ಬೆಂಗಳೂರು: ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ ಸಿಂಹ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ನಡೆಯುತ್ತಿದ್ದ ವಾಗ್ವಾದ ಮತ್ತೆ ತಾರಕಕ್ಕೆ ಏರುವ ಲಕ್ಷಣ ಕಾಣುತ್ತಿದ್ದು, ಚಾಮುಂಡಿ ಬೆಟ್ಟಕ್ಕೆ ಮೂಲಸೌಕರ್ಯ ಕಲ್ಪಿಸಲು ಸಿದ್ದರಾಮಯ್ಯ ಸರಕಾರ ಬಿಡುಗಡೆ ಮಾಡಿದ್ದು, ಭಕ್ತರ ಹುಂಡಿ ದುಡ್ಡಾ ಎಂಬ ಚರ್ಚೆ ಪ್ರಾರಂಭವಾಗಿದೆ.
ಈ ಚರ್ಚೆಗೆ ಕಾರಣವಾದ ದಾಖಲೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಾಮುಂಡಿ ಬೆಟ್ಟಕ್ಕೆ ಸಮಗ್ರಮೂಲ ಸೌಕರ್ಯ ನಿರ್ಮಾಣ, ಕಮರ್ಷಿಯಲ್ ಕಾಂಪ್ಲೆಕ್ಸ್, ಡಾರ್ಮೆಟರಿ, ಕ್ಯೂಲೈನ್, ಶೌಚಾಲಯ, ಬಹುಹಂತದ ಪಾರ್ಕಿಂಗ್ ವ್ಯವಸ್ಥೆಗೆ 2016ರಲ್ಲಿ ಟೆಂಡರ್ ಕರೆಯಲಾಗಿತ್ತು. ಇದಕ್ಕಾಗಿ ವಿನಿಯೋಗಿಸಿದ ಹಣ ಭಕ್ತರು ಚಾಮುಂಡಿ ಹುಂಡಿಗೆ ಹಾಕಿದ ಕಾಣಿಕೆ ದುಡ್ಡಾಗಿದೆ.
ಇದನ್ನೂ ಓದಿ:ಕಾಡಮಲ್ಲಿಗೆ ಖ್ಯಾತಿಯ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ
ಕಾರ್ಯಾದೇಶದಲ್ಲೇ ಕಾಮಗಾರಿ ಹಣವನ್ನು (ಹೆಡ್ ಆಫ್ ಅಕೌಂಟ್) ಡೆಪಾಸಿಟರ್ ಕಾಂಟ್ರಿಬ್ಯೂಶನ್ ಅಂದರೆ ಹುಂಡಿ ಹಣ ಎಂದೇ ನಮೂದಿಸಲಾಗಿದೆ. ಹೀಗಾಗಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ನಮ್ಮ ಸರಕಾರ ಅನುದಾನ ನೀಡಿತ್ತು ಎಂದು ಸಿದ್ದರಾಮಯ್ಯ ಹೇಳಿರುವುದು ಸುಳ್ಳು. ಭಕ್ತರ ಹುಂಡಿ ಹಣವನ್ನೇ ಕಾಮಗಾರಿಗೆ ಜೋಡಿಸಿ ಇದು ನಮ್ಮ ಸರಕಾರದ ಸಾಧನೆ ಎಂದು ಸಿದ್ದರಾಮಯ್ಯ ಮೈಲೇಜ್ ಪಡೆದು ಕೊಂಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಮೈಸೂರು ಅಭಿವೃದ್ಧಿ ವಿಚಾರದಲ್ಲಿ ನಾನು ಸಿದ್ದರಾಮಯ್ಯ ಅವರ ಜತೆ ಚರ್ಚೆಗೆ ಸಿದ್ದ ಎಂದು ಸಂಸದ ಪ್ರತಾಪ ಸಿಂಹ ಇತ್ತೀಚೆಗೆ ಸವಾಲು ಹಾಕಿದ್ದರು. ಆದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಯಾವುದೇ ನಾಯಕರೂ ಸವಾಲು ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಈ ದಾಖಲೆ ಹೊರ ಬಿದ್ದಿದೆ.