Advertisement

ಆಂಜನೇಯ ತಂದ ಅನುದಾನದಲ್ಲಿ ಚಂದ್ರಪ್ಪ ಭೂಮಿಪೂಜೆ

11:01 AM Feb 23, 2019 | Team Udayavani |

ಚಿತ್ರದುರ್ಗ: ಮಾಜಿ ಸಚಿವ ಎಚ್‌. ಆಂಜನೇಯ ಅವರ ಆಡಳಿತಾವಧಿಯಲ್ಲಿ ಮಂಜೂರಾಗಿರುವ ಎಲ್ಲ ಕಾಮಗಾರಿಗಳನ್ನು ಕೂಡಲೇ ಆರಂಭಿಬೇಕು ಎಂದು ಜಿಲ್ಲಾ ಪಂಚಾಯತ್‌ ಸದಸ್ಯ ಶಿವಮೂರ್ತಿ ಒತ್ತಾಯಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಆಂಜನೇಯರವರು ಗಂಗಾಕಲ್ಯಾಣ, ಕಿರು ಸಾಲ ಯೋಜನೆ ಸೇರಿದಂತೆ ಮತ್ತಿತರ ಯೋಜನೆಗಳಿಗೆ ನೂರಾರು ಕೋಟಿ ರೂ.ಗಳನ್ನು ಹೊಳಲ್ಕೆರೆ ಕ್ಷೇತ್ರಕ್ಕೆ ತಂದು ಅಭಿವೃದ್ಧಿಯ ಹೊಳೆ ಹರಿಸಿದ್ದರು. ಆದರೆ ಬಹುತೇಕ ಕಾಮಗಾರಿಗಳನ್ನು ಆರಂಭಿಸದೆ ಅಡ್ಡಿಪಡಿಸಲಾಗುತ್ತಿದೆ. ಕ್ಷೇತ್ರದ ಮತ್ತು ಜನತೆಯ ಹಿತದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿ ಆರಂಭಿಸಬೇಕು. ಬಡವರಿಗಾಗಿ ಮಂಜೂರಾಗಿದ್ದ ಕೊಳವೆಬಾವಿ ಕೊರೆಸಬೇಕು ಎಂದರು.

ಶಾಸಕ ಎಂ. ಚಂದ್ರಪ್ಪನವರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 300 ಕೋಟಿ ರೂ. ಅನುದಾನ ತಂದಿರುವುದಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಅವರು ಆ ಹಣವನ್ನು ತಂದಿರುವುದು ನಿಜವಾಗಿದ್ದರೆ ಎಷ್ಟನೇ ಸಾಲಿನಲ್ಲಿ ಅನುದಾನ ಬಂತು, ಯಾರು ತಂದರು, ಯಾವ ಯೋಜನೆಯಡಿ ಬಂದಿದೆ ಎಂಬ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು ಎಂದು ಆಗ್ರಹಿಸಿದರು.

ಎಸ್‌ಇಪಿ ಮತ್ತು ಟಿಎಸ್‌ ಪಿ ಅನುದಾನದಲ್ಲಿನ ಕಾಮಗಾರಿಗಳನ್ನು ಮಾಡಲು ಶಾಸಕ ಚಂದ್ರಪ್ಪ ಬಿಡುತ್ತಿಲ್ಲ. ಗಂಗಾಕಲ್ಯಾಣ ಯೋಜನೆ ಅಡಿ ಆಂಜನೇಯ ಅವರು ಮಂಜೂರು ಮಾಡಿಸಿದ್ದ ಕೊಳವೆಬಾವಿಗಳಲ್ಲಿ ಶೇ. 80 ರಿಂದ 90 ರಷ್ಟು ಕೊರೆಸಲಾಗಿದೆ. ಉಳಿದ ಕೊಳವೆಬಾವಿಗಳನ್ನೂ
ಕೊರೆಸಬೇಕು. ಗಂಗಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆಬಾವಿಗಳಿಗೆ ಮೋಟಾರ್‌, ಪಂಪ್‌ಸೆಟ್‌ ಕೊಡುತ್ತಿಲ್ಲ, ಉಳಿದ ಕೊಳವೆಬಾವಿ ಕೊರೆಸಲು ಶಾಸಕ ಚಂದ್ರಪ್ಪ ಬಿಡುತ್ತಿಲ್ಲ ಎಂದು ಆರೋಪಿಸಿದರು.

ವಿವಿಧ ಯೋಜನೆಗಳ ಅಡಿ ಕೋಟ್ಯಂತರ ರೂ. ಸಾಲ ಮಂಜೂರಾಗಿದ್ದರೂ ಅದನ್ನು ಬಿಡುಗಡೆ ಮಾಡದಂತೆ ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ. ಸಾಸ್ವೆಹಳ್ಳಿ ಏತ ನೀರಾವರಿ, ಭದ್ರಾ ಮೇಲ್ದಂಡೆ ಯೋಜನೆ ತರಲು ಆಂಜನೇಯ ಸಾಕಷ್ಟು ಶ್ರಮಿಸಿದ್ದಾರೆ.
 
ಆಂಜನೇಯ ತಂದ ಅನುದಾನದಲ್ಲಿ ಶಾಸಕ ಚಂದ್ರಪ್ಪ ಭೂಮಿಪೂಜೆ ಮಾಡುತ್ತಿದ್ದಾರೆ. ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಡೆ ಹಿಡಿದು ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್‌ ಮುಖಂಡರಾದ ಹನುಮಂತಪ್ಪ ದುರ್ಗ, ತಿಪ್ಪೇಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್‌.ಡಿ. ರಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್‌ ಯಾದವ್‌, ಪಾಡಿಗಟ್ಟೆ ಸುರೇಶ್‌ ಸುದ್ದಿಗೋಷ್ಠಿಯಲ್ಲಿದ್ದರು. 

ಶಾಸಕ ಚಂದ್ರಪ್ಪರಿಂದ ಸರ್ವಾಧಿಕಾರಿ ಧೋರಣೆ ಶಾಸಕ ಎಂ. ಚಂದ್ರಪ್ಪನವರು ಕಳೆದ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದ ನಂತರ ಎಷ್ಟು ಅನುದಾನವನ್ನು ಹೊಳಲ್ಕೆರೆ ಕ್ಷೇತ್ರಕ್ಕೆ ತಂದಿದ್ದಾರೆ ಎಂಬುನ್ನು ಜನರಿಗೆ ತಿಳಿಸಬೇಕು. ಮಾಜಿ ಸಚಿವ ಆಂಜನೇಯ ತಂದ ಹಣವನ್ನು ಬಳಸಿಕೊಂಡು ಸುಳ್ಳು ಪ್ರಚಾರ ಮಾಡಿಕೊಂಡು ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಒಂದೇ
ಒಂದು ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಧು ಪಾಲೇಗೌಡ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next