ಜನಸಂಖ್ಯೆಯ ದೃಷ್ಟಿಯಿಂದ ನವದೆಹಲಿಯ ಚಾಂದ್‌ನೀ ಚೌಕ್ ದೆಹಲಿಯ ಅತಿ ಚಿಕ್ಕ ಲೋಕಸಭಾ ಕ್ಷೇತ್ರವಾದರೂ ಇಲ್ಲಿನ ಗೆಲುವು ಬಿಜೆಪಿ, ಕಾಂಗ್ರೆಸ್ ಮತ್ತು ಆಪ್‌ಗೆ ಪ್ರತಿಷ್ಠೆಯ ವಿಷಯವಾಗಿ ಬದಲಾಗಿದೆ. ಭಾರತದ ಅತಿ ಹಳೆಯ ಮಾರುಕಟ್ಟೆಯಲ್ಲಿ ಒಂದಾಗಿರುವ ಚಾಂದ್‌ನೀ ಚೌಕದಲ್ಲಿ ರಾಜಕೀಯವೆಲ್ಲವೂ ವ್ಯಾಪಾರಸ್ಥರ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಇದು ಏಷ್ಯಾದ ಅತಿದೊಡ್ಡ ಮಸಾಲೆ ಮಾರುಕಟ್ಟೆ ಎನ್ನುವುದೂ ಗಮನಿಸಬೇಕಾದ ಸಂಗತಿ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಾ. ಹರ್ಷವರ್ಧನ್ ಅವರು ಆಪ್‌ನ ಅಶುತೋಷ್ ಮತ್ತು ಕಾಂಗ್ರೆಸ್‌ನ ಕಪಿಲ್ ಸಿಬಲ್ರನ್ನು ಸೋಲಿಸಿ ಈ ಕ್ಷೇತ್ರದ ಸಂಸದರಾದರು. ಈ ಬಾರಿ ಬಿಜೆಪಿಯು ಡಾ. ಹರ್ಷವರ್ಧನ್ ಅವರನ್ನೇ ಕಣಕ್ಕಿಳಿಸಿದೆ, ಇತ್ತ ಅಧಿಕಾರಕ್ಕೆ ಬರಲು ಭಾರಿ ಪ್ರಯತ್ನ ನಡೆಸಿರುವ ಕಾಂಗ್ರೆಸ್ ಸ್ಥಳೀಯ ನಾಯಕ ಜೆ.ಪಿ. ಅಗರ್‌ವಾಲ್ ಅವರಿಗೆ ಟಿಕೆಟ್ ಕೊಟ್ಟರೆ, ಆಮ್ ಆದ್ಮಿ ಪಾರ್ಟಿಯು ಉದ್ಯಮಿ ಪಂಕಜ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ.
ಡಾ. ಹರ್ಷವರ್ಧನ್‌ರಿಂದಾಗಿ ಚಾಂದ್‌ನೀ ಚೌಕದಲ್ಲಿ ಅಭಿವೃದ್ಧಿಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಹೇಳುತ್ತಿದ್ದರೆ, ಈ ಅಭಿವೃದ್ಧಿಗೆ ತನ್ನ ಸರ್ಕಾರವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ವಾದಿಸುತ್ತಾ ಬರುತ್ತಿದೆ, ಅತ್ತ ಕಾಂಗ್ರೆಸ್ ಈ ಅಭಿವೃದ್ಧಿ ಯೋಜನೆಗಳೆಲ್ಲವೂ ತಮ್ಮ ಆಡಳಿತಾವಧಿಯಲ್ಲೇ ಬಂದಿವೆ ಎನ್ನುತ್ತಿದೆ. ಆದರೆ ಇಲ್ಲೇನೂ ಅಭಿವೃದ್ಧಿಯೇ ಆಗಿಲ್ಲ ಎನ್ನುತ್ತಾರೆ ಕೆಲ ಸ್ಥಳೀಯರು! ಸ್ಥಳೀಯ ಶಾಲಿಮಾರ್ ಮಾರುಕಟ್ಟೆಯಲ್ಲಿನ ಈಶ್ವರ್ ಸಿನ್ಹಾ ಎನ್ನುವ ವ್ಯಾಪಾರಿಯೊಬ್ಬರ ಪ್ರಕಾರ, ಈ ಪ್ರದೇಶದಲ್ಲಿನ ರಸ್ತೆಗಳೆಲ್ಲ ಹದಗೆಟ್ಟಿವೆ. ಈಗ ಬೇಸಿಗೆಯಾಗಿರುವುದರಿಂದ ಸಮಸ್ಯೆ ಎದ್ದು ಕಾಣುತ್ತಿಲ್ಲ, ಒಮ್ಮೆ ಮಳೆ ಶುರುವಾಯಿತೆಂದರೆ ಎಲ್ಲೆಡೆ ನೀರು ತುಂಬಲಿದೆ ಎನ್ನುತ್ತಾರವರು.
