Advertisement

ಉಣಕಲ್‌ ಚಂದ್ರಮೌಳೇಶ್ವರ

02:48 PM Mar 31, 2019 | mahesh |

ಹುಬ್ಬಳ್ಳಿಯಿಂದ ಉಣಕಲ್‌ ರಸ್ತೆಯಲ್ಲಿ ಸಾಗಿದರೆ ಚಂದ್ರಮೌಳೇಶ್ವರ ದೇಗುಲ ಎದುರಾಗುತ್ತದೆ. ಇದು 12ನೇ ಶತಮಾನದ ದೇಗುಲ. ನಾಲ್ಕು ದಿಕ್ಕಿನಲ್ಲಿ ನಾಲ್ಕು ದ್ವಾರಗಳನ್ನೂ, ಎರಡು ನಂದಿಯ ವಿಗ್ರಹಗಳನ್ನು ಹೊಂದಿರುವ ಈ ಅಪರೂಪ ದೇಗುಲ. ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ.

Advertisement

ಉತ್ತರ ಕರ್ನಾಟಕದ ಪ್ರಖ್ಯಾತ ದೇಗುಲಗಳಲ್ಲಿ ಚಂದ್ರಮೌಳೇಶ್ವರ ದೇವಾಲಯವೂ ಒಂದು. ಇದು ಗಂಡುಮೆಟ್ಟದ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿ-ಧಾರವಾಡದ ಉಣಕಲ್‌ ಬಳಿ ಇದೆ. ಇದು ಸುಮಾರು 900 ವರ್ಷಗಷ್ಟು ಹಳೆಯದ್ದಾಗಿದ್ದು, ಅಮರಶಿಲ್ಪಿ ಜಕಣಾಚಾರಿಯು ಈ ದೇವಾಲಯವನ್ನು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ಈ ದೇವಾಲಯ ನೋಡಲು ಬಲು ಆಕರ್ಷಣಿಯವಾಗಿದೆ. ಹಳೆಯ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡ ಕೆಂಪು ಕಲ್ಲಿನ ಸುಂದರ ದೇವಾಲಯ ಇದಾಗಿದೆ. ಕಲ್ಲಿನ ಕೆತ್ತನೆಯೇ ಇಡೀ ದೇಗುಲದ ವಿಶೇಷ ಆಕರ್ಷಣೆ.

ಗುಡಿಯ ಸುತ್ತಮುತ್ತಲೂ ಮಂಟಪಗಳಿವೆ. ಅವುಗಳನ್ನೂ ಕಲ್ಲಿನಿಂದಲೇ ನಿರ್ಮಿಸಿದ್ದಾರೆ. ಎಲ್ಲವೂ 12ನೇ ಶತಮಾನಕ್ಕೆ ಸೇರಿದವು ಎನ್ನುವ ದಾಖಲೆಗಳೂ ಸಿಕ್ಕಿವೆಯಂತೆ . ಭಾರತೀಯ ಪುರಾತತ್ವ ಇಲಾಖೆಯು, ಈ ದೇಗುಲವನ್ನು “ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ಚಾಲುಕ್ಯರು ಈ ದೇವಾಲಯವನ್ನು ಬಾದಾಮಿ, ಐಹೊಳೆ,ಪಟ್ಟದಕಲ್ಲು ದೇವಾಲಯಗಳ ಮಾದರಿಯಲ್ಲೇ ನಿರ್ಮಿಸಿದ್ದಾರೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಇಲ್ಲಿ ಎರಡು ಲಿಂಗಗಳು ಇವೆ. ಒಟ್ಟು ಐದು ಗರ್ಭಗುಡಿಗಳಿವೆ. ಮಧ್ಯದ ಗುಡಿಯಲ್ಲಿ ಚತುರ್ಮುಖ ಲಿಂಗವಿದೆ. ಹೀಗಾಗಿ, ಮಧ್ಯದ ಗರ್ಭಗೃಹಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳನ್ನು ಇಟ್ಟಿದ್ದಾರೆ.

