Advertisement

ತೆರೆಮರೆಗೆ ಸರಿದ ಚಂದವನದ ಚಂದ್ರ

10:22 AM Jan 28, 2018 | |

ನಟ ಚಂದ್ರಶೇಖರ್‌ ಅಂದರೆ, ಬಹಳಷ್ಟು ಜನರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ, “ಎಡಕಲ್ಲು’ ಚಂದ್ರು ಅಂದಾಕ್ಷಣ, ಎಲ್ಲರೂ ಗೊತ್ತು ಎನ್ನುವಷ್ಟರ ಮಟ್ಟಿಗೆ ಚಂದ್ರಶೇಖರ್‌ಗೆ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಹೆಸರು ತಂದುಕೊಟ್ಟಿತ್ತು. ಚಂದ್ರಶೇಖರ್‌ ಚಿಕ್ಕಂದಿನಲ್ಲೇ ಕಲೆಯ ಮೇಲೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲೆಯ ದಿನಗಳಲ್ಲೇ ನಾಟಕದ ಗೀಳು ಅಂಟಿಸಿಕೊಂಡಿದ್ದ ಅವರು, ಹಿರಿಯ ನಟರಾದ ಸಿ.ಆರ್‌.ಸಿಂಹ ಮತ್ತು ಶ್ರೀನಾಥ್‌ ಸಹೋದರರು ಬಾಲ್ಯದ ಗೆಳೆಯರಾಗಿದ್ದರು.

Advertisement

ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ಓದಿದ್ದ ಅವರಿಗೆ, ಅದೇ ಸಮಯದಲ್ಲಿ ಸಿ.ಆರ್‌.ಸಿಂಹ ಮತ್ತು ಶ್ರೀನಾಥ್‌ ಅವರೊಂದಿಗೆ ನಾಟಕ ಅಭ್ಯಾಸಕ್ಕೆ ಚಂದ್ರಶೇಖರ್‌ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಶಾಲೆಯ ಸಾಂಸ್ಕೃತಿಕ ಕಾರ್ಯಚಟುವಟಿಕೆಯಲ್ಲೂ ಚಂದ್ರು ಮುಂಚೂಣಿಯಲ್ಲಿರುತ್ತಿದ್ದರು. “ಬಯಸದೇ ಬಂದ ಭಾಗ್ಯ’, “ನಮ್ಮ ಮಕ್ಕಳು’ ಚಿತ್ರದಲ್ಲಿ ಬಾಲನಟರಾಗಿ ನಟಿಸುವ ಅವಕಾಶ ದೊರೆಯಿತು.

ಹಿರಿಯ ನಿರ್ದೇಶಕ ನಾಗೇಂದ್ರರಾವ್‌ ಮತ್ತು ವಾದಿರಾಜ್‌ ಅವರು ಚಂದ್ರು ಅವರ ಮನೆಗೆ ಹೋಗಿ, ಅಲ್ಲೇ ಆಡಿಷನ್‌ ನಡೆಸಿ, ಚಂದ್ರಶೇಖರ್‌ ಅವರನ್ನು ಆಯ್ಕೆ ಮಾಡಿದ್ದರು. ಆಗ ಚಂದ್ರಶೇಖರ್‌ 10 ನೇ ತರಗತಿ ಓದುತ್ತಿದ್ದರು. ಮಗನನ್ನು ಚಿತ್ರರಂಗಕ್ಕೆ ಕಳುಹಿಸಲು ಚಂದ್ರಶೇಖರ್‌ ಅವರ ತಂದೆಗೆ ಇಷ್ಟವಿರಲಿಲ್ಲ. ಕೊನೆಗೆ, ಹೇಗೋ ಅವರ ತಂದೆಯನ್ನು ಒಪ್ಪಿಸಿ, ಕೇವಲ ಒಂದೂವರೆ ತಿಂಗಳಲ್ಲೇ ಆ ಚಿತ್ರದ ಚಿತ್ರೀಕರಣ ಮುಗಿಸಿದ್ದರು.

