ಮೈಸೂರು: ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಪ್ರಯುಕ್ತ ಚಾಮುಂಡಿಬೆಟ್ಟ ಸೇರಿದಂತೆ ಮೈಸೂರು ನಗರದ ವಿವಿಧೆಡೆ ಚಾಮುಂಡೇಶ್ವರಿ ಪ್ರತಿಷ್ಠಾಪನೆ, ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ನಡೆಯಿತು.
ಚಾಮುಂಡೇಶ್ವರಿ ಟ್ರಸ್ಟ್ ವತಿಯಿಂದ ವಿಜಯ ನಗರದ ಯೋಗಾ ನರಸಿಂಹಸ್ವಾಮಿ ದೇವಸ್ಥಾನ ಎದುರು ಚಾಮುಂಡೇಶ್ವರಿ ಪ್ರತಿಷ್ಠಾಪಿಸಿ, ಸಂಕಲ್ಪ ಪುಣ್ಯಾಹಃ, ಗಣಪತಿ ಆದಿತ್ಯಾದಿ ನವಗ್ರಹ ಪೂಜೆ, ರಾಕ್ಷೊàಘ್ನ, ದುರ್ಗಾಹೋಮ, ಅಭಿಷೇಕ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ಮಾಡಲಾಯಿತು.
ನಾಡಪ್ರಭು ಭ್ರಾತೃತ್ವ ಸಂಘದಿಂದ ಆಲನಹಳ್ಳಿಯ ಎಚ್.ಡಿ.ದೇವೇಗೌಡ ವೃತ್ತದಲ್ಲಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಆಚರಿಸಲಾಯಿತು. ಮಾರುತಿ ಸ್ನೇಹ ಬಳಗದಿಂದ ರೇಣುಕಾಚಾರ್ಯ ದೇವಸ್ಥಾನ ರಸ್ತೆಯಲ್ಲಿ ವರ್ಧಂತಿ ಮಹೋತ್ಸವ ಅಂಗವಾಗಿ ವಿಶೇಷ ಪೂಜೆ ಮಾಡಲಾಯಿತು. ಕ್ಯಾತಮಾರನಹಳ್ಳಿಯ ಟೆಂಟ್ ಸರ್ಕಲ್ ಬಳಿ 5ನೇ ವರ್ಷದ ಗಂಗಾದೇವಿ ಪೂಜಾ ಮಹೋತ್ಸ ಹಾಗೂ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಆಚರಿಸಲಾಯಿತು.
ಅಲ್ಲದೆ, ನಗರದ ವಿವಿಧ ಕಡೆಗಳಲ್ಲಿ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ನಡೆಯಿತು. ಚಾಮುಂಡಿಬೆಟ್ಟದ ಬಸ್ ನಿಲ್ದಾಣದ ದೂರದಲ್ಲಿ ಗೂಡ್ಸ್ ಆಟೋಗಳಲ್ಲಿ ತಂದಿದ್ದ ಬಾತ್, ಚಿತ್ರಾನ್ನ, ಮೊಸರನ್ನ, ರೈಸ್ ಬಾತ್ ವಿತರಿಸಲಾಯಿತು. ಬೆಟ್ಟದಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದರು.
ನಗರದ ಅಗ್ರಹಾರ ವೃತ್ತ, 101 ಗಣಪತಿ ದೇವಸ್ಥಾನ ವೃತ್ತ, ಚಾಮರಾಜ ಜೋಡಿ ರಸ್ತೆ, ದಿವಾನ್ಸ್ ರಸ್ತೆ, ಗಾಂಧಿವೃತ್ತ, ಜೆ.ಪಿ.ನಗರ ಗೊಬ್ಬಳಿಮರ ವೃತ್ತ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಕೆ.ಜಿ.ಕೊಪ್ಪಲು ಮೊದಲಾದ ಬಡಾವಣೆಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದ ನಂತರ ಪ್ರಸಾದ ವಿತರಿಸಲಾಯಿತು. ಕೆಲವು ಭಕ್ತರು ಸ್ವಯಂಪ್ರೇರಿತವಾಗಿ ಗೂಡ್ಸ್ ಆಟೋಗಳಲ್ಲಿ ಪ್ರಸಾದ ತಂದು ವಿತರಿಸಿದರು.