ಚಂದೇರಿ (ಮಧ್ಯಪ್ರದೇಶ): ಬಾಲಿವುಡ್ ನಟ ಆಮೀರ್ ಖಾನ್ ಅವರ ಸಹಾಯದ ನಿರೀಕ್ಷೆಯಲ್ಲಿದ್ದ ಮಧ್ಯಪ್ರದೇಶದ ನೇಕಾರನ ಕುಟುಂಬವೊಂದು ಈಗ ಹೊಟ್ಟೆಪಾಡಿಗಾಗಿ “ಬೀಡಿ’ ಸುತ್ತುತ್ತಾ ದಿನದೂಡುವಂಥ ಸ್ಥಿತಿಗೆ ತಲುಪಿದೆ.
2009ರಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಮತ್ತು ನಟಿ ಕರೀನಾ ಕಪೂರ್ ತಮ್ಮ ತ್ರೀ ಈಡಿಯೆಟ್ಸ್ ಸಿನಿಮಾದ ಪ್ರಮೋಷನ್‌ಗೆಂದು ಚಂದೇರಿ ಪಟ್ಟಣದ ಪ್ರಾಣ್‌ಪುರ ಗ್ರಾಮಕ್ಕೆ ಆಗಮಿಸಿದ್ದರು. ಅನಿರೀಕ್ಷಿತವೆಂಬಂತೆ ಆಮೀರ್ ಮತ್ತು ಕರೀನಾ ಏಕಾಏಕಿ ನೇಕಾರ ಕಮಲೇಶ್ ಕೋರಿ ಅವರ ಮಣ್ಣಿನ ಮನೆಯೊಳಗೆ ಕಾಲಿಟ್ಟಾಗ, ಆ ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ.
ಕಮಲೇಶ್ ಅವರು ರಾತ್ರಿ ಬೆಳಗಾಗುವಷ್ಟರಲ್ಲಿ ತಮ್ಮೂರಿನಲ್ಲಿ ಸ್ಟಾರ್ ಆಗಿ ಬಿಟ್ಟಿದ್ದರು. ಅಂದು ಅವರ ಮನೆಯಲ್ಲೇ ಭೋಜನ ಸವಿದ ಆಮೀರ್, ಒಂದು ಚಿನ್ನದ ಉಂಗುರವನ್ನು ಕಮಲೇಶ್‌ಗೆ ಉಡುಗೊರೆಯಾಗಿ ನೀಡಿದ್ದರು. ಜತೆಗೆ, ನಾನು ಮುಂಬೈನಲ್ಲಿ ಶೋರೂಂವೊಂದನ್ನು ಆರಂಭಿಸುತ್ತೇನೆ. ಅಲ್ಲಿಗೆ ಎಲ್ಲ ಊರುಗಳ ನೇಕಾರರು ತಮ್ಮ ಉತ್ಪನ್ನಗಳನ್ನು ನೇರವಾಗಿ ತಂದು ಹರಾಜು ಹಾಕಬಹುದು ಅಥವಾ ಮಾರಾಟ ಮಾಡಬಹುದು ಎಂಬ ಆಶ್ವಾಸನೆಯನ್ನು ಆಮೀರ್ ನೀಡಿದ್ದರು.
ಇದನ್ನೂ ಓದಿ:ಇಬ್ರಾಹಿಂ ಹೇಳಿಕೆ ಗೊಂದಲ: ಸ್ಪಷನೆ ನೀಡಿದ ವೀರೇಂದ್ರ ಪಾಟೀಲ್ ಪುತ್ರ
ಆದರೆ, ಅವರು ತಮ್ಮ ವಾಗ್ಧಾನವನ್ನು ಇನ್ನೂ ಈಡೇರಿಸಿಲ್ಲ. ಕೊರೊನಾ ಎರಡನೇ ಅಲೆಯಲ್ಲಿ ಕಮಲೇಶ್‌ಗೆ ಸೋಂಕು ತಗುಲಿ, ಅಸುನೀಗಿದರು. ಅವರ ಇಬ್ಬರು ಮಕ್ಕಳು ಶಾಲೆಯ ಶುಲ್ಕ ಕಟ್ಟಲು ಹಣವಿಲ್ಲದೇ ಮನೆಯಲ್ಲೇ ಉಳಿದರು. ಬೇರೆ ದಾರಿಯಿಲ್ಲದೇ ಆ ಕುಟುಂಬ ಈಗ ಬೀಡಿ ಸುತ್ತಿ ಬದುಕು ಸಾಗಿಸುತ್ತಿದೆ. ಆಮೀರ್ ಕೊಟ್ಟ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಆ ಕಡೆಯಿಂದ ಯಾವುದೇ ಸ್ಪಂದನೆಯಿಲ್ಲ ಎನ್ನುತ್ತದೆ ಆ ಕುಟುಂಬ.