ಶಾಲೆ ಮುಗಿಸಿ, ನ್ಯಾಷನಲ್‌ ಕಾಲೇಜ್‌ಗೆ ಪ್ರವೇಶಿಸಿದ ಚಂದ್ರಶೇಖರ್‌ಗೆ ಅಲ್ಲಿ ಕುಮಾರ್‌ ಎಂಬ ವಿದ್ಯಾರ್ಥಿಯ ಪರಿಚಯವಾಯಿತು. ಆ ಕುಮಾರ್‌ ಬೇರಾರೂ ಅಲ್ಲ, ಕನ್ನಡ ಚಿತ್ರರಂಗದ ಖ್ಯಾತ ನಟ ಡಾ.ವಿಷ್ಣುವರ್ಧನ್‌. ಅವರಿಬ್ಬರು ಕಾಲೇಜಿನಲ್ಲಿ ಓದುತ್ತಲೇ ಸಿನಿಮಾ ಕನಸು ಕಂಡವರು. “ವಂಶವೃಕ್ಷ’ ಚಿತ್ರದಲ್ಲಿ ಇಬ್ಬರಿಗೂ ನಟಿಸುವ ಅವಕಾಶ ಬಂತು. ಕಾಲೇಜು ಮುಗಿದ ನಂತರವೂ ವಿಷ್ಣುವರ್ಧನ್‌ ಅವರೊಂದಿಗೆ ಚಂದ್ರಶೇಖರ್‌ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದರು.

ವಿಷ್ಣುವರ್ಧನ್‌ಗೆ ಪುಟ್ಟಣ್ಣ ಕಣಗಾಲ್‌ ಅವರು “ನಾಗರಹಾವು’ ಚಿತ್ರ ಮಾಡಿದರು. ಆ ಬಳಿಕ, ಪುಟ್ಟಣ್ಣ ಅವರ ಕಣ್ಣು ಚಂದ್ರಶೇಖರ್‌ ಮೇಲೂ ಬಿತ್ತು. ಆಗ “ಎಡಕಲ್ಲು ಗುಡ್ಡದ ಮೇಲೆ’ ಎಂಬ ಚಿತ್ರಕ್ಕೆ ಚಂದ್ರಶೇಖರ್‌ ಅವರನ್ನೇ ಪುಟ್ಟಣ್ಣ ಕಣಗಾಲ್‌ ನಾಯಕರನ್ನಾಗಿಸಿದರು. “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಚಂದ್ರಶೇಖರ್‌ ಅವರ ವೃತ್ತಿ ಬದುಕಿಗೆ ದಾರಿಯಾಯಿತು.

Advertisement

ಅಲ್ಲಿಂದ ಅವರು “ಎಡಕಲ್ಲು’ ಚಂದ್ರು ಎಂದೇ ಹೆಸರು ಪಡೆದರು. ಆ ಚಿತ್ರದ “ಸಂತೋಷ ಅಹಾ, ಅಹಾ.. ಸಂಗೀತ ಓಹೋ ಓಹೋ..’ ಎಂಬ ಹಾಡು ಇಂದಿಗೂ ಎವರ್‌ಗ್ರೀನ್‌ ಆಗಿಯೇ ಉಳಿದಿದೆ. ಪುಟ್ಟಣ್ಣ ಕಣಗಾಲ್‌ ಅವರ ಶಿಷ್ಯವೃಂದದಲ್ಲಿ ಅಂಬರೀಷ್‌, ವಿಷ್ಣುವರ್ಧನ್‌, ಶ್ರೀನಾಥ್‌, ಜೈ ಜಗದೀಶ್‌, ಸುಂದರ್‌ರಾಜ್‌ ಅವರ ಜತೆಗೆ ಚಂದ್ರಶೇಖರ್‌ ಕೂಡ ಗುರುತಿಸಿಕೊಂಡಿದ್ದು ವಿಶೇಷ. 

ಅಪೂರ್ವ ಚಿತ್ರಗಳಲ್ಲಿ ಚಂದ್ರು…: “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಆಗಿನ ಕಾಲದಲ್ಲೇ ಒಂದು ರೊಮ್ಯಾಂಟಿಕ್‌ ಚಿತ್ರವಾಗಿ ಎಲ್ಲರ ಮನವನ್ನು ಗೆದ್ದಿತ್ತು. ಅದಾದ ಬಳಿಕ ಚಂದ್ರಶೇಖರ್‌ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದರು. “ಮಳೆ ಬಂತು ಮಳೆ’, “ಮಾನಸ ಸರೋವರ’, “ಸಂಸ್ಕಾರ’, “ಪಾಪ ಪುಣ್ಯ’, “ಸೀತೆಯಲ್ಲ ಸಾವಿತ್ರಿ’, “ಕಸ್ತೂರಿ ವಿಜಯ’, “ಒಂದು ರೂಪ ಎರಡು ಗುಣ’,

