ಚಂಡೀಗಢ: ಪಂಜಾಬ್ ನ ಮೊಹಾಲಿಯಲ್ಲಿ ಇರುವ ಚಂಡೀಗಢ ವಿವಿಯ ವಿದ್ಯಾರ್ಥಿನಿಯರ ಹಾಸ್ಟೆಲ್ ನ ಕೆಲವರ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಡಿಯೋಗಳು ವೈರಲ್ ಆದ ಬಳಿಕ ಪ್ರತಿಭಟನೆ, ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಸೆಪ್ಟೆಂಬರ್ 24ರವರೆಗೆ ವಿವಿ ಬಂದ್ ಮಾಡಿ ಆದೇಶ ಹೊರಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಇರಾನ್ ನಲ್ಲಿ ಭುಗಿಲೆದ್ದ ಆಕ್ರೋಶ; ಬೀದಿಗಿಳಿದ ಮಹಿಳೆಯರು, ಕೂದಲು ಕತ್ತರಿಸಿ ಪ್ರತಿಭಟನೆ
ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯೊಬ್ಬಳು ವಾರ್ಡನ್ ನೆರವಿನೊಂದಿಗೆ ಸುಮಾರು 60 ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ತೆಗೆದಿದ್ದು, ಆ ವಿಡಿಯೋಗಳನ್ನು ಶಿಮ್ಲಾದಲ್ಲಿರುವ ಯುವಕನೊಬ್ಬನಿಗೆ ಕಳುಹಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಆಕ್ಷೇಪಾರ್ಹ ವಿಡಿಯೋಗಳನ್ನು ತೆಗೆದ ಹಾಗೂ ಅದಕ್ಕೆ ನೆರವು ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ ನಂತರ ವಿವಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದು. ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 24ರವರೆಗೆ ವಿವಿ ಬಂದ್ ಎಂದು ಘೋಷಿಸಿದ್ದರಿಂದ ಹಲವಾರು ವಿದ್ಯಾರ್ಥಿಗಳು ತಮ್ಮ ಲಗೇಜ್ ಗಳೊಂದಿಗೆ ಊರಿಗೆ ಮರಳುತ್ತಿದ್ದಾರೆ ಎಂದು ವರದಿ ಹೇಳಿದೆ.
ವಿಡಿಯೋ ವೈರಲ್ ಆದ ನಂತರ ಸಂತ್ರಸ್ತ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದರು. ಆದರೆ ಆತ್ಮಹತ್ಯೆ ಪ್ರಯತ್ನದ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.