Advertisement

“3 ಪೆಗ್‌’ವಿವಾದಕ್ಕೆ ಕೊನೆಗೂ ತೆರೆ ಎಳೆದ ಚಂದನ್‌ ಶೆಟ್ಟಿ

04:53 PM Mar 03, 2018 | |

“3 ಪೆಗ್‌’ ಆಲ್ಬಂ ಸೂಪರ್‌ಹಿಟ್‌ ಆಗೋಕೆ ಕಾರಣ ಚಂದನ್‌ಶೆಟ್ಟಿ ಒಬ್ಬರೇ ಕಾರಣವಲ್ಲ, ತಾವೂ ಕಾರಣ ಅಂತ ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ ಇತ್ತೀಚೆಗೊಂದು ದಿನ ಹೇಳಿಕೊಂಡಿದ್ದರು. ಆ ಹಾಡು ಹಿಟ್‌ ಆಗುವುದರ ಜೊತೆಗೆ ಚಂದನ್‌ ಶೆಟ್ಟಿ ಅವರ ಹೆಸರು ಮಾತ್ರ ಕೇಳಿಬರುತ್ತಿದೆ, ಅಷ್ಟೆಲ್ಲಾ ಶ್ರಮ ಹಾಕಿದ್ದಕ್ಕೆ ಎಲ್ಲೂ ಹೆಸರು ಬಂದಿಲ್ಲ ಎಂದು ಬೇಸರಿಸಿಕೊಂಡಿದ್ದರು ವಿಜೇತ್‌.

Advertisement

ಇದೆಲ್ಲಾ ಆದಾಗ, ಚಂದನ್‌ ಶೆಟ್ಟಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಕೊನೆಗೂ ಅವರು ಮೌನ ಮುರಿದಿದ್ದಾರೆ. “ಸೀಜರ್‌’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ಮಾತನಾಡಿದ ಅವರು, “ನಾನೆಲ್ಲೂ ಆ ಹಾಡು ಮಾಡಿದ್ದು ನಾನು ಅಂತ ಹೇಳಿಕೊಂಡಿಲ್ಲ. ಆ ಹಾಡು ಮಾಡಿದ್ದು ವಿಜೇತ್‌. ನಾನು ಹಾಡಿದ್ದೇನೆ ಅಷ್ಟೇ. ಹಲವು ವರ್ಷಗಳ ಹಿಂದೆ ನಮ್ಮಿಬ್ಬರ ಭೇಟಿಯಾದಾಗ, ವಿಜೇತ್‌ ಒಂದು ಟ್ಯೂನ್‌ ಮಾಡಿಕೊಂಡಿದ್ದರು. ಕೇಳಿ ಖುಷಿಯಾಯಿತು.

ಅದಕ್ಕೆ ಸಾಹಿತ್ಯ ಬರೆದು ಹಾಡಿದ್ದೆ. ಆದರೆ, ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಕೊನೆಗೆ ಬಿಡುಗಡೆಯಾಗಿ ಜನಪ್ರಿಯವಾಯಿತು. ಆ ಹಾಡಿನ ಕೊನೆಯಲ್ಲಿ ಬರುವುದು ಮೂರೇ ಹೆಸರು. ಒಂದು ನಂದು, ಇನ್ನೊಂದು ಐಂದ್ರಿತಾದು, ಮತ್ತೂಂದು ವಿಜೇತ್‌ದು. ನಾನೆಲ್ಲೂ ಇದು ನನ್ನ ಹಾಡು ಅಂತ ಹೇಳಿಕೊಂಡಿಲ್ಲ. ಅಷ್ಟಕ್ಕೂ ಆ ಅಲ್ಬಂನ ನಿರ್ಮಾಪಕ ನಾನಲ್ಲ. ನಾನೊಬ್ಬ ಗಾಯಕ ಅಷ್ಟೇ.

ವಿಜೇತ್‌ಗೆ ಏನು ಸಿಗಬೇಕು ಎನ್ನುವುದು ತೀರ್ಮಾನಿಸಬೇಕಾಗಿದ್ದು ನಿರ್ಮಾಪಕರು’ ಎನ್ನುತ್ತಾರೆ ಚಂದನ್‌. ಈ ವಿಷಯವಾಗಿ ವಿಜೇತ್‌ ಜೊತೆಗೆ ಚಂದನ್‌ ಮಾತನಾಡಿದ್ದಾರಂತೆ. “ಪತ್ರಿಕೆಗಳಲ್ಲಿ ಈ ವಿಷಯ ಓದಿ ಆಶ್ಚರ್ಯವಾಯಿತು. ಕೊನೆಗೆ ವಿಜೇತ್‌ ಜೊತೆಗೆ ಮಾತನಾಡಿದೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಗೊಂದಲದಲ್ಲಿ ಏನೇನೋ ಮಾತನಾಡಿದೆ ಅಂತ ಹೇಳಿದ. ನನಗೆ ಇದನ್ನೆಲ್ಲಾ ಮುಂದುವರೆಸುವುದು ಇಷ್ಟವಿರಲಿಲ್ಲ.