“ಮನೆ ಬೆಳಕು’, “ಹಂಸಗೀತೆ’, “ಸೂತ್ರದ ಗೊಂಬೆ’, “ಪರಿವರ್ತನೆ’, “ರಾಜ ನನ್ನ ರಾಜ’, “ಕನಸು ನನಸು’, “ಬೆಸುಗೆ’, “ಮುಯ್ಯಿಗೆ ಮುಯ್ಯಿ’, “ಶಂಕರ್‌ ಗುರು’, “ಶನಿ ಪ್ರಭಾವ’, “ದೇವರ ದುಡ್ಡು’, “ಸೊಸೆ ತಂದ ಸೌಭಾಗ್ಯ’,”ಶ್ರೀಮಂತನ ಮಗಳು’ “ಶಿವಲಿಂಗ’, “ಅಸ್ತಿತ್ವ’,”ರೋಸ್‌’,”ಜೀವ’,”ಹಾಗೇ ಸುಮ್ಮನೆ’ ಸೇರಿದಂತೆ ಹಲವು ಯಶಸ್ವಿ ಕನ್ನಡ ಚಿತ್ರಗಳಲ್ಲಿ ಚಂದ್ರಶೇಖರ್‌ ನಟಿಸಿದ್ದರು. 

ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವಾಗಲೇ ಅವರು ಕಾರ್ಯಕ್ರಮವೊಂದರಲ್ಲಿ ಒಂದು ಹುಡುಗಿಯನ್ನ ನೋಡಿ, ಪ್ರೀತಿಗೆ ಬಿದ್ದರು. 1984ರಲ್ಲಿ ಶೀಲಾ ಅವರನ್ನು ಮದುವೆಯಾದರು. ಆ ಬಳಿಕ ಕೆನಡಾಗೆ ಹೋದ ಚಂದ್ರಶೇಖರ್‌ ತಮ್ಮ ಪತ್ನಿಯ ಆಸೆಯಂತೆ ಅಲ್ಲೇ ನೆಲೆಸಿದರು. ನಟನೆ ಜೊತೆಗೆ ತಾಂತ್ರಿಕವಾಗಿ ತೊಡಗಿಕೊಂಡ ಚಂದ್ರಶೇಖರ್‌, ಕಾರ್ಪೋರೆಟ್, ಟೆಲಿಫಿಲಂ ಮಾಡಿದರು, ಆ ಚಿತ್ರಗಳನ್ನು ಭಾರತದಲ್ಲೂ ಪ್ರದರ್ಶಿಸಿದರು.

ಆ ಬಳಿಕ ಸ್ವಲ್ಪ ದಿನಗಳ ಕಾಲ ಚಿತ್ರರಂಗದಿಂದ ದೂರವಿದ್ದು,  ಕೆನಡಾದಲ್ಲಿನ ಒಟ್ಟಾವಾದಲ್ಲಿ ಪತ್ನಿ ಜೊತೆ ನೆಲೆಸಿದ್ದರು. ಅಲ್ಲಿ ಅವರ ಪತ್ನಿ ಭರತನಾಟ್ಯ ತರಗತಿ ನಡೆಸುತ್ತಿದ್ದರು. “ಹಾಗೇ ಸುಮ್ಮನೆ’ ಚಿತ್ರದ ಮೂಲಕ ಪುನಃ ಚಿತ್ರರಂಗಕ್ಕೆ ಬಂದ ಚಂದ್ರಶೇಖರ್‌, ತಮ್ಮ ಎರಡನೇ ಇನ್ನಿಂಗ್ಸ್‌ ಶುರುಮಾಡಿದರು. ಪುತ್ರಿ ತಾನ್ಯ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದರಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲೇ ವಾಸವಾಗಿದ್ದರು.

ಅಷ್ಟೇ ಅಲ್ಲ, ಇಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಲೇ, ಅವರು “ಕೆಂಪಮ್ಮನ ಕೋರ್ಟ್‌ ಕೇಸ್‌’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಅವರು ಅಭಿನಯಿಸಿದ ಕೊನೆಯ ಚಿತ್ರ “3 ಗಂಟೆ 30 ದಿನ 30 ಸೆಕೆಂಡ್‌’ ಇತ್ತೀಚೆಗಷ್ಟೇ ತೆರೆಕಂಡಿತ್ತು. ಇನ್ನೊಂದು ವಿಶೇಷವೆಂದರೆ, 1973 ರಲ್ಲಿ ಪುಟ್ಟಣ್ಣ ಕಣಗಾಲ್‌ ನಿರ್ದೇಶನದಲ್ಲಿ ಮೂಡಿಬಂದ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಹೆಸರನ್ನೇ ಇಟ್ಟುಕೊಂಡು ಚಿತ್ರೀಕರಣ ಮಾಡುತ್ತಿರುವ ಹೊಸಬರ ತಂಡದ ಜತೆಯಲ್ಲೂ ಚಂದ್ರಶೇಖರ್‌ ನಟಿಸಿದ್ದರು.

