ಹುಬ್ಬಳ್ಳಿ: “ಟೂ+ ಒನ್ ಹಾಗೂ ಒನ್+ ಒನ್ ಎಂದು ಒಂದೇ ಕುಟುಂಬದವರಿಗೆ ಟಿಕೆಟ್ ನೀಡುವ ಹಾಗೂ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಬಿಜೆಪಿ ಮುಖಂಡರು ಕಾಂಗ್ರೆಸ್ ಬಗ್ಗೆ ಮಾತನಾಡುವ ಬದಲು ತಮ್ಮ ಪಕ್ಷದಲ್ಲಿನ ಪರಿಸ್ಥಿತಿ ಅರಿತು ಮಾತನಾಡುವುದು ಸೂಕ್ತ ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರೇ ಸೋಲಿನ ಭೀತಿಯಿಂದ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಮಗ, ಶಶಿಕಲಾ ಜೊಲ್ಲೆ ಅವರ ಪತಿ, ಉಮೇಶ ಕತ್ತಿ ಸಹೋದರನಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ.
ಯಡಿಯೂರಪ್ಪ ಮಗ ಬಿ.ವೈ.ರಾಘವೇಂದ್ರ ಇದಕ್ಕೆ ಹೊರತಾಗಿಲ್ಲ. ತಮ್ಮ ಪಕ್ಷದಲ್ಲೇ ಟೂ ಪ್ಲಸ್ ಒನ್ ಹಾಗೂ ಒನ್ ಪ್ಲಸ್ ಒನ್ ಇರುವಾಗ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ’ ಎಂದರು.
“ನಾನು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಅನುಕೂಲವಾಗಲಿ ಎನ್ನುವುದಕ್ಕೆ ವಿನಃ ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿಯಿಂದಲ್ಲ. ಚಾಮುಂಡೇಶ್ವರಿಯಲ್ಲಿ ಎಷ್ಟೇ ಒಳ ಒಪ್ಪಂದ ಮಾಡಿಕೊಂಡರೂ ನನ್ನ ಕ್ಷೇತ್ರದ ಜನರು ಕೈ ಬಿಡಲ್ಲ’ ಎಂದರು.
ಬಿಜೆಪಿಯವರೇ ಟಿಕೆಟ್ ತಪ್ಪಿಸಿದರು: ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಒಂದು ತಿಂಗಳಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಟಿಕೆಟ್ ತಪ್ಪಲಿಕ್ಕೆ ಬಿಜೆಪಿಯ ಸಂತೋಷ್, ಅನಂತಕುಮಾರ್, ಜಗದೀಶ ಶೆಟ್ಟರ್ ಹಾಗೂ ಈಶ್ವರಪ್ಪನವರೇಕಾರಣ. ಇಷ್ಟೆಲ್ಲಾ ನೋಡಿದ ಮೇಲೂ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ ಎನಿಸುತ್ತಿಲ್ಲ.
ಎಲ್ಲರೂ ಒಗ್ಗಟ್ಟಿನಿಂದಿದ್ದರೆ ವಿಜಯೇಂದ್ರನಿಗೆ ಟಿಕೆಟ್ ತಪ್ಪುತ್ತಿರಲಿಲ್ಲ. ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪನವರಿಂದ ಸಾಧ್ಯವಾಗಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.