ಮೈಸೂರು: ರಾಜಕೀಯ ಆರಂಭಿಸಿದ ಕ್ಷೇತ್ರದಲ್ಲೇ ಕೊನೇ ಚುನಾವಣೆ ಎದುರಿಸಬೇಕೆಂದು ಮತ್ತೆ ಬಂದಿರುವ ಸಿಎಂ ಸಿದ್ದರಾಮಯ್ಯ, ಅವರನ್ನು ಹೇಗಾದರೂ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್‌ಗೆ ಬಿಜೆಪಿ ತಂತ್ರಗಾರಿಕೆಯ ಬೆಂಬಲ… ಆ ಮೂಲಕ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ.
7 ಸ್ಪರ್ಧೆಯಲ್ಲಿ 5 ಬಾರಿ ಗೆಲುವು: 1983ರಲ್ಲಿ ಲೋಕದಳ ಪಕ್ಷದಿಂದ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಪಕ್ಷದ ಬಿ ಫಾರಂ ಸಿಗದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ, 2006ರವರೆಗೆ ಇಲ್ಲಿ ಏಳು ಬಾರಿ ಸ್ಪರ್ಧಿಸಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡಿಕೊಂಡು ಬಂದ ಸಿದ್ದರಾಮಯ್ಯ, 2006ರಲ್ಲಿ ಕಾಂಗ್ರೆಸ್ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎದುರಾದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ 257 ಮತಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದರು.
ಕೊನೇ ಚುನಾವಣೆ: ಅದಾದ ಬಳಿಕ 2008ರ ವೇಳೆಗೆ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಹೊಸದಾಗಿ ರಚನೆಯಾದ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಲ್ಲಿಂದ ಎರಡು ಬಾರಿ ಆರಿಸಿ ಬಂದು ಮುಖ್ಯಮಂತ್ರಿಯೂ ಆಗಿದ್ದಾರೆ. ಇದೀಗ ತಮ್ಮ ಪುತ್ರ ಡಾ.ಯತೀಂದ್ರಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಕ್ಷೇತ್ರ ಬಿಟ್ಟು ಕೊಟ್ಟು, 12 ವರ್ಷಗಳ ನಂತರ ಬಂದಿರುವ ಸಿದ್ದುಗೆ ಚಾಮುಂಡೇಶ್ವರಿ ಕ್ಷೇತ್ರ ಕಬ್ಬಿಣದ ಕಡಲೆ ಎಂಬ ಸಂಗತಿ ಅರಿವಾಗುತ್ತಿದೆ. ಹೀಗಾಗಿ, ಪಕ್ಷದ ಹಿತದೃಷ್ಟಿ ಹೆಸರಿನಲ್ಲಿ ಕಡೇ ಕ್ಷಣದಲ್ಲಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ದಾರೆ.
ಭಾವನಾತ್ಮಕ ಅಸ್ತ್ರ: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವಿಗಾಗಿ ವಿಶೇಷ ಪ್ರಯತ್ನ ಹಾಕಿರುವ ಸಿದ್ದರಾಮಯ್ಯ, ರಾಜ್ಯ ಪ್ರವಾಸದ ನಡುವೆ ಬಿಡುವು ಸಿಕ್ಕಾಗಲೆಲ್ಲ ಮೈಸೂರಿಗೆ ಬಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಹೋದಲ್ಲೆಲ್ಲ ನಾನೀಗ ನಿಮ್ಮ ಹಳ್ಳಿಗೆ ಮುಖ್ಯಮಂತ್ರಿಯಾಗಿ ಬಂದಿದ್ದೇನೆ. ಈ ಚುನಾವಣೆಯಲ್ಲಿ ಗೆಲ್ಲಿಸಿದರೆ ನಿಮಗೆ ನನ್ನನ್ನು ಇನ್ನೊಂದು ಬಾರಿ ಮುಖ್ಯಮಂತ್ರಿ ಮಾಡುವ ಅವಕಾಶವಿದೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.
ಜಾತೀವಾರು ಲೆಕ್ಕಾಚಾರ: ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಲಿಂಗಾಯತ, ಕುರುಬರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಐದು ವರ್ಷಗಳ ಆಡಳಿತದಲ್ಲಿ ಒಕ್ಕಲಿಗ, ದಲಿತ ವಿರೋಧಿ ನೀತಿ ಅನುಸರಿಸಿದ್ದಾರೆಂದು ಪ್ರಚಾರ ಮಾಡಿ, ಈ ವರ್ಗದವರ ಮತಗಳನ್ನು ಕಾಂಗ್ರೆಸ್‌ನಿಂದ ದೂರ ಮಾಡಲಾಗುತ್ತಿದೆ. ಮಂತ್ರಿಮಂಡಲ ದಲ್ಲಿ ಮೊದಲ ಮೂರು ವರ್ಷ ಒಕ್ಕಲಿಗ ನಾಯಕರಿಗೆ ಪ್ರಭಾವಿ ಖಾತೆಗಳನ್ನು ನೀಡದೇ ಇರುವುದು, ದಲಿತ ಮುಖ್ಯಮಂತ್ರಿ ಕೂಗನ್ನು ಹತ್ತಿಕ್ಕಿದ್ದು, ವೀರಶೈವ- ಲಿಂಗಾಯತ ಧರ್ಮ ಪ್ರತ್ಯೇಕತೆ ಹೋರಾಟಕ್ಕೆ ಕಿಚ್ಚು ಹಚ್ಚಿದ ವಿಚಾರಗಳು ಹಳ್ಳಿಗಳಲ್ಲಿ ಚರ್ಚೆಯಾಗುತ್ತಿವೆ.
ಇನ್ನು, ಬಿಜೆಪಿ, ಜೆಡಿಎಸ್‌ಗೆ ಬಾಹ್ಯ ಬೆಂಬಲ ನೀಡಿ ಸಿದ್ದರಾಮಯ್ಯ ಅವರನ್ನು ಹಣಿಯುವ ಸಲುವಾಗಿ ಪಕ್ಷದ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಿಕೆ ಹೆಸರಲ್ಲಿ ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, 2006ರ ಉಪಚುನಾ ವಣೆಯ ಕಣವನ್ನು ನೆನಪಿಸುತ್ತಿದೆ.
ಎಚ್‌ಡಿಕೆಗೆ ಪ್ರತಿಷ್ಠೆ
ಇಲ್ಲಿನ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕುಮಾರಸ್ವಾಮಿ, ಜಿ.ಟಿ.ದೇವೇಗೌಡರನ್ನು ಗೆಲ್ಲಿಸಿಕೊಳ್ಳ ಲೇಬೇಕೆಂದು ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ. ದೇವೇಗೌಡರೂ ಕ್ಷೇತ್ರದಲ್ಲಿ ಮೂರ್‍ನಾಲ್ಕು ದಿನ ಪ್ರಚಾರ ಮಾಡುವವ ರಿದ್ದಾರೆ. ಒಕ್ಕಲಿಗ ಮತದಾರರ ಪ್ರಾಬಲ್ಯದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ ಎಂಬ ಅಂಶವನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗಿದೆ.
– ಗಿರೀಶ್ ಹುಣಸೂರು