ಆ ಚಿತ್ರದಲ್ಲಿ “ವಿರಹ ನೂರು ನೂರು ತರಹ..’ ಅಂತ ಹಾಡಿ ಕುಪ್ಪಳಿಸಿದ್ದ ಹಿರಿಯ ಕಲಾವಿದೆ ಜಯಂತಿ ಹಾಗೂ ಚಂದ್ರಶೇಖರ್‌ ಪುನಃ ಈ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ. ಅಂದಹಾಗೆ, ಹೊಸಬರು ಮಾಡುತ್ತಿರುವ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಮಕ್ಕಳ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಬೇಕಿದೆ.

ರಾಜಕುಮಾರ್‌ ಜೊತೆ ನಟನೆ: ಚಂದ್ರಶೇಖರ್‌ ಅವರು ಡಾ.ರಾಜಕುಮಾರ್‌ ಅವರ ಜತೆ “ರಾಜ ನನ್ನ ರಾಜ’ ಚಿತ್ರದಲ್ಲಿ ಮೊದಲ ಸಲ ನಟಿಸಿದರು. ಆ ಚಿತ್ರದ “ನೂರು ಕಣ್ಣು ಸಾಲುದು…’ ಹಾಡಿನ ಚಿತ್ರೀಕರಣದಲ್ಲಿ ಡಾ.ರಾಜಕುಮಾರ್‌ ಅವರೊಂದಿಗೆ ನಟಿಸಿದ್ದನ್ನು ಪದೇ ಪದೇ ಮೆಲುಕು ಹಾಕುತ್ತಿದ್ದರು.

“ಒಂದೇ ರೂಪ ಎರಡು ಗುಣ’, “ಧರಣಿ ಮಂಡಲ ಮಧ್ಯದೊಳಗೆ’ ಸೇರಿದಂತೆ ಅನೇಕ ಚಿತ್ರಗಳು ಹಿಟ್‌ ಆಗಿದ್ದರೂ, ಚಿತ್ರರಂಗದ ಇತಿಹಾಸದಲ್ಲಿ ಅವರನ್ನು ಎಲ್ಲರು ಗುರತಿಸುತ್ತಿದ್ದದ್ದು, “ಎಡಕಲ್ಲು ಗುಡ್ಡದ ಮೇಲೆ’ ಚಂದ್ರಶೇಖರ್‌ ಎಂದು. ಆ ಚಿತ್ರದ ನಂಜುಂಡ ಎಂಬ ಪಾತ್ರ, ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.

ಚಂದ್ರು ನಿಧನದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ನನಗೆ ಚಿತ್ರರಂಗದಲ್ಲಿ ಅವನೊಬ್ಬ ಒಳ್ಳೆಯ ಗೆಳೆಯ. ಎಷ್ಟರಮಟ್ಟಿಗೆ ಗೆಳೆತನವಿತ್ತು ಅಂದರೆ, ಇಬ್ಬರೂ ಒಂದೇ ಮನೆಯವರು ಎನ್ನುವಷ್ಟು. ನನ್ನ ಎಲ್ಲಾ ಸುಖ-ದುಃಖ, ನೋವು, ನಲಿವುಗಳಿಗೆ ಭಾಗಿಯಾಗುತ್ತಿದ್ದ. ಅವನು ಅತ್ಯಂತ ಸ್ನೇಹಜೀವಿ. ನಾವಿಬ್ಬರು ಒಟ್ಟಿಗೆ ಸುಮಾರು 20 ಚಿತ್ರಗಳಲ್ಲಿ ನಟಿಸಿದ್ದೇವೆ. ಚಿಕ್ಕಂದಿನಿಂದಲೂ ಗೆಳೆತನವಿತ್ತು. ಆಗಿನಿಂದಲೂ ಅದೇ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದ ವ್ಯಕ್ತಿ. ಬದುಕಿನ ಬಗ್ಗೆ ತುಂಬಾನೇ ಆಸೆಗಳನ್ನು ಇಟ್ಟುಕೊಂಡಿದ್ದ. ನಿರ್ದೇಶನದ ಮೇಲೆ ಆಸಕ್ತಿ ಹೆಚ್ಚಾಗಿತ್ತು. ಆದರೆ, ಹೀಗಾಗುತ್ತೆ ಅಂತ ಊಹಿಸಿರಲಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ದುಃಖದಲ್ಲಿರುವ ಕುಟುಂಬಕ್ಕೆ ಧೈರ್ಯ ಕೊಡಲಿ.
-ಶ್ರೀನಾಥ್‌, ನಟ

