Advertisement
ಕಾಪು: ಸೈಕಲ್‌ನಿಂದ ಹಾಲು ಸಂಗ್ರಹಿಸುತ್ತಿದ್ದವರು ಹೈನುಗಾರರ ಶ್ರಮಕ್ಕೆ ತಕ್ಕಂತೆ ಹಾಲಿಗೆ ಸೂಕ್ತ ದರ ನೀಡದೇ ಇರುವುದನ್ನು ಮನಗಂಡು ಊರಿನವರ ಸಕಾಲಿಕ ಚಿಂತನೆಯೊಂದಿಗೆ ರೂಪು ತಳೆದಿದ್ದೇ ಚಂದ್ರನಗರ ಹಾಲು ಉತ್ಪಾದಕರ ಸಂಘ.
ಕಳತ್ತೂರು ಗುರ್ಮೆ ಶೇಷಪ್ಪಯ್ಯ ಮಾಸ್ಟ್ರೆ, ಭೋಜ ಶೆಟ್ಟಿ, ಮುದ್ದು ಶೆಟ್ಟಿ, ವಿಠಲ ಶೆಟ್ಟಿ ಜತೆ ಸೇರಿ ಅಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ಸುಕುಮಾರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸಂಘ ಸ್ಥಾಪಿಸಿದರು. ಶೇಷಪ್ಪಯ್ಯ ಅವರು ಸ್ಥಾಪಕಾಧ್ಯಕ್ಷರಾದರೆ, ಲೀಲಾವತಿ ಅವರು ಕಾರ್ಯದರ್ಶಿಯಾದರು. ಸೈಕಲ್‌ನಲ್ಲಿ ತೆರಳಿ ಹಾಲು ಸಂಗ್ರಹ
ಪಾದೂರು, ಹೇರೂರು, ಪೈಯ್ನಾರು, ಚಂದ್ರನಗರ, ಕಳತ್ತೂರು, ಜ್ಯೋತಿ ನಗರ, ಮಲಂಗೋಳಿ, ಪುಂಚಲಕಾಡು ಪರಿಸರದ ಹೈನುಗಾರರನ್ನು ಮೇಲೆತ್ತುವ ನಿಟ್ಟಿನಲ್ಲಿ ಸಂಘದ ಮೂಲಕ ಸೈಕಲ್‌ನಲ್ಲಿ ಮನೆಗಳಿಗೆ ತೆರಳಿ ಹಾಲು ಸಂಗ್ರಹಿಸಲಾಗುತ್ತಿತ್ತು. ಬಳಿಕ ರಿಕ್ಷಾದಲ್ಲಿ ಹಾಲು ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಪುಂಚಲಕಾಡು, ಪೈಯ್ನಾರು ಶಾಲೆ, ಕಳತ್ತೂರು ದೇವಸ್ಥಾನ, ಪಡುಕಳತ್ತೂರು ದುರ್ಗಾ ದೇವಿ ಮಂದಿರ, ಶಾಂತಿಗುಡ್ಡೆ ಪ್ರದೇಶಗಳಿಂದ ಈಗಲೂ ರಿಕ್ಷಾ ಮೂಲಕ ಹಾಲು ಸಂಗ್ರಹಿಸಲಾಗುತ್ತಿದೆ.
Related Articles
10 ಮಂದಿ ಸದಸ್ಯರಿದ್ದ ಸಂಘದಲ್ಲೀಗ 365 ಮಂದಿ ಸದಸ್ಯರಿದ್ದಾರೆ. ಇದರಲ್ಲಿ ಹಾಲು ಹಾಕುವವರು 150 ಮಂದಿ. ನಿತ್ಯ 800 ರಿಂದ 1000 ಲೀ. ಹಾಲು ಸಂಗ್ರಹವಾಗುತ್ತಿದೆ. ಕಳೆದ 3 ವರ್ಷಗಳಿಂದ ಸಂಘದ ಸದಸ್ಯ ಹರೀಶ್ ಶೆಟ್ಟಿ ಗುರ್ಮೆ ಅವರು ದಿನಕ್ಕೆ 150 ರಿಂದ 200 ಲೀಟರ್ ಹಾಲನ್ನು ಹಾಕುತ್ತಿದ್ದು ದೊಡ್ಡ ಹೈನುಗಾರರಾಗಿದ್ದಾರೆ.