ಅದೇ ಕಾರಣಕ್ಕೆ ಸುಮ್ಮನಾಗಿಬಿಟ್ಟೆ’ ಎನ್ನುತ್ತಾರೆ ಚಂದನ್‌. ಇನ್ನು “ಬಿಗ್‌ ಬಾಸ್‌’ನಲ್ಲಿ ಗೆದ್ದು ಬಂದ ನಂತರ ಅವರೊಂದು ಅಂತಾರಾಷ್ಟ್ರೀಯ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ರೊಮಾನಿಯಾದ ಸಂಗೀತಗಾರರೊಬ್ಬರ ಜೊತೆಗೆ ಕೈಜೋಡಿಸಿರುವ ಅವರು, ಕನ್ನಡ ಮತ್ತು ರೊಮಾನಿಯಾ ಭಾಷೆಗಳಲ್ಲೊಂದು ವೀಡಿಯೋ ಸಾಂಗ್‌ ಮಾಡುತ್ತಿದ್ದಾರೆ. ಆ ಹಾಡಿನಲ್ಲಿ ಎರಡೂ ಭಾಷೆಗಳನ್ನು ಬಳಸಲಾಗಿದೆಯಂತೆ.

Advertisement

“ಲವ್‌ ಯು ಬೇಬಿ’ ಎಂಬ ಹೆಸರಿನ ಈ ಆಲ್ಬಂ ಮಾಡುವುದರ ಕುರಿತಾಗಿ ಈಗಾಗಲೇ ಮಾತುಕತೆಯಾಗಿದೆ. ಸದ್ಯದಲ್ಲೇ ಹಾಡು ಬರಲಿದೆ’ ಎನ್ನುತ್ತಾರೆ ಚಂದನ್‌. “ಬಿಗ್‌ ಬಾಸ್‌’ ಗೆಲುವಿನಿಂದ ಖುಷಿಯಾಗಿರುವ ಅವರು, “ನಾನು ಗೆಲ್ಲುವುದಕ್ಕೆ ಹೋಗಿರಲಿಲ್ಲ. 14 ವಾರಗಳ ಕಾಲ ಭಾಗವಹಿಸಿದರೆ, ಒಂದು ದೊಡ್ಡ ಮೊತ್ತ ಸಿಗುತ್ತದೆ. ಆ ಕಾರಣಕ್ಕೆ ನಾನು 14 ವಾರಗಳ ಕಾಲ ಇರಬೇಕು ಎಂದು ತೀರ್ಮಾನಿಸಿದ್ದೆ.

ಅದರಂತೆ 14 ವಾರಗಳ ಕಾಲ ಇದ್ದೆ. ಅದೇ ನನಗೆ ಅತ್ಯಂತ ದೊಡ್ಡ ಖುಷಿ. ಹಾಗಾಗಿ “ಬಿಗ್‌ ಬಾಸ್‌’ ಕಾರ್ಯಕ್ರಮದಲ್ಲಿ ನಾನು ಗೆದ್ದೆ ಎಂದು ಗೊತ್ತಾದಾಗ ನನಗೇನೂ ಅನಿಸಲಿಲ್ಲ. ನನಗೆ ಮುಖ್ಯವಾಗಿದ್ದಿದ್ದು 14 ವಾರಗಳ ಕಾಲ ಅಲ್ಲಿದ್ದು, ಸಂಭಾವನೆಯನ್ನು ಪಡೆದು ವಾಪಸ್ಸಾಗುವುದು. ಆದರೆ, “ಬಿಗ್‌ ಬಾಸ್‌’ನಲ್ಲಿ ವಿಜೇತನಾಗಿ 35 ಲಕ್ಷ ಗೆದ್ದಿದ್ದು ಇನ್ನಷ್ಟು ಖುಷಿಯಾಯ್ತು’ ಎನ್ನುತ್ತಾರೆ ಅವರು. ಸದ್ಯಕ್ಕೆ ಹಾಡು ಮತ್ತು ಸಂಗೀತ ನಿರ್ದೇಶನದಲ್ಲಿ ಬಿಝಿಯಾಗಿರುವ ಚಂದನ್‌ ಎರಡು ವಿಷಯಗಳಿಗೆ ಸದ್ಯಕ್ಕೆ ನೋ ಎನ್ನುತ್ತಾರೆ.

ಒಂದು ಹೀರೋ ಆಗುವುದು ಮತ್ತು ಎರಡನೆಯದು ಮದುವೆ ಆಗುವುದು. ಕೆಲವು ದಿನಗಳಿಂದ ಚಂದನ್‌ ಹೀರೋ ಆಗುತ್ತಾರಂತೆ, ಮದುವೆಯಾಗುತ್ತಾರಂತೆ ಎಂಬ ಸುದ್ದಿ ಬರುತ್ತಲೇ ಇದೆ. ಆದರೆ, ಅವೆಲ್ಲಾ ಸುಳ್ಳು. ಹೀರೋ ಆದರೆ ಮತ್ತು ಮದುವೆ ಆದರೆ ಕೆಲಸದ ಮೇಲೆ ಫೋಕಸ್‌ ಇರುವುದಿಲ್ಲ ಎಂಬ ಕಾರಣಕ್ಕೆ ಇನ್ನೂ ಎರಡ್ಮೂರು ವರ್ಷಗಳ ಕಾಲ ಇವೆರೆಡೂ ವಿಷಯಗಳಿಂದ ದೂರ ಇರುವುದಕ್ಕೆ ಅವರು ತೀರ್ಮಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next