ನವದೆಹಲಿ: ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿನ ಉಪ ಚುನಾವಣೆ ಬಿಜೆಪಿಗೆ ಪ್ರತಿಕೂಲವಾಗಿರುವಂತೆಯೇ ಟಿಡಿಪಿ ಎನ್‌ಡಿಎ ತೊರೆಯುತ್ತ ಹೆಜ್ಜೆ ಹಾಕಿದೆ. ಕಳೆದ ವಾರ ಇಬ್ಬರು ಸಚಿವರನ್ನು ವಾಪಸ್ ಕರೆಸಿಕೊಂಡಿದ್ದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಇದೀಗ ಎನ್‌ಡಿಎ ತೊರೆಯುವ ನಿರ್ಧಾರವನ್ನೂ ಮಾಡಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡದ ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಿರುವ ವೈಎಸ್‌ಆರ್ ಕಾಂಗ್ರೆಸ್‌ಗೆ ಟಿಡಿಪಿ ಬೆಂಬಲ ನೀಡಲಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ನಾಯ್ಡು ಶುಕ್ರವಾರ ಪಕ್ಷದ ಸಭೆ ಕರೆದಿದ್ದಾರೆ.
ಈ ಸಂಬಂಧ ಗುರುವಾರ ಸಂಸದರೊಂದಿಗೆ ಟೆಲಿಕಾನ್ಫರೆನ್ಸ್ ಮೂಲಕ ಮಾತನಾಡಿದ ಚಂದ್ರಬಾಬು ನಾಯ್ಡು, ತಮಿಳುನಾಡಿ ನಲ್ಲಿ ಮಾಡಿದಂತೆಯೇ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪವನ್ ಕಲ್ಯಾಣ್‌ರವರ ಜನ ಸೇನಾ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಬಳಸಿಕೊಂಡು ಟಿಡಿಪಿ ಮಣಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರ ಉಪ ಚುನಾವಣೆಯಲ್ಲಿನ ಸೋಲು ಬಿಜೆಪಿ ವಿರೋಧಿ ಅಲೆ ಸೂಚಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ತೃತೀಯ ರಂಗದ ಧ್ವನಿಗೆ ಇನ್ನಷ್ಟು ಬಲ: ಬಿಹಾರ ಹಾಗೂ ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ತೃತೀಯ ರಂಗದ ಕಲ್ಪನೆಗೆ ಮತ್ತೆ ಜೀವ ತುಂಬಿದೆ. ಗುರುವಾರ ಮಾತನಾಡಿರುವ ಸಮಾಜವಾದಿ ಪಕ್ಷದ ಮುಖಂಡ, ಮಾಜಿ ಸಿಎಂ ಅಖೀಲೇಶ್ ಯಾದವ್, ಹಳೆಯ ವೈರತ್ವ ಮರೆತು ಒಂದಾಗಬೇಕಿದೆ ಎಂದಿದ್ದರೆ, ಬಿಜೆಪಿ ಪುನಃ ಅಧಿಕಾರಕ್ಕೆ ಬರುವುದನ್ನು ತಡೆಯಬೇಕಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ. ಗುರುವಾರ ಚಂಡೀಗಢದಲ್ಲಿ ಮಾಯಾವತಿ ಬೃಹತ್ ರ್ಯಾಲಿ ನಡೆಸಿದ್ದು, ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.