Advertisement
ಸವಲತ್ತು – ಸಹಕಾರಒಕ್ಕೂಟದಿಂದ ಸಿಗುವ ಬಹುತೇಕ ಎಲ್ಲಾ ಸವಲತ್ತುಗಳನ್ನು ಹೈನುಗಾರರಿಗೆ ಒದಗಿಸಲಾಗುತ್ತದೆ. ಬಾಯಿ ಜ್ವರ ಲಸಿಕೆ, ಜಂತುಹುಳ ಔಷಧವಿತರಣೆ ಮಾಡಲಾಗುತ್ತಿದೆ. ತಳಿ ಅಭಿವೃದ್ಧಿಗೆ ಒತ್ತು, ಲವಣ ಮಿಶ್ರಿತ ಪಶು ಆಹಾರ ಪೂರೈಕೆ, ವಿಮಾ ಪರಿಹಾರ ವಿತರಣೆ, ಕಾಲು ಬಾಯಿ ಜ್ವರ ನಿವಾರಣೆ ಚುಚ್ಚುಮದ್ದು, ವಿವಿಧ ಲಸಿಕೆಗಳ ವಿತರಣೆ, ಬೀಜ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಸಂಯೋಜನೆಗೊಳ್ಳುತ್ತಿವೆ. ಇರಂದಾಡಿ ನಿತ್ಯ ಸಹಾಯ ಮಾತಾ ವಸತಿ ಶಾಲೆಯ ಮಕ್ಕಳಿಗೆ ಸಂಘದ ವತಿಯಿಂದ ಬ್ಯಾಗ್‌ಗಳನ್ನು ನೀಡಲಾಗಿದ್ದು, ಪೈಯ್ನಾರು ಅಯ್ಯಣ್ಣ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಗುತ್ತಿದೆ. ಗ್ರಾಮದ ಪ್ರತಿ ಮನೆಗೆ ತೆರಳಿ 5 ರೂ. ದೇಣಿಗೆ ಸಂಗ್ರಹಿಸಿ ಪ್ರಾರಂಭಿಸಿದ ಚಂದ್ರನಗರ ಹಾಲು ಉತ್ಪಾದಕರ ಸಹಕಾರ ಸಂಘವು 1989ರ ಮೇ 8 ರಂದು ನೋಂದಣಿಗೊಂಡಿತ್ತು. 6 ಲೀ. ಹಾಲು ಸಂಗ್ರಹಣೆಯೊಂದಿಗೆ ಶುರುವಾದ ಸಂಘ, ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ನಿತ್ಯ 457.4 ಲೀ. ಹಾಲು ಸಂಗ್ರಹದ ಸಾಧನೆ ಮಾಡಿತ್ತು. 1999ರಲ್ಲಿ ಸಂಘ ಸ್ವಂತ ಕಟ್ಟಡವನ್ನೂ ಹೊಂದಿತು. ಪ್ರಶಸ್ತಿ -ಪುರಸ್ಕಾರ
ಸಂಘವು 2 ಬಾರಿ ಒಕ್ಕೂಟದಿಂದ ಉತ್ತಮ ಸಂಘ ಪ್ರಶಸ್ತಿಯನ್ನು ಪಡೆದಿದೆ. 1 ಕೋಟಿ ರೂ.ವರೆಗೆ ವಹಿವಾಟು ಸಂಘವು ವಾರ್ಷಿಕವಾಗಿ 90 ಲಕ್ಷ ರೂ. ಗಳಿಂದ 1 ಕೋಟಿ ರೂ. ವರೆಗೆ ವಹಿವಾಟು ನಡೆಸುತ್ತಿದೆ. ಸದಸ್ಯರಿಗೆ ಶೇ. 10 ರಷ್ಟು ಡಿವಿಡೆಂಡ್ ಮತ್ತು ಬೋನಸ್ ನೀಡಲಾಗುತ್ತದೆ. ಸಂಘವನ್ನು ಆಧುನಿಕತೆಗೆ ತಕ್ಕಂತೆ ಉತ್ತಮವಾಗಿ ರೂಪುಗೊಳಿಸಲಾಗಿದೆ. ಯಾವುದೇ ಸಾಲ ರಹಿತವಾಗಿ ಸಂಘ ಮುನ್ನಡೆಯುತ್ತಿದ್ದು, ಹೈನುಗಾರರಿಗೆ ಇನ್ನಷ್ಟು ಚೈತನ್ಯ ಮತ್ತು ಶಕ್ತಿ ತುಂಬುವ ಪ್ರಯತ್ನ ನಡೆಯುತ್ತಿದೆ.
-ಸುಧಾಕರ ಶೆಟ್ಟಿ,
ಅಧ್ಯಕ್ಷರು ಅಧ್ಯಕ್ಷರು
ಶೇಷಪ್ಪಯ್ಯ ಗುರ್ಮೆ, ಭೋಜ ಶೆಟ್ಟಿ , ಮುದ್ದಣ್ಣ ಶೆಟ್ಟಿ , ಪ್ರವೀಣ್ ಕುಮಾರ್ ಗುರ್ಮೆ, ಸುಧಾಕರ ಶೆಟ್ಟಿ (ಹಾಲಿ) ಕಾರ್ಯದರ್ಶಿ
ಕಾರ್ಯದರ್ಶಿ : ಲೀಲಾವತಿ, ಶೋಭಾ, ಶಾರದ, ಜಗದೀಶ್ ಸಾಲ್ಯಾನ್ (ಹಾಲಿ) -ರಾಕೇಶ್ ಕುಂಜೂರು