ಚಂದ್ರಶೇಖರ್‌ ಅವರು ಬಾಲ ಕಲಾವಿದರಾಗಿ ಚಿತಗ್ರರಂಗ ಪ್ರವೇಶ ಮಾಡಿದವರು. ಆ ನಂತರ ಪುಟ್ಟಣ್ಣ ಕಣಗಾಲ್‌ ಅವರ ಗರಡಿಯಲ್ಲಿ ಬೆಳೆದರು. ಅವರು ಅಭಿನಯಿಸಿದ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ಅಷ್ಟೇ ಅಲ್ಲ, ಆ ಚಿತ್ರದ ನಂತರ ಚಂದ್ರಶೇಖರ್‌ ದೊಡ್ಡ ನಟರಾಗಿ ಹೊರಹೊಮ್ಮಿದರು. ಅವರು ಸ್ನೇಹಜೀವಿ. ಅವಕಾಶ ಇಲ್ಲದಿರುವಾಗಲೂ ಯಾರ ಬಳಿ ಹೋಗಿ ಅವಕಾಶ ಕೇಳಿದವರಲ್ಲ. ನಾನು ಮತ್ತು ಶ್ರೀನಾಥ್‌ ಇಬ್ಬರು ಚಂದ್ರಶೇಖರ್‌ ಜತೆ ಎಷ್ಟೋ ಬಾರಿ ಶಬರಿಮಲೆ ಯಾತ್ರೆಗೆ ಹೋಗಿದ್ದೆವು. ಅದೀಗ ಬರೀ ನೆನಪು ಮಾತ್ರ. ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡ ನೋವಿದೆ. ದೇವರು ಅವರ ಕುಟುಂಬಕ್ಕೆ ಧೈರ್ಯ ತುಂಬುವ ಶಕ್ತಿ ಕೊಡಲಿ.
-ಸಾ.ರಾ.ಗೋವಿಂದು, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ನಾನು ಮತ್ತು ಚಂದ್ರಶೇಖರ್‌ ಇಬ್ಬರೂ ಪ್ರಾಣ ಸ್ನೇಹಿತರು. ನಬ್ಬಿಬ್ಬರ ಗೆಳೆತನ ಸುಮಾರು 42 ವರ್ಷಗಳದ್ದು. ಇಬ್ಬರೂ ಪುಟ್ಟಣ್ಣ ಕಣಗಾಲ್‌ ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದೇವೆ. ನಾವಿಬ್ಬರು ಸುಮಾರು 12 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಸಿಕ್ಕಾಗೆಲ್ಲ, ಚಿತ್ರರಂಗದ ಆಗು ಹೋಗುಗಳ ಕುರಿತು ಚರ್ಚೆ ಮಾಡುತ್ತಿದ್ದೆವು. ಚಿತ್ರೀಕರಣ ಸಮಯದಲ್ಲಂತೂ ಸಾಕಷ್ಟು ತಮಾಷೆ ಮಾಡಿಕೊಂಡೇ ಕೆಲಸ ಮಾಡುತ್ತಿದ್ದೆವು. ಈ ರೀತಿ ಸಡನ್‌ ಸಾವನ್ನಪ್ಪಿದ್ದು, ಎಲ್ಲರಿಗೂ ನೋವು ತಂದಿದೆ. ಚಿತ್ರರಂಗದ ಒಬ್ಬ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡ ನೋವಿದೆ. ಇತ್ತೀಚೆಗಷ್ಟೇ, ಇಬ್ಬರೂ ಭೇಟಿ ಮಾಡಿ ಮಾತಾಡಿದ್ದೆವು. ಒಂದು ಸ್ಕ್ರಿಪ್ಟ್ ಮಾಡುತ್ತಿರುವುದಾಗಿಯೂ ಹೇಳಿದ್ದರು. ಆದರೆ, ದೇವರು ಕರೆದುಕೊಂಡ.
-ಜೈ ಜಗದೀಶ್‌, ನಟ

Advertisement

Udayavani is now on Telegram. Click here to join our channel and stay updated with the latest news.

Next