ಕಾಸರಗೋಡು: ಜಿಲ್ಲೆಯ ಅತೀ ದೊಡ್ಡ ಸೇತುವೆ ಚಂದ್ರಗಿರಿ ಸೇತುವೆಯ ತಡೆಗೋಡೆ ಹಾನಿಗೊಂಡಿದ್ದು, ಅದನ್ನು ರಿಪೇರಿ ಮಾಡುವ ಬದಲು ತಗಡುಶೀಟು ಇರಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುಮ್ಮನಾಗಿದ್ದರು.
ಆದರೆ ಇದೀಗ ಗಾಳಿ ಮಳೆಗೆ ಸೇತುವೆಯ ತಡೆಗೋಡೆಗೆ ಇರಿಸಿದ್ದ ತಗಡು ಶೀಟು ಕಳಚಿ ಹೋಗಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ.
ಸೇತುವೆಯ ಮತ್ತೂಂದು ಭಾಗದ ತಡೆಗೋಡೆಗೂ ಶೀಟು ಇರಿಸಿದ ಪರಿಣಾಮ ತಡೆಗೋಡೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಸ್ಥಳೀಯರು ಮುಂದಾಗುವ ಅಪಾಯದ ಬಗ್ಗೆ ಭಯಭೀತರಾಗಿದ್ದಾರೆ.
ಈ ರಸ್ತೆಯನ್ನು ಕರಾವಳಿ ರಸ್ತೆ ಅಭಿವೃದ್ಧಿ ನಿಗಮವು ನಿರ್ಮಾಣ ಮಾಡಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಸೇತುವೆಯ ತಡೆಗೋಡೆಗೆ ವಾಹನಗಳು ಡಿಕ್ಕಿ ಹೊಡೆದು ಹಾನಿಗೊಂಡಿದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸೇತುವೆಯ ತಡೆಗೋಡೆಯನ್ನು ಪುನರ್ ನಿರ್ಮಾಣ ಮಾಡುವ ಕ್ರಮವನ್ನು ಕೈಗೊಂಡಿಲ್ಲ. ಸೇತುವೆಯ ಇಕ್ಕೆಲಗಳಲ್ಲಿರುವ ತಡೆಗೋಡೆಗೆ ತಗಡು ಶೀಟು ಇರಿಸಿರುವ ಕ್ರಮವನ್ನು ಸ್ಥಳೀಯರು ಖಂಡಿಸಿದ್ದಾರೆ.