Advertisement

ಚಂದ್ರಗುತ್ತಿಯಲ್ಲಿ ನವರಾತ್ರಿ:14ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ:ಆರ್.ಶ್ರೀಧರ್ ಹುಲ್ತಿಕೊಪ್ಪ

12:44 PM Oct 06, 2021 | Suhan S |

ಸೊರಬ: ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಪಂ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ 6ನೇ ವರ್ಷದ ಶ್ರೀ ರೇಣುಕಾಂಬಾ ದೇವಿಯ ದಸರಾ ಉತ್ಸವ -2021 ಹಮ್ಮಿಕೊಳ್ಳಲಾಗಿದ್ದು, ಅ.7ರಿಂದ 14ರವರೆಗೆ ನಿತ್ಯ ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮಿತಿ ಅಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಸರ್ಕಾರದ ಮಾರ್ಗಸೂಚಿಯ ಅನ್ವಯ ದಸರಾ ಉತ್ಸವ ಮಾಡಲಾಗುತ್ತಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಅ. 7ರಂದು ಸಂಜೆ 5.30ಕ್ಕೆ ಶಾಸಕ ಎಸ್. ಕುಮಾರ್ ಬಂಗಾರಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಶಿವಾನಂದ ರಾಣೆ, ಗ್ರಾಪಂ ಅಧ್ಯಕ್ಷ ಎಂ.ಪಿ. ರತ್ನಾಕರ, ಶ್ರೀ ರೇಣುಕಾಂಬ ಗ್ರಾಮೀಣ ವಿದ್ಯಾ ಸಂಸ್ಥೆ ಅಧ್ಯಕ್ಷ ಪರಶುರಾಮ ಭೋವಿ, ಶ್ರೀ ರೇಣುಕಾಂಬ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಂಗಪ್ಪ, ಗ್ರಾಪಂ ಪಿಡಿಒ ಈಶ್ವರಪ್ಪ ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮದ ನಂತರ ಶಿರಸಿದಯ ನಾಟ್ಯದೀಪ ಕಲ್ಚರಲ್ ಟೀಂನ ಸೀಮಾ ಭಾಗವತ್ ಮತ್ತು ದೀಪಾ ಭಾಗವತ್ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಅ. 8ರಂದು ಸಂಜೆ. 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಉದ್ಘಾಟಿಸಲಿದ್ದು, ಆನವಟ್ಟಿಯ ಶಾಂತಲೆ ನಾಟ್ಯ ತಂಡದಿಂದ ಸಮೂಹ ಜಾನಪದ ನೃತ್ಯಗಳು ಹಾಗೂ ಸೊರಬದ ವನಸುಮ ಕಲಾ ಬಳಗದಿಂದ ಸಮೂಹ ಸಂಗೀತ ನಡೆಯಲಿದೆ. 9ರಂದು ಸಂಜೆ ನಡೆಯುವ ಕಾರ್ಯಕ್ರಮವನ್ನು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಪಾಲ್ಗೊಳ್ಳಲಿದ್ದು, ಶಿವಮೊಗ್ಗದ ಯಕ್ಷಾನುಗ್ರಹ ಸಂಸ್ಕೃತಿ ಸಂವರ್ಧನಾ ಸಂಘದಿಂದ ಧಕ್ಷಯಜ್ಞ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಅ. 10ರಂದು ನಡೆಯುವ ಕಾರ್ಯಕ್ರಮವನ್ನು ಶಾಸಕ ಎಸ್. ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಪೀತಾಂಬರ ಸ್ವಾಮಿ ಪಾಲ್ಗೊಳ್ಳುವರು. ಶಿರಸಿಯ ಕಲಾಭಾರತಿ ಪಾರಂಪರಿಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಸಂಘದಿಂದ ಸಮೂಹ ನಾಟಕಗಳು ಪ್ರದರ್ಶನಗೊಳ್ಳಲಿದೆ. 11ರಂದು ಸಿಗಂದೂರಿನ ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪ ಉದ್ಘಾಟಿಸಲಿದ್ದು, ಜಾನಪದ ಮತ್ತು ಆಕಾಶವಾಣಿ ಕಲಾವಿದ ಶಿವರುದ್ರಪ್ಪ ಎನ್. ಜೋಗಿ ತಂಡದವರಿಂದ ಜೋಗಿಪದ ಗಾಯನ ನಡೆಯಲಿದೆ. 12ರಂದು ಕಾರ್ಯಕ್ರಮವನ್ನು ಶಾಸಕ ಆರ್. ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಂದ್ರಗುತ್ತಿ ಮೆಲೋಡಿಯಸ್ ಬಾಯ್ಸ್ ತಂಡದಿಂದ ರಸಮಂಜರಿ, ಬೆಂಗಳೂರಿನ ಜಾದೂಗಾರ್ ಪ್ರೊ. ಚಂದ್ರಶೇಖರ್ ಅವರಿಂದ ಮ್ಯಾಜಿಕ್ ಷೋ ನಡೆಯಲಿದೆ ಎಂದರು.

ಅ. 13ರಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದು, ಚಂದ್ರಗುತ್ತಿಯ ಶ್ರೀ ರೇಣುಕಾಂಬ ಹವ್ಯಾಸಿ ಬಯಲಾಟ ಕಲಾ ಮಂಡಳಿಯಿಂದ ಮಹಾಸಾದ್ವಿ ದ್ರೌಪದಿ ಬಯಲಾಟ ಪ್ರದರ್ಶನ ಮತ್ತು ಅ. 14ರಂದು ನಡೆಯುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್ ಉದ್ಘಾಟಿಸಲಿದ್ದು, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಗರದ ದುರ್ಗಾವೈಭವ ವಿಧ್ವಾನ್ ಪ್ರಧ್ಯುಮ್ನ ಮತ್ತು ತಂಡದವರಿಂದ ನೃತ್ಯ ರೂಪಕ ಪ್ರದರ್ಶನವಾಗಲಿದೆ ಎಂದು ಮಾಹಿತಿ ನೀಡಿದರು.

Advertisement

ಅ.15 ರಂದು ಜಂಬೂ ಸವಾರಿ:

ನವರಾತ್ರಿ ಉತ್ಸವದ ಅಂಗವಾಗಿ ಇದೇ ಮೊದಲಬಾರಿಗೆ ಅ. 15ರಂದು ನಡೆಯುವ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಶ್ರೀ ರೇಣುಕಾಂಬ ದೇವಿಯ ಜಂಬೂ ಸವಾರಿ ಉತ್ಸವ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಶ್ರೀ ರೇಣುಕಾಂಬ ದೇವಿಯನ್ನು ಅಂಬಾರಿಯಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮುಡಿಯಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷ ಎಂ.ಪಿ. ರತ್ನಾಕರ, ಸದಸ್ಯ ರೇಣುಕಾ ಪ್ರಸಾದ್, ದಸರಾ ಉತ್ಸವ ಆಚರಣಾ ಸಮಿತಿಯ ಉಪಾಧ್ಯಕ್ಷ ಗಣಪತಿ ಸಂಗೇರ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್, ಖಜಾಂಚಿ ವಸಂತ ಶೇಟ್ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next