ಮುಸ್ಲಿಂ ಮತ್ತು ವ್ಯಾಪಾರಿಗಳತ್ತ ಆಪ್-ಕಾಂಗ್ರೆಸ್: 15 ಲಕ್ಷ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 20 ಪ್ರತಿಶತ ಮುಸ್ಲಿಂ ಮತದಾರರಿದ್ದಾರೆ, ಆಪ್ ಮತ್ತು ಕಾಂಗ್ರೆಸ್ ಈ ಸಮುದಾಯದ ಓಲೈಕೆಯಲ್ಲಿ ತೊಡಗಿವೆ. ಆದರೆ ಈ ಅಂಶ ಬಿಜೆಪಿಗೆ ವರವಾಗಲೂಬಹುದು. ಆಪ್-ಕಾಂಗ್ರೆಸ್ ಏನಾದರೂ ಮೈತ್ರಿ ಮಾಡಿಕೊಂಡಿದ್ದರೆ ಮತಗಳಿಕೆಯಲ್ಲಿ ಅವಕ್ಕೆ ಮೇಲುಗೈ ಸಿಗುತ್ತಿತ್ತೇನೋ, ಈಗ ಮುಸ್ಲಿಂ ಮತದಾರರು ಯಾರಿಗೆ ಓಟು ನೀಡಬೇಕೆಂದು ಗೊಂದಲದಲ್ಲಿದ್ದಾರೆ. ಇನ್ನು ಜಿಎಸ್‌ಟಿ ಮತ್ತು ನೋಟ್ಬಂದಿಯಿಂದಾಗಿ ಚಾಂದ್‌ನೀ ಚೌಕದ ಬೆನ್ನೆಲುಬೇ ಮುರಿದುಹೋಗಿದ್ದು, ಈ ಬಾರಿ ಜನರು ಬಿಜೆಪಿಯತ್ತ ತಿರುಗಿಯೂ ನೋಡುವುದಿಲ್ಲ ಎನ್ನುವುದು ಇವೆರಡೂ ಪಕ್ಷಗಳ ವಾದ.
ಚಾಂದ್‌ನೀ ಚೌಕ್‌ನ ಬಟ್ಟೆ ವ್ಯಾಪಾರಿ ಕಿಶನ್‌ಚಂದ್ ‘ಅಮರ್ ಉಜಾಲಾ’ ಪತ್ರಿಕೆಗೆ ಹೇಳಿದ್ದು ಹೀಗೆ: ”ನೋಟ್ಬಂದಿ ಮತ್ತು ಜಿಎಸ್‌ಟಿಯ ಹೊಡೆತದಿಂದ ಮೇಲೇಳಲು ನಮಗೆ ಆಗಿಲ್ಲ. ಲಾಭವಂತೂ ಬಿಲ್ಕುಲ್ ನಿಂತುಬಿಟ್ಟಿದೆ. ಕಳೆದ 3 ವರ್ಷಗಳಿಂದ ಬಹಳ ಕಷ್ಟವನ್ನು ನೋಡಿದ್ದೇವೆ.”
ಇನ್ನು ಇದೇ ಕ್ಷೇತ್ರದ ರಾಂಪುರ ಮೇನ್ ಮಾರುಕಟ್ಟೆಯ ನರೇಶ್ ಗೌರ್ ಎನ್ನುವ ವ್ಯಾಪಾರಿ ಹೇಳುತ್ತಾರೆ-”ಜಿಎಸ್‌ಟಿಯಿಂದ ಎಲ್ಲರಿಗೂ ಪೆಟ್ಟು ಬಿದ್ದಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಪಾಕಿಸ್ತಾನಕ್ಕೆ ಪೆಟ್ಟು ಕೊಟ್ಟು ಮೋದೀಜಿ ಒಳ್ಳೇ ಕೆಲಸ ಮಾಡಿದ್ದಾರೆ. ಹೀಗಾಗಿ ಜನರು ಮೋದಿ ಪರವಿದ್ದಾರೆ. ಇವೆಲ್ಲದರೊಟ್ಟಿಗೆ ಡಾ. ಹರ್ಷವರ್ಧನ್ ಅವರಿಗೂ ಮಿಸ್ಟರ್ ಕ್ಲೀನ್, ವರ್ಕೋಹಾಲಿಕ್ ಎನ್ನುವ ವರ್ಚಸ್ಸು ಇದೆ. ಹೀಗಾಗಿ, ಡಾಕ್ಟರ್‌ಜೀಗೆ ಮತ್ತೂಂದು ಚಾನ್ಸ್ ಸಿಗಬಹುದು” ಎನ್ನುವುದು ಗೌರ್ ವಾದ.
ಡಾ. ಹರ್ಷವರ್ಧನ್ ಅವರು ಈ ಬಾರಿಯೂ ಆರಾಮವಾಗಿ ಗೆಲುವು ಸಾಧಿಸುವ ಭರವಸೆಯಲ್ಲಿ ಇದ್ದಾರೆ. ಅವರು ಕಾಂಗ್ರೆಸ್ ಮತ್ತು ಆಪ್ ಅಭ್ಯರ್ಥಿಯನ್ನು ಅಷ್ಟು ಗಂಭೀರವಾಗಿ ಪೈಪೋಟಿದಾದರೆಂದು ಪರಿಗಣಿಸುತ್ತಲೇ ಇಲ್ಲ ಎನ್ನುವುದು ರಾಜಕೀಯ ಪಂಡಿತರ ವಾದ. ಆದರೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪಂಕಜ್ ಗುಪ್ತಾ, ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ, ”ಈಗ ಸಮರವಿರುವುದು ‘ಬಡೇ ನಾಮ್'(ದೊಡ್ಡ ಹೆಸರು) ಮತ್ತು ಬಡೇ ಕಾಮ್(ದೊಡ್ಡ ಕೆಲಸ)ದ ಮಧ್ಯೆ. ಚಾಂದ್‌ನೀ ಚೌಕ್‌ನ ಜನರು ಈ ಬಾರಿ ಬಡೇ ಕಾಮ್ ಮಾಡಿರುವ ತಮ್ಮ ಸರ್ಕಾರಕ್ಕೆ ಮತ ನೀಡಲಿದ್ದಾರೆ” ಅಂತಾರೆ. ಮೇ 12ಕ್ಕೆ ಚಾಂದ್‌ನೀ ಚೌಕದಲ್ಲಿ ಮತದಾನ ನಡೆಯಲಿದೆ.