ಮುಖಮಂಟಪದ ಪ್ರವೇಶದ್ವಾರದಲ್ಲಿ ಸಂಗೀತಗಾರರು, ಬಳ್ಳಿಯಾಕಾರಾದ ಕೆತ್ತನೆಗಳನ್ನೊಳಗೊಂಡ
ಜಾಲಂಧರಗಳು ಕಾಣಬಹುದು. ಹೊರಭಾಗದಲ್ಲಿರುವ ಕುಸುರಿ ಕೆತ್ತನೆಗಳು ಇಡೀ ದೇವಾಲಯದ ರೂಪವನ್ನು ಬದಲಿಸಿವೆ. ಇಲ್ಲಿ ಒಟ್ಟು ಹನ್ನೆರಡು ಬಾಗಿಲುಗಳಿವೆ. ಎಲ್ಲದರ ಮೇಲೂ ಸುಂದರವಾದ ಕೆತ್ತನೆಗಳಿವೆ. ವಿಶೇಷ ಎಂದರೆ ದೇವಾಲಯದಲ್ಲಿ ಎರಡು ನಂದಿ ವಿಗ್ರಹಗಳಿರುವುದು. ಸಾಮಾನ್ಯವಾಗಿ ದೇಗುಲದ ಪ್ರವೇಶದ್ವಾರದ ಮುಂದೆ ಮಾತ್ರ ನಂದಿ ಇರುವುದು ರೂಢಿ. ಇಲ್ಲಿ ಪ್ರವೇಶದ್ವಾರ ಮತ್ತು ಮುಖಮಂಟಪದಲ್ಲಿ- ಎರಡು ಕಡೆಯೂ ನಂದಿಯ ವಿಗ್ರಹಗಳಿವೆ. ಗರ್ಭಗುಡಿಯಲ್ಲಿ ಚಂದ್ರಮೌಳೇಶ್ವರ ಲಿಂಗವಿದೆ. ವಿಶೇಷ ಎಂದರೆ ಈ ಶಿವ ಲಿಂಗವು ನಾಲ್ಕು ಮುಖಗಳಿಂದ ಕೂಡಿದ್ದು,ಹೀಗಾಗಿ, ಭಕ್ತರನ್ನು ಸೆಳೆಯುತ್ತಿದೆ.

ದೇಗುಲದ ಎತ್ತರ 20 ಅಡಿ, ಉದ್ದ 55 ಅಡಿ ಹಾಗೂ ಅಗಲ 40 ಅಡಿ ಇದೆ. ಇಡೀ ದೇವಾಲಯ ವಿಶೇಷವಾಗಿ ಕೆಂಪು ಹಾಗೂ ಕಪ್ಪು ಕಲ್ಲುಗಳಿಂದ ನಿರ್ಮಾಣವಾಗಿದೆ. ಯುಗಾದಿಯಿಂದ ಈ ದೇವಸ್ಥಾನದಲ್ಲಿ ವೈಭವದ ಪೂಜೆ ನಡೆಯುತ್ತದೆ. ಶಿವರಾತ್ರಿಯಂದು ಮುಂಜಾನೆ ಸೂರ್ಯನ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವುದನ್ನು ನೋಡಲು ಅಸಂಖ್ಯಾತ ಭಕ್ತರ ದಂಡೇ ನೆರೆದಿರುತ್ತದೆ. ಆ ಸಮಯದಲ್ಲಿ ಚಂದ್ರಮೌಳೇಶ್ವರನ ದರ್ಶನ ಪಡೆದರೆ ಇಷ್ಟಾರ್ಥಗಳು ಪೂರೈಸುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿರುವುದರಿಂದ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ.

Advertisement

ದೇಗುಲ ಬೆಳಗ್ಗೆ 6 ರಿಂದ ರಾತ್ರಿ 8 ವರೆಗೆ ತೆರೆದಿರುತ್ತದೆ. ಹಾದಿ- ಹುಬ್ಬಳ್ಳಿಯಿಂದ 4 ಕಿ.ಮೀ. ದೂರದಲ್ಲಿರುವ ಪ್ರಸಿದ್ಧ ಉಣಕಲ್ ಕೆರೆಯ ಸಮೀಪದಲ್ಲಿಯೇ ಈ ದೇವಾಲಯವಿದೆ.

ಪ್ರಮೋದ ಎಚ್‌. ಕುಂದಗೋಳ

Advertisement

Udayavani is now on Telegram. Click here to join our channel and stay updated with the latest news.

Next