ಬಾದೂಷಾ ಚಿಕನ್, ಹೈದ್ರಾಬಾದಿ ಚಿಲ್ಲಿ ಚಿಕನ್, ಜಾಲಾ ಚಿಕನ್, ಚಿಕನ್ ಮಂಚೂರಿಯನ್, ಲೆಮನ್ ಚಿಕನ್, ಚಿಕನ್ ಕಬಾಬ್ ಹಾಗೂ ಇಷ್ಟೇ ತರಹದ ಪೋರ್ಕ್ ಐಟಂಗಳು ಈ ಹೋಟೆಲಿನಲ್ಲಿ ಲಭ್ಯ. ಪ್ರತಿಯೊಂದು ಐಟಂನ ಬೆಲೆಯೂ 150 ರೂಪಾಯಿಗಳ ಒಳಗೇ ಇದೆ. ಅಂದಮೇಲೆ, ಮಾಂಸಾಹಾರ ಪ್ರಿಯರು, ಅದರಲ್ಲೂ ಹಸಿದವರು ಈ ಹೋಟೆಲಿಗೆ ನುಗ್ಗದೇ ಬಿಟ್ಟಾರೆಯೇ? ನೀವೇನಾದರೂ ಮತ್ತೀಕೆರೆ ಅಥವಾ ಎಂ.ಎಸ್. ರಾಮಯ್ಯ ಕಾಲೇಜಿನ ಕಡೆಗೆ ಹೋಗಿದ್ದೇ ಆದರೆ, ನೀವು ಮಾಂಸಾಹಾರ ಪ್ರಿಯರಾಗಿದ್ದರೆ ಚಂದ್ರಪ್ಪ ಹೋಟೆಲಿಗೂ ಹೋಗಿ ಬನ್ನಿ.
Advertisement
ರಜಾದಿನ: ಸೋಮವಾರಸಮಯ?: ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ
ತೆರೆದಿರುತ್ತದೆ
ವಿಶೇಷತೆ: ಗಾರ್ಲಿಕ್ ಚಿಕನ್, ಪೆಪ್ಪರ್ ಪೋರ್ಕ್ ಫ್ರೈಗೆ ಹೆಸರುವಾಸಿ
ಸಂಪರ್ಕ: 080-23606186, 9986119710/ 9731719888 11ರಿಂದ 11
ಬೆಳಗ್ಗೆ 11 ಗಂಟೆಯಿಂದ ರಾತ್ರಿ 11ರವರೆಗೂ ತೆರೆದಿರುವ ಈ ಹೋಟೆಲಿನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಲಭ್ಯ. ಆದರೆ ಮೆನುವಿನಲ್ಲಿ ಮಾಂಸಾಹಾರದ ತಿನಿಸುಗಳಿಗೇ ಸಿಂಹಪಾಲು. ಇಲ್ಲಿಗೆ ವೆಜ್ ಫುಡ್ ಬಯಸಿ ಬರುವ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯೇ ಇದೆ. ಗಾರ್ಲಿಕ್ ಚಿಕನ್ ಮತ್ತು ಪೆಪ್ಪರ್ ಪೋರ್ಕ್‌ಗೆ ಹೆಸರಾಗಿರುವ ಈ ಹೋಟೆಲಿನಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಕಾಲಿಡಲು ಜಾಗವಿಲ್ಲದಷ್ಟು ಗ್ರಾಹಕರು
ತುಂಬಿರುತ್ತಾರೆ ನರೇಶ್ ಕುಮಾರ್