ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳನ್ನೆಲ್ಲ ಒಗ್ಗೂಡಿಸಲು ಯತ್ನಿಸುತ್ತಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಈಗ ಮತ್ತೂಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ರವಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎನ್‌ಸಿಪಿ ಮುಖಂಡ ಶರದ್ ಪವಾರ್‌ರೊಂದಿಗೆ ಅವರು ಮಾತುಕತೆ ನಡೆಸಿದ್ದು, ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಚರ್ಚೆ ನಡೆದಿದೆ. ಒಟ್ಟು 21 ಪಕ್ಷಗಳನ್ನು ಒಗ್ಗೂಡಿಸುವುದು ನಾಯ್ಡು ಯೋಜನೆಯಾಗಿದ್ದು, ಶುಕ್ರವಾರದಿಂದ ಅವರು ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ.
ರವಿವಾರ ಎರಡನೇ ಸುತ್ತಿನಲ್ಲಿ ರಾಹುಲ್ ಮತ್ತು ಪವಾರ್‌ರನ್ನು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿಪಿಎಂ ಸೀತಾರಾಂ ಯೆಚೂರಿಯವರನ್ನೂ ಮಾತನಾಡಿಸಿ, ಅನಂತರ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಜತೆಗೂ ಮಾತುಕತೆ ನಡೆಸಿದ್ದಾರೆ. ಹೀಗಾಗಿ ನಾಯ್ಡು ನಡೆ ಈಗ ಭಾರೀ ಕುತೂಹಲ ಕೆರಳಿಸಿದೆ. ಎನ್‌ಡಿಎ ಬಹುಮತ ಪಡೆಯಲು ಸಾಧ್ಯವಾಗದಿದ್ದರೆ ಎಲ್ಲ ಪಕ್ಷಗಳೂ ಒಗ್ಗೂಡಿ ಸರಕಾರ ರಚನೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
Advertisement