Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಲ್‌ನಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 72 ಹುದ್ದೆಗಳಿಗೆ ನೇರ ನೇಮಕಾತಿ ಇತ್ತು. ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸಹಾಯಕ ವ್ಯವಸ್ಥಾಪಕ, ತಾಂತ್ರಿಕ ಅಧಿಕಾರಿ, ಉಗ್ರಾಣಾಧಿಕಾರಿ, ಕೃಷಿ ಅಧಿಕಾರಿ, ಆಡಳಿತಾಧಿಕಾರಿ ಮತ್ತಿತರ ಹುದ್ದೆಗಳಿಗೆ ಸುಮಾರು 5 ಸಾವಿರ ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಿಗೆ ಕಳೆದ ಆಗಸ್ಟ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಪರೀಕ್ಷಾ ವಿಧಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
Related Articles
Advertisement
ಅವ್ಯವಹಾರದ ತನಿಖೆಗೆ ಒತ್ತಾಯ: ಈ ಅವ್ಯವಹಾರದಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ಸಿ.ಎಸ್. ಗುರುಮಲ್ಲಪ್ಪ, ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಉಪ ವ್ಯವಸ್ಥಾಪಕ ಶ್ರೀಕಾಂತ್ ಭಾಗಿಯಾಗಿದ್ದಾರೆ. ಈ ಅವ್ಯವಹಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ನಿವೃತ್ತ ನ್ಯಾಯಾಧೀಶರಿಂದ ಅವ್ಯವಹಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ: ಸಮಿತಿಯ ಕಾರ್ಯದರ್ಶಿ ಡಿ.ಎನ್. ನಟರಾಜು ಮಾತನಾಡಿ, ಚಾಮುಲ್ ಉದ್ಘಾಟನೆಯ ವೇಳೆ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಹಿಂದಿನ ಶಾಸಕರು ಭರವಸೆ ನೀಡಿದ್ದರು. ಆದರೆ, ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ನ್ಯಾಯ ಸಿಗುವವರೆಗೂ ಒಕ್ಕೂಟದ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಎಲ್ಲರಿಗೂ ಒಂದೇ ಪ್ರಶ್ನೆ ಪತ್ರಿಕೆ: ಸಮಿತಿಯ ಉಪಾಧ್ಯಕ್ಷ ಎಂ.ಎಸ್. ಮಹದೇವಸ್ವಾಮಿ ಮಾತನಾಡಿ, ಎಲ್ಲ ವೃಂದದ ಹುದ್ದೆಗಳಿಗೂ ಒಂದೇ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಡ್ರೈವರ್ ಹುದ್ದೆಗೂ ಅದೇ ಪ್ರಶ್ನೆ ಪತ್ರಿಕೆ, ಉಪ ವ್ಯವಸ್ಥಾಪಕರ ಹುದ್ದೆಗೂ ಅದೇ ಪ್ರಶ್ನೆ ಪತ್ರಿಕೆ. ಅವ್ಯವಹಾರಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎಂದರು. ಈ ವೇಳೆ ಸಮಿತಿಯ ಮಾದಾಪುರ ರವಿಕುಮಾರ್ ಹಾಜರಿದ್ದರು.
ಕೋಲಾರ ಹಾಲು ಒಕ್ಕೂಟದ ಎಂಡಿ ಮಗನಿಗೆ ಉನ್ನತ ಹುದ್ದೆ!: ಚಾಮುಲ್ ಅಧ್ಯಕ್ಷ ಸಿ.ಎಸ್. ಗುರುಮಲ್ಲಪ್ಪ ಅವರ ಮೊಮ್ಮಗನಿಗೆ ಮೊದಲ ರ್‍ಯಾಂಕ್ ನೀಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಕೋಲಾರ ಹಾಲು ಒಕ್ಕೂಟದ ಎಂ.ಡಿ. ತಿಪ್ಪಾರೆಡ್ಡಿ ಅವರ ಮಗನಿಗೆ ಸಹಾಯಕ ವ್ಯವಸ್ಥಾಪಕ ಹುದ್ದೆ ನೀಡಲಾಗಿದೆ. ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಅವರ ಮಗನಿಗೆ, ಚಾ.ನಗರ ತಾಪಂ ಮಾಜಿ ಅಧ್ಯಕ್ಷ ಎಚ್.ವಿ. ಚಂದ್ರು ಅವರ ಪುತ್ರನಿಗೆ ಹುದ್ದೆ ನೀಡಲಾಗಿದೆ ಎಂದು ವೆಂಕಟರಮಣಸ್ವಾಮಿ ಆರೋಪಿಸಿದರು.
ಸಹಾಯಕ ವ್ಯವಸ್ಥಾಪಕ ಹುದ್ದೆಗೆ 97,100 ರೂ. ವೇತನ, ತಾಂತ್ರಿಕ ಅಧಿಕಾರಿಗಳಿಗೆ 83,900 ರೂ. ಚಾಲಕ ಹುದ್ದೆಗೆ 40 ಸಾವಿರ ರೂ. ವೇತನವಿದೆ. ಎಲ್ಲ ಹುದ್ದೆಗಳಿಗೂ ಒಟ್ಟು ಪ್ರತಿ ತಿಂಗಳೂ 2 ಕೋಟಿ ರೂ. ವೇತನಕ್ಕೇ ಖರ್ಚಾಗಲಿದೆ. ಹೀಗಿರುವಾಗ ರೈತರು ಹಾಲು ನೀಡಿ ಬೆಳೆಸಿದ ಚಾಮುಲ್ ಲಾಭದಲ್ಲಿ ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.