Advertisement

ಮತ್ತೂಂದು ಮಹಾಮೈತ್ರಿ?

09:42 AM Dec 10, 2018 | Team Udayavani |

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದಲೂ ಮಹಾಘಟ ಬಂಧನ್‌ ರಚನೆಗೆ ಪ್ರಯತ್ನ ನಡೆಸುತ್ತಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸೋಮವಾರ ಹೊಸದಿಲ್ಲಿಯಲ್ಲಿ ವಿಪಕ್ಷಗಳ ಸಭೆ ನಡೆಸಲಿದ್ದಾರೆ. ಸಭೆಗೆ ಕಾಂಗ್ರೆಸ್‌, ಆಪ್‌, ಸಮಾಜವಾದಿ ಪಕ್ಷ ಸೇರಿದಂತೆ ಪ್ರಮುಖ ಪಕ್ಷಗಳ ಮುಖಂಡರು ಹಾಜರಾಗಲಿದ್ದಾರೆ. ಆದರೆ ತೃಣ ಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಸೇರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

Advertisement

ಎನ್‌ಡಿಎ ಒಕ್ಕೂಟದಿಂದ ಹೊರಬಂದ ನಂತರ ಮಹಾಘಟಬಂಧನ್‌ರೂಪಿಸಲು ಯತ್ನಿಸುತ್ತಿರುವ ನಾಯ್ಡುಗೆ ಇದು ಮಹತ್ವದ ಸಭೆಯಾಗಿದೆ. ಆದರೆ ಈಗಾಗಲೇ ಮಾಯಾವತಿ, ಬಿಜೆಡಿಯ ನವೀನ್‌ ಪಟ್ನಾಯಕ್‌ ಹಾಗೂ ಇತರ ಪ್ರಮುಖ ಪಕ್ಷಗಳ ಮುಖಂಡರನ್ನು ಓಲೈಸಲು ನಾಯ್ಡು ವಿಫ‌ಲವಾಗಿದ್ದಾರೆ. ಆದರೆ ಕಾಂಗ್ರೆಸ್‌ ಜೊತೆಗೆ ಭಿನ್ನಾಭಿಪ್ರಾಯವಿದ್ದೂ ಎಎಪಿ ಈ ಮೈತ್ರಿ ಕೂಟದ ಭಾಗವಾಗಲು ಒಪ್ಪಿರುವುದು ಮಹತ್ವದ ಸಂಗತಿಯಾಗಿದೆ. ಇನ್ನೊಂದೆಡೆ ಆಪ್‌ನಿಂದ ಹೊರ ಬಂದು ಸ್ವತಂತ್ರ ಪಕ್ಷ ಸ್ವರಾಜ್‌ ಇಂಡಿಯಾ ಕಟ್ಟಿದ ಯೋಗೇಂದ್ರ ಯಾದವ್‌ ಈ ಮಹಾ ಘಟಬಂಧನದಲ್ಲಿ ಸೇರುವುದಿಲ್ಲ ಎಂದಿದ್ದಾರೆ.

ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಕೂಡ ಭಾಗವಹಿಸಲಿದ್ದು, ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸುವಲ್ಲಿ ನಾಯ್ಡುಗೆ ಶರದ್‌ ನೆರವಾಗಿದ್ದರು. ದಕ್ಷಿಣ ಭಾರತದ ಯಾವ ಪಕ್ಷವೂ ಇದರಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಲ್ಲ. 

ಸಮೀಕ್ಷೆಯೇ ಬಲ: ಈ ವಿಪಕ್ಷಗಳ ಸಭೆ ನವೆಂಬರ್‌ನಲ್ಲೇ ನಡೆಯಬೇಕಿತ್ತು. ಆದರೆ ಐದು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸಿದ್ದರಿಂದ, ಅದರ ಪರಿಣಾಮಗಳನ್ನು ಗಮನಿಸಿದ ನಂತರವೇ ಸಭೆ ನಡೆಸಲು ನಿರ್ಧರಿಸಲಾಯಿತು. ಈಗ ಬಹುತೇಕ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಭಾರಿ ಬಹುಮತದಿಂದ ಗೆಲ್ಲುವ ಸಾಧ್ಯತೆಯಿಲ್ಲ ಎಂಬ ಅಂಶ ಬಯಲಾಗುತ್ತಿದ್ದಂತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದೇ ಹೇಳಲಾಗಿರುವ ಈ ಚುನಾವಣೆಯ ಫ‌ಲಿತಾಂಶ ಕೂಡ ಮಹಾಘಟ ಬಂಧನ್